ಸಾರಾಂಶ
ಕಾಪುನಲ್ಲಿ ಸಹಕಾರ ಭಾರತಿಯ ತಾಲೂಕು ಅಭ್ಯಾಸ ವರ್ಗ ನಡೆಯಿತು. ಉಡುಪಿ ಜಿಲ್ಲಾ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾಪುಕಳೆದ 45 ವರ್ಷಗಳಿಂದ ಸಹಕಾರ ಭಾರತಿ ದೇಶಾದ್ಯಂತ ಸಂಘಟನಾತ್ಮಕವಾಗಿ 28 ರಾಜ್ಯಗಳ 650ಕ್ಕಿಂತಲೂ ಹೆಚ್ಚಿನ ಜಿಲ್ಲೆಗಳಲ್ಲಿ, ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸಕ್ರಿಯವಾದ ಗ್ರಾಮೀಣ ಭಾಗದಲ್ಲಿ ಸಕ್ರಿಯವಾಗಿದೆ ಮತ್ತು ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಕಾಯೋನ್ಮುಖವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ತಿಳಿಸಿದರು.
ಅವರು ಕಾಪುನಲ್ಲಿ ನಡೆದ ತಾಲೂಕು ಅಭ್ಯಾಸ ವರ್ಗ ಉದ್ಘಾಟಿಸಿ ಮಾತನಾಡಿದರು.ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಹೈನುಗಾರರು ಸೊಸೈಟಿಗಳಿಗೆ ಪೂರೈಸುವ ಹಾಲಿಗೆ ವೈಜ್ಞಾನಿಕ ದರ ನಿಗದಿ, ದುಬಾರಿಯಾಗುತ್ತಿರುವ ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ, ಆರು ತಿಂಗಳಿನಿಂದ ಬಾಕಿ ಇರುವ ಹೈನುಗಾರರ ಸಬ್ಸಿಡಿ ಹಣದ ಬಿಡುಗಡೆ, ಪಶು ವೈದ್ಯರ ಕೊರತೆ ನೀಗಿಸಲು ಖಾಲಿ ಇರುವ ಹುದ್ದೆಗಳ ಭರ್ತಿ, ಯಶಸ್ವಿ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಪ್ರಮುಖ ಖಾಸಗಿ ಆಸ್ಪತ್ರೆಗಳ ಸೇರ್ಪಡೆ ಮೊದಲಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೈನುಗಾರರ ಪರವಾಗಿ ಮುಂದಿನ ದಿನಗಳಲ್ಲಿ ಆಂದೋಲನ, ಚಳವಳಿ ಹಾಗೂ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.ಕಾಪು ತಾಲೂಕು ಸಹಕಾರ ಭಾರತೀಯ ಕೋಶಾಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು ಅಧ್ಯಕ್ಷತೆ ವಹಿಸಿದ್ದರು. ಕಾಪು ತಾಲೂಕಿನ ಪ್ಯಾಕ್ಸ್, ಹಾಲು, ಸೌಹಾರ್ದ ಮತ್ತು ಮೀನುಗಾರಿಕಾ ಸೊಸೈಟಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಜಿಲ್ಲಾ ಪ್ಯಾಕ್ಸ್ ಪ್ರಕೋಷ್ಠದ ಸಂಚಾಲಕ ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಅವರಾಲು ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ಭಾರತಿ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಕೇಶವ ಮೋಯ್ಲಿ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಮೂಡುಬಿದಿರೆ ಸಹಕಾರಿ ಆಡಳಿತ ಕಾಲೇಜಿನ ಉಪನ್ಯಾಸಕಿ ಬಿಂದು ಬಿ. ನಾಯರ್, ಸಹಕಾರಿ ವ್ಯವಸ್ಥಾಪನೆ ಎನ್ನುವ ವಿಚಾರದ ಬಗ್ಗೆ, ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖ ಮೋಹನ್ ಕುಮಾರ್ ಕುಂಬಳೇಕರ್ ಸಹಕಾರ ಭಾರತಿ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು.