ಸ್ವಚ್ಛತೆ ಕಾಪಾಡಲು ಬೀದಿಬದಿ ಹೋಟೆಲ್‌ಗಳಿಗೆ ತಾಕೀತು

| Published : Nov 23 2025, 01:15 AM IST

ಸಾರಾಂಶ

ರಸ್ತೆ ಬದಿಯ ಹೋಟೆಲ್‌ಗಳಲ್ಲಿ ಸ್ವಚ್ಛತೆಯ ಕೊರತೆ ಕುರಿತು ಕಾನೂನು ಕ್ರಮದ ಎಚ್ಚರಿಕೆ ನೀಡಿದ ಅವರು, ವಾಹನ ಸಂಚಾರ,ಗಾಳಿಯಿಂದಾಗಿ ಧೂಳು, ರೋಗಾಣುಗಳು ಆಹಾರದ ಮೇಲೆ ಬೀಳುವುದರಿಂದ ಜನರ ಆರೋಗ್ಯದ ಮೇಲೆ ದುಷ್ಟರಿಣಾಮವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರತಾಲೂಕು ಆರೋಗ್ಯಇಲಾಖೆ, ಆಹಾರ ಸುರಕ್ಷತಾ ಮತ್ತು ಔಷಧ ನಿಯಂತ್ರಣ ವಿಭಾಗ, ನಗರಸಭೆ ಕೋಲಾರ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಇವರ ಜಂಟಿ ಸಹಯೋಗದೊಂದಿಗೆ ಕೋಲಾರದ ವಿವಿಧೆಡೆ ಅಂಗಡಿ, ಬೀದಿ ಬದಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕಾನೂನು ಬಾಹಿರ ವ್ಯಾಪಾರ ವಹಿವಾಟು, ಸ್ವಚ್ಛತೆ ಕುರಿತು ಕಾನೂನು ಕ್ರಮದ ಎಚ್ಚರಿಕೆಯೊಂದಿಗೆ ಜಾಗೃತಿ ಮೂಡಿಸಲಾಯಿತು.ತಂಡದ ನೇತೃತ್ವ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಬಂಗಾರಪೇಟೆ ರಸ್ತೆ, ಬಸ್ ನಿಲ್ದಾಣದ ಸುತ್ತಮುತ್ತ ರಸ್ತೆ ಬದಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ, ಆಹಾರದ ಗುಣಮಟ್ಟ ಕಾಪಾಡಬೇಕು, ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ತಾಕೀತು ಮಾಡಿದರು.ರಸ್ತೆ ಬದಿಯ ಹೋಟೆಲ್‌ಗಳಲ್ಲಿ ಸ್ವಚ್ಛತೆಯ ಕೊರತೆ ಕುರಿತು ಕಾನೂನು ಕ್ರಮದ ಎಚ್ಚರಿಕೆ ನೀಡಿದ ಅವರು, ವಾಹನ ಸಂಚಾರ,ಗಾಳಿಯಿಂದಾಗಿ ಧೂಳು, ರೋಗಾಣುಗಳು ಆಹಾರದ ಮೇಲೆ ಬೀಳುವುದರಿಂದ ಜನರ ಆರೋಗ್ಯದ ಮೇಲೆ ದುಷ್ಟರಿಣಾಮವಾಗುತ್ತದೆ ಎಂದು ತಿಳಿಸಿ, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.ಅನೇಕ ಸಾಂಕ್ರಾಮಿಕ ರೋಗಗಳಿಗೂ ಇದು ಕಾರಣವಾಗಬಹುದಾದ ಆತಂಕ ವ್ಯಕ್ತಪಡಿಸಿದ ಅವರು, ಆಹಾರದ ಮೇಲೆ ನೊಣಗಳನ್ನು ಓಡಾಡುತ್ತಿರುವ ಕುರಿತು ಹೋಟೆಲ್ ಮಾಲೀಕರ ಗಮನಕ್ಕೆ ತಂದು ಇದರಿಂದ ಆಗಬಹುದಾದ ಅನಾರೋಗ್ಯಕರ ವಾತಾವರಣದ ಕುರಿತು ಮಾರ್ಗದರ್ಶನ ನೀಡಿ ಸರಿಪಡಿಸಿಕೊಳ್ಳಲು ಸೂಚಿಸಿದರು.ಶಾಲೆ, ಕಾಲೇಜು ಸುತ್ತ 200 ಮೀಟರ್ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ಅಪರಾಧ ಎಂದು ಎಚ್ಚರಿಸಿದ ಅವರು, ಗುಟ್ಕಾ ಪಾನ್ ಪರಾಗ್, ಬೀಡಿ,ಸಿಗರೇಟು ಮತ್ತಿತರ ವಸ್ತುಗಳಿಂದಾಗುವ ದುರಂತಗಳ ಕುರಿತು ಅರಿವು ಮೂಡಿಸಿ, ಕ್ಯಾನ್ಸರ್, ಉಸಿರಾಟದ ತೊಂದರೆಯಂತಹ ಮಾರಣಾಂತಿಕ ರೋಗಗಳು ಬರುವುದರಿಂದ ಇಂತಹ ಉತ್ಪನ್ನಗಳನ್ನು ಬಳಸದಿರಿ. ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಬಾರದು ಎಂದು ತಾಕೀತು ಮಾಡಿದರು.ಆಹಾರ ಸುರಕ್ಷತಾ ಮತ್ತು ಔಷಧ ನಿಯಂತ್ರಣ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್ ಅಂಗಡಿಗಳ ಮಾಲೀಕರಿಗೆ ಅರಿವು ಮೂಡಿಸಿ, ಗೋಬಿ ಸೇರಿದಂತೆ ಆಹಾರ ತಯಾರಿಕೆಯಲ್ಲಿ ಕೃತಕಬಣ್ಣಗಳನ್ನು ಬಳಸಿದರೆ ದಂಡ ವಿಧಿಸುವುದಲ್ಲದೇ ಶಿಕ್ಷೆಗೆ ಒಳಗಾಗುತ್ತೀರಿ ಎಂದು ಎಚ್ಚರಿಸಿದರು.ಆಹಾರ ಸುರಕ್ಷತಾ, ಗುಣಮಟ್ಟ ಕಾಯ್ದೆ, ಕೋಪ್ಟಾ ಕಾಯ್ದೆ, ಪ್ಲಾಸ್ಟಿಕ್ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಿದ ಅವರು, ಈಗಾಗಲೇ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದೆ ಆದರೂ ಅಂಗಡಿಗಳವರು ಪ್ಲಾಸ್ಟಿಕ್ ಬಳಸುತ್ತಿದ್ದೀರಿ, ಇದು ನಿಲ್ಲಿಸಿ ಇಲ್ಲವಾದಲ್ಲಿ ಕಠಿಣಕಾನೂನು ಕ್ರಮ ಎದುರಿಸಬೇಕಾದೀತು ಎಂದು ತಿಳಿಸಿದರು.ನಗರ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅವರು, ಕೋಲಾರ ನಗರ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವ ವಿರುದ್ಧ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದ್ದು, ಕೂಡಲೇ ಅಗತ್ಯ ಅನುಮತಿ, ಪರವಾನಗಿ ಪಡೆದುಕೊಳ್ಳಲು ಕಿವಿಮಾತು ಹೇಳಿದರು.ಈ ವೇಳೆ ಆಹಾರ ಸುರಕ್ಷತಾ ಮತ್ತು ಔಷಧ ನಿಯಂತ್ರಣ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್, ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಮಹಮದ್ ಪಿ., ಸಮಾಜ ಕಾರ್ಯಕರ್ತರಾದ ಮಂಜುನಾಥ್ ಜಿ .ಎನ್ ಕೋಲಾರ ನಗರಸಭೆಯ ಸಿಬ್ಬಂದಿ ಭಾಗವಹಿಸಿದ್ದರು.