ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಅಹಿಂದ ಬಲಗೊಳಿಸಿ ಜನರಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಜಾಗೃತಿಗೊಳಿಸಲಾಗುವುದು.
ಕನ್ನಡಪ್ರಭ ವಾರ್ತೆ ಭಟ್ಕಳ
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಅಹಿಂದ ಬಲಗೊಳಿಸಿ ಜನರಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಜಾಗೃತಿಗೊಳಿಸಲಾಗುವುದು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಹಿಂದ ಸಂಘಟನೆ ಬಲಗೊಳಿಸುವ ಉದ್ದೇಶದಿಂದ ಎಲ್ಲಾ ತಾಲೂಕಿನಲ್ಲಿಯೂ ಸಭೆ ಕರೆದು ಚರ್ಚಿಸಲಾಗುತ್ತಿದೆ. ಯುವಜನರನ್ನು ರಾಜಕೀಯವಾಗಿ ಸಶಕ್ತರನ್ನಾಗಿಸುವುದರೊಂದಿಗೆ ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು. ಸಾಮಾಜಿಕ ಚಳವಳಿಗಳ ಬಲವರ್ಧನೆ ಮೂಲಕ ರಾಜಕೀಯ ಸಬಲೀಕರಣ ಹೊಂದುವ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಚಲನಾ ಸಮಿತಿ ರಚಿಸಲಾಗುವುದು ಎಂದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಅನುಸರಿಸಿ ಹೋರಾಟ ತಳಹದಿ ರೂಪಿಸಲಾಗುವುದು. ಭಟ್ಕಳದಲ್ಲಿ ಎಲ್ಲಾ ಪ್ರಮುಖರು ಅಹಿಂದ ಸಂಘಟನೆ ಬಲಪಡಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಹೆದ್ದಾರಿ ಸಮಸ್ಯೆ, ಇ-ಸ್ವತ್ತು, ಅರಣ್ಯ ಅತಿಕ್ರಮಣದಂತಹ ಗಂಭೀರ ಸಮಸ್ಯೆ ಇದ್ದು, ಈ ಸಮಸ್ಯೆ ಬಗ್ಗೆ ಜನ ಜಾಗೃತಿ ಮೂಡಿಸಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಹೆದ್ದಾರಿ ಕಾಮಗಾರಿ ವಿಳಂಬತೆ ಬಗ್ಗೆ ಈಗಾಗಲೇ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ಹೆದ್ದಾರಿ ಸಮಸ್ಯೆ ಗಂಭೀರ ಸಮಸ್ಯೆ ಆಗಿದ್ದು, ಕೆಲಸ ಪೂರ್ಣಗೊಳ್ಳದೇ ಟೋಲ್ ವಸೂಲಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು. ಅಗತ್ಯ ಬಿದ್ದರೆ ಜಿಲ್ಲೆಯ ಕರಾವಳಿ ಭಾಗದ ತಾಲೂಕುಗಳ ನ್ಯಾಯಾಲಯದಲ್ಲೂ ಸಹ ಹೆದ್ದಾರಿ ಕಾಮಗಾರಿ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದರು.
ಹಿರಿಯ ಮುಖಂಡ ರಾಮಾ ಎಂ. ಮೊಗೇರ, ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿದರು. ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಮತ್ತು ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸತೀಶಕುಮಾರ ನಾಯ್ಕ, ಸಾಲಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ವೆಂಕಟಯ್ಯ ಬೈರುಮನೆ, ಕುಮಟಾದ ಸುಧಾಕರ, ಶಿವಾನಂದ ನಾಯ್ಕ ಶಿರಸಿ, ಕೆ. ಸುಲೇಮಾನ್, ಶ್ರೀಧರ ನಾಯ್ಕ, ಟಿ.ಡಿ. ನಾಯ್ಕ, ದಿನೇಶ ಗೊಂಡ, ವೆಂಕಟೇಶ ನಾಯ್ಕ ಮುಂತಾದವರಿದ್ದರು.