ರೋಗಿಗಳಿಂದ ದೂರು ಬಂದರೆ ವೈದ್ಯರ ವಿರುದ್ಧ ಕಠಿಣ ಕ್ರಮ

| Published : Dec 20 2023, 01:15 AM IST

ಸಾರಾಂಶ

ನಿಡಗುಂದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರು ಕಾರ್ಯನಿರ್ವಹಿಸದ ಕಾರಣ ಆಸ್ಪತ್ರೆಗೆ ರಾತ್ರಿ ಹೋಗುವ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೋಗಿಗೆ ಪ್ರಾಥಮಿಕ ಚಿಕಿತ್ಸೆ ಸಿಗದೆ ಪ್ರಾಣಹಾನಿ ಸಂಭವಿಸುತ್ತಿವೆ ಎಂಬ ದೂರಿನ ಹಿನ್ನಲೆ ಮಂಗಳವಾರ ಆರೋಗ್ಯ ಇಲಾಖೆ ಉತ್ತರ ಕರ್ನಾಟಕ ಪ್ರಭಾರಿ ನಿರ್ದೇಶಕ ಡಾ. ಮಹೇಂದ್ರ ಕಾಪಸೆ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ದೂರುದಾರರ ವಿವರಣೆ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ನಿಡಗುಂದಿ

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರು ಕಾರ್ಯನಿರ್ವಹಿಸದ ಕಾರಣ ಆಸ್ಪತ್ರೆಗೆ ರಾತ್ರಿ ಹೋಗುವ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೋಗಿಗೆ ಪ್ರಾಥಮಿಕ ಚಿಕಿತ್ಸೆ ಸಿಗದೆ ಪ್ರಾಣಹಾನಿ ಸಂಭವಿಸುತ್ತಿವೆ ಎಂಬ ದೂರಿನ ಹಿನ್ನಲೆ ಮಂಗಳವಾರ ಆರೋಗ್ಯ ಇಲಾಖೆ ಉತ್ತರ ಕರ್ನಾಟಕ ಪ್ರಭಾರಿ ನಿರ್ದೇಶಕ ಡಾ. ಮಹೇಂದ್ರ ಕಾಪಸೆ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ದೂರುದಾರರ ವಿವರಣೆ ಪಡೆದುಕೊಂಡರು.

ಸೋಮವಾರ ಪಟ್ಟಣಕ್ಕೆ ಆಗಮಿಸಿದ್ದ ಸಚಿವ ಶಿವಾನಂದ ಪಾಟೀಲ ಅವರ ಮುಂದೆ ಹಲವರು ನಾಗರಿಕರು ನಿಡಗುಂದಿ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಸಿಬ್ಬಂದಿ ಕಾರ್ಯದ ಬಗ್ಗೆ ಗಮನಕ್ಕೆ ತಂದಾಗ ಸಚಿವರು ಕೂಡಲೇ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಸಚಿವರ ಸೂಚನೆ ಹಿನ್ನೆಲೆ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ ಹಿರಿಯ ಆರೋಗ್ಯ ಅಧಿಕಾರಿಗಳ ತಂಡ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರು ಇರುವುದಿಲ್ಲ. ಸಂಜೆ ಆಗುತ್ತಿದ್ದಂತೆ ಆಸ್ಪತ್ರೆಯಿಂದ ಕಾಲ್ಕೀಳುತ್ತಾರೆ. ಇದರಿಂದ ರಾತ್ರಿವೇಳೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ಸಿಗದೆ ಸಾವಿಗೀಡಾಗುವ ಪ್ರಕರಣ ಹೆಚ್ಚುತ್ತಿವೆ. ಡಿ.4ರಂದು ರಾತ್ರಿ ಪಟ್ಟಣದ 32ರ ಯುವಕ ಮುತ್ತು ಕೂಡಗಿ ಎದೆನೋವು ಎಂದು ಆಸ್ಪತ್ರೆಗೆ ಬಂದಾಗ ವೈದ್ಯರಿಲ್ಲದ ಪರಿಣಾಮ ಚಿಕಿತ್ಸೆ ಲಭ್ಯವಾಗಲಿಲ್ಲ. ಅರ್ಧಗಂಟೆ ಕಾದರೂ ಚಿಕಿತ್ಸೆ ಸಿಗದೆ ದೂರದ ಬಾಗಲಕೋಟೆ ಆಸ್ಪತ್ರೆ ಸಾಗಿಸುವಾಗ ಅಸುನೀಗಿದ ಘಟನೆ ನಡೆದಿದೆ. ಇಲ್ಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಸಿಕ್ಕಿದ್ದರೆ, ಈ ಸಾವು ತಪ್ಪಿಸಬಹುದಿತ್ತು. ಆದರೆ, ವೈದ್ಯರು ಇಲ್ಲದ ಕಾರಣ ಚಿಕಿತ್ಸೆ ದೊರತಿಲ್ಲ. ಇಂಥ ಹಲವಾರು ಘಟನೆಗಳು ನಡೆದರೂ ವೈದ್ಯರು ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಅದೇ ವರ್ತನೆ ಮುಂದುವರೆಸುತ್ತಿದ್ದಾರೆ. ಕೂಡಲೇ ಅವರಿಗೆ ರಾತ್ರಿವೇಳೆ ಸೇವೆ ನೀಡುವಂತೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರ ಆಭಿಪ್ರಾಯ ಆಲಿಸಿದ ಡಾ.ಕಾಪಸೆ , ವೈದ್ಯರನ್ನು ತರಾಟೆಗೆ ತೆಗದುಕೊಂಡು ರಾತ್ರಿವೇಳೆ ಸೇರಿದಂತೆ ನಿರಂತರ ಸೇವೆಗೆ ಲಭ್ಯ ಇರುವಂತೆ ಸೂಚಿಸಿದರು. ಒಟ್ಟು ನಾಲ್ಕು ವೈದ್ಯರಿದ್ದು, ಪ್ರತಿದಿನದ ವೈದ್ಯರ ಸೇವೆಯ ಬಗ್ಗೆ ತಾಲೂಕು ವೈದ್ಯರಿಗೆ ಮಾಹಿತಿ ನೀಡಬೇಕು. ಸೇವೆಯಲ್ಲಿರುವ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿಲ್ಲವೆಂದು ದೂರು ಬಂದರೆ, ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಲ್ಲ ವೈದ್ಯರು ಸಾರ್ವಜನಿಕರಿಂದ ದೂರು ಬಾರದಂತೆ ನಿರಂತರ ಸೇವೆ ನೀಡುವುದಾಗಿ ತಿಳಿಸಿದರು.

ವೈದ್ಯರ ಮೇಲೆ ಕ್ರಮ ಬೇಡ ಎಚ್ಚರಿಕೆ ನೀಡಿ:

ರಾತ್ರಿವೇಳೆ ವೈದ್ಯರಿಲ್ಲದ ಕುರಿತು ದೂರು ನೀಡಿದ ನಾಗರಿಕರು, ವೈದ್ಯರ ಮೇಲೆ ಕ್ರಮ ಜರುಗಿಸುವುದು ಬೇಡ. ಎಚ್ಚರಿಕೆ ನೀಡಿ, ಮುಂದಿನ ದಿನದಲ್ಲಿ ರಾತ್ರಿವೇಳೆ ಸರಿಯಾಗಿ ಸೇವೆಗೆ ಲಭ್ಯವಾಗದಿದ್ದಲ್ಲಿ ಕ್ರಮ ಜರುಗಿಸಲು ತಿಳಿಸಿದ್ದಾರೆ. ಕೆಲದಿನಗಳ ಹಿಂದೆ ಸಾಮಾಜಿಕ ಹೋರಾಟಗಾರ ಪ್ರಲ್ಹಾದ ಕರಿಯಣ್ಣವರ ರಾತ್ರಿವೇಳೆ ವೈದ್ಯರು ಲಭ್ಯವಿಲ್ಲದ ಕುರಿತು ಜೆಡಿ ಅವರಿಗೆ ದೂರು ನೀಡಿದಾಗ, ಜೆಡಿಯವರು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಸಭೆ ನಡೆಸಿ ರಾತ್ರಿ ವೇಳೆ ವೈದ್ಯರು ಸೇವೆ ನೀಡುವಂತೆ ಸೂಚಿದ ಬಳಿಕ ಹತ್ತಾರು ದಿನ ವೈದ್ಯರು ರಾತ್ರಿವೇಳೆ ಸೇವೆಗೆ ಹಾಜರಾಗಿ ಮತ್ತೆ ಸಂಜೆ ಆಗುತ್ತಿದ್ದಂತೆ ಕಾಲ್ಕೀಳುತ್ತಿದ್ದಾರೆ ಎಂದು ಪರ್ತಕರ್ತರ ಪ್ರಶ್ನೆಗೆ ಡಾ.ಮಹೇಂದ್ರ ಕಾಪಸೆ ಉತ್ತರಿಸಿ, ಸ್ವಲ್ಪದಿನ ಕಾಲಾವಕಾಶ ನೀಡುತ್ತೇವೆ. ಅದೇ ಚಾಳಿ ಮುಂದುವರೆಸಿದರೆ ಕಠಿಣಕ್ರಮ ಜರುಗಿಸಲಾಗುವುದು. ಆಸ್ಪತ್ರೆ ಪರಿಶೀಲನೆ ಹಾಗೂ ದೂರುದಾರ, ಸಾರ್ವಜನಿಕರ ಅಭಿಪ್ರಾಯದ ವಿಸ್ಕೃತ ವರದಿಯನ್ನು ಸಚಿವರು ಹಾಗೂ ಸರ್ಕಾರಕ್ಕೆ ಕಳಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ವಿವಿಧ ಸಂಘಟನೆ ಮುಖಂಡರು ಸೇರಿದಂತೆ ನಾಗರಿಕರು ಇದ್ದರು.