ನವಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಕೈ ಬಲಪಡಿಸಿ

| Published : Mar 16 2024, 01:56 AM IST

ಸಾರಾಂಶ

ರಾಮನಗರ: ಪ್ರಧಾನಿ ಮೋದಿಯವರು ನಿಸ್ವಾರ್ಥ ಸೇವೆಯೊಂದಿಗೆ ಹೊಸ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸುವ ಕೆಲಸ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ರಾಮನಗರ: ಪ್ರಧಾನಿ ಮೋದಿಯವರು ನಿಸ್ವಾರ್ಥ ಸೇವೆಯೊಂದಿಗೆ ಹೊಸ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸುವ ಕೆಲಸ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೋದಿಯವರು ಕರೆ ನೀಡಿದಂತೆ ದೇಶದಲ್ಲಿ 400 ಸ್ಥಾನಗಳನ್ನು ಗೆಲ್ಲಬೇಕಿದೆ. ಸಂಸತ್ ಚುನಾವಣೆ ಧರ್ಮಯುದ್ಧವಾಗಿದ್ದು, ಅದನ್ನು ನಾವು ಜಯಿಸಬೇಕು. ನನಗೆ ಗುಲಾಬಿ ಕೊಟ್ಟು ಸ್ವಾಗತಿಸಿದ ಎರಡೂ ಪಕ್ಷಗಳ ಕಾರ್ಯಕರ್ತರು ಪ್ರೇಮಿಗಳಂತೆ ಕಾಣುತ್ತಿದ್ದಾರೆ. ಬೂತ್ ಕಾರ್ಯಕರ್ತರು ಗಡಿಯಲ್ಲಿ ನಿಂತು ದೇಶ ಕಾಯುವ ಯೋಧರಿದ್ದಂತೆ. ಅವರ ನಿಸ್ವಾರ್ಥ ಸೇವೆಯಿಂದ ಮಾತ್ರ ಮೋದಿ ಅವರ ಕರೆಯಂತೆ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯ ಎಂದು ತಿಳಿಸಿದರು.

ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಬಂದಿದೆ. ಈ ಚುನಾವಣೆಯಲ್ಲಿ ಆರೋಗ್ಯಕರ ಸ್ಪರ್ಧೆ ನಡೆಯಬೇಕು. ಸುಳ್ಳು ಎಂಬುದು ಇತ್ತೀಚೆಗೆ ವೃತ್ತಿಯಾಗಿದೆ. ಬಲೆ ಹಾಕುವ ಕೌಶಲವಿದ್ದರೆ ಮೀನು ಸಿಗುತ್ತದೆ. ಈಜು ಗೊತ್ತಿದ್ದರೆ ಸಾಗರದ ಮುತ್ತು ಸಿಗುತ್ತದೆ. ಏನೂ ಗೊತ್ತಿಲ್ಲದಿದ್ದರೆ ಕೇವಲ ನೆಲ ಸಿಗುತ್ತದೆ. ಈ ಚುನಾವಣೆಯಲ್ಲಿ ನಾವು ಒಳ್ಳೆಯ ಈಜುಗಾರರಾಗಬೇಕು. ಆಗ ಮಾತ್ರ ನಮಗೆ ಗೆಲುವಿನ ಮುತ್ತು ಸಿಗುತ್ತದೆ ಎಂದು ಮಂಜುನಾಥ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿ, ಕಳೆದ ಮೂರು ಬಾರಿ ಸುರೇಶ್ ಅವರ ನಡವಳಿಕೆ ನೋಡಿದ್ದೀರಿ. ಅವರು ಸಂಸದ ಆಗಲಿಕ್ಕೆ ನಾನೂ ಕಾರಣ. ಹಾಗಾಗಿ ಆ ಸಂಸದರಿಗೆ ಈಗ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಕಾಂಗ್ರೆಸ್‌ನಲ್ಲಿ ಗೆದ್ದಿರುವ ಒಬ್ಬನೇ ಸಂಸದ ಎಂಬ ಅಹಂಕಾರ ಸುರೇಶ್‌ ಗೆ ಇದೆ. ಎಲ್ಲಾ ಥರಾ ಲೆಕ್ಕಾಚಾರ ಮಾಡಿದರೂ ಕನಕಪುರ ಹೊರತು ಪಡಿಸಿ 7 ಕ್ಷೇತ್ರಗಳಲ್ಲಿ ನಾವು ಮುನ್ನಡೆ ಸಾಧಿಸುತ್ತೇವೆ. ಡಾ. ಮಂಜುನಾಥ್ ಗೆಲುವು ಸಾಧಿಸಿದರೆ ಕೆಂದ್ರದಲ್ಲಿ ಸಚಿವರಾಗುತ್ತಾರೆ ಅಂತ ಮಾಧ್ಯಮದಲ್ಲಿ ನೋಡಿದ್ದೇನೆ. ಅವರ ಆರೋಗ್ಯ ಕ್ಷೇತ್ರದ ಸೇವೆ ದೇಶಕ್ಕೆ ವ್ಯಾಪಿಸಬೇಕಿದೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದರು. ಅವರು ನೀರಾವರಿ ಸಚಿವರಾಗಿ ನೀರಾವರಿ ಕೆಲಸ ಮಾಡಲಿಲ್ಲ. ಇಲ್ಲಿ ಬಿಜೆಪಿ ಗೆದ್ದರೆ ರಾಜ್ಯ ಸರ್ಕಾರ ಇರುವುದಿಲ್ಲ. ಇದು ಉಪಮುಖ್ಯಮಂತ್ರಿಗಳ ಕ್ಷೇತ್ರವಾಗಿದೆ. ಜತೆಗೆ, ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಭೆ ಆಗಬೇಕು. ಅದಕ್ಕಾಗಿ ಕುಮಾರಸ್ವಾಮಿ ಅವರಿಗೂ ಕೇಳಿಕೊಂಡಿದ್ದೇನೆ. ಬೂತ್ ಮಟ್ಟದಲ್ಲಿ ನಾವು ಒಂದಾಗಬೇಕು. ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು.

ಮಾಜಿ ಶಾಸಕ ಎ. ಮಂಜುನಾಥ್ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಅವರ ದರ್ಪ, ಮೋಸ, ಸುಳ್ಳಿಗೆ ಕಡಿವಾಣ ಹಾಕಬೇಕೆಂದು ನಾನು ಮತ್ತು ಯೋಗೇಶ್ವರ್ ಇಬ್ಬರೂ ಸೇರಿ ಈ ಭೂಮಿಕೆ ಸಿದ್ಧಪಡಿಸಿದ್ದೇವೆ. ಈ ಹಿಂದಿನಿಂದಲೂ ನಾವು ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಪ್ರತಿ ಬೂತ್ ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೆಸುಗೆ ಆಗಬೇಕು ಎಂದು ಹೇಳಿದರು.

ಡಿ.ಕೆ. ಸಹೋದರರ ಹೇಳಿಕೆಗೆ ಕಾರ್ಯಕರ್ತರು ಹಾಗೂ ಮುಖಂಡರು ವಿಚಲಿತರಾಗಬಾರದು. ಒಳ್ಳೆಯ ಅಭ್ಯರ್ಥಿ ಮಂಜುನಾಥ್ ಅವರನ್ನು ಗೆಲ್ಲಿಸಬೇಕು. ಪ್ರತಿ ಮನೆಗೆ ಹೋಗಿ ಕೈ ಮುಗಿದು ಮತದಾರರನ್ನು ಬೇಡಿಕೊಳ್ಳಬೇಕು. ಮಂಜುನಾಥ್ ಗೆದ್ದರೆ ಅವರು ದೇಶದ ಆಸ್ತಿಯಾಗುತ್ತಾರೆ. ಡಿ.ಕೆ.ಸುರೇಶ್ ಮತ್ತೊಮ್ಮೆ ಗೆಲುವು ಸಾಧಿಸಿದರೆ ಅವರ ಆಸ್ತಿ ವೃದ್ಧಿಸಿಕೊಳ್ಳುತ್ತಾರೆ. ದೌರ್ಜನ್ಯ, ಪೊಲೀಸ್ ಕೇಸ್ ಸೇರಿದಂತೆ ಯಾವುದೇ ದರ್ಪಕ್ಕೆ ನೀವು ಬಗ್ಗಬೇಡಿ. ನಾವು ನಿಮಗೆ ಕಾವಲಾಗಿರುತ್ತೇವೆ. ಆಸೆ-ಆಮಿಷಕ್ಕೆ ಬಲಿಯಾಗದೆ ಕೆಲಸ ಮಾಡುವಂತೆ ಮಂಜುನಾಥ್ ಕರೆನೀಡಿದರು.

ಕಾರ್ಯಕ್ರಮದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ 48 ದಿನ ಆಯೋಜಿಸಲಾಗಿದ್ದ ಮಂಡಲ ಪೂಜೆಯಲ್ಲಿ ಮಂಗಳವಾದ್ಯ ನುಡಿಸಿದ ವಿಜಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯ ಪದಾಧಿಕಾರಿ ಸುರಾನಾ, ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಮುಖಂಡರಾದ ಗೌತಮ್ ಗೌಡ, ದರ್ಶನ್ ರೆಡ್ಡಿ, ಕಾಳಯ್ಯ, ಕಿಶನ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ರವಿ, ಕುಮಾರ್ ಗೂಳಿಗೌಡ ಮತ್ತಿತರರು ಉಪಸ್ಥಿತರಿದ್ದರು.

15ಕೆಆರ್ ಎಂಎನ್ 5.ಜೆಪಿಜಿ

ರಾಮನಗರದಲ್ಲಿ ಆಯೋಜಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಡಾ.ಸಿ.ಎನ್ . ಮಂಜುನಾಥ್ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌, ಮಾಜಿ ಶಾಸಕ ಎ. ಮಂಜುನಾಥ್‌ ಇತರರಿದ್ದರು.