ಮಂಡಿಕಲ್ಲು ಹೋಬಳಿಯ ಸುತ್ತಮುತ್ತಲಿನ ಕಲ್ಲುಪುಡಿ ಘಟಕಗಳಿಂದ ಉಂಟಾಗುತ್ತಿರುವ ಧೂಳು, ಟಿಪ್ಪರ್ ಲಾರಿಗಳ ಸಂಚಾರ, ರಸ್ತೆ ಹಾಳಾಗುತ್ತಿರುವುದು ಹಾಗೂ ಬೆಳೆಗಳಿಗೆ ಹಾನಿಯಾಗುತ್ತಿರುವ ಕುರಿತು ರೈತರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಗಣಿಗಾರಿಕೆಯಿಂದ ರೈತರು, ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದ ಡಿಸಿ ಜಿ. ಪ್ರಭು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜಿಲ್ಲೆಯಲ್ಲಿ ಸುರಕ್ಷಿತ ಹಾಗೂ ನಿಯಮಬದ್ಧವಾಗಿ ಗಣಿಗಾರಿಕೆ ನಡೆಸುವ ಕುರಿತು ಗಣಿ ಮಾಲೀಕರು ಮತ್ತು ಸಂಬಂಧಪಟ್ಟವರಿಗೆ ಅರಿವು ಮೂಡಿಸಬೇಕು. ನಿಯಮಗಳನ್ನು ಪಾಲಿಸದೆ ಗಣಿಗಾರಿಕೆ ನಡೆಸುವುದು ಕಂಡುಬಂದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಸಂಘಟನಾತ್ಮಕವಾಗಿ ಏಕಕಾಲದಲ್ಲಿ ದಾಳಿ ನಡೆಸಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿಗಾರಿಕೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದ ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ,ಮಂಡಿಕಲ್ಲು ಹೋಬಳಿಯ ಸುತ್ತಮುತ್ತಲಿನ ಕಲ್ಲುಪುಡಿ ಘಟಕಗಳಿಂದ ಉಂಟಾಗುತ್ತಿರುವ ಧೂಳು, ಟಿಪ್ಪರ್ ಲಾರಿಗಳ ಸಂಚಾರ, ರಸ್ತೆ ಹಾಳಾಗುತ್ತಿರುವುದು ಹಾಗೂ ಬೆಳೆಗಳಿಗೆ ಹಾನಿಯಾಗುತ್ತಿರುವ ಕುರಿತು ರೈತರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ರೈತರಿಗೆ ಭರವಸೆ ನೀಡಿದರು.ಕಲ್ಲುಪುಡಿ ಘಟಕಗಳಿಂದ ಹೊರಬರುವ ಧೂಳಿನಿಂದಾಗಿ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಟಿಪ್ಪರ್ ಲಾರಿಗಳ ನಿರಂತರ ಓಡಾಟದಿಂದ ರಸ್ತೆಗಳು ಗುಂಡಿಬಿದ್ದು ಹದಗೆಟ್ಟಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಕ್ರಷರ್‌ಗಳಿಂದ ಹೊರಸೂಸುವ ಧೂಳಿನಿಂದ ಕೃಷಿ ಬೆಳೆಗಳು ನಾಶವಾಗುತ್ತಿದ್ದು, ಜಾನುವಾರುಗಳಿಗೆ ಅಗತ್ಯವಾದ ಮೇವು ಲಭ್ಯತೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ರೈತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಕಲ್ಲುಪುಡಿ ಘಟಕಗಳಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆ ಕೇವಲ ಬೆಳೆಗಳ ಮೇಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಧೂಳಿನ ಸಮಸ್ಯೆ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಅಲ್ಪಾವಧಿ ಹಾಗೂ ದೀರ್ಘಾವಧಿಯ ಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮಗಳ ಕುರಿತು ಸಮಾಲೋಚನೆ ನಡೆಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂದಿನ ಒಂದು ವಾರದೊಳಗೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಕಲ್ಲುಪುಡಿ ಘಟಕಗಳ ಮಾಲೀಕರ ಸಭೆ ನಡೆಸಬೇಕು. ಆ ಸಭೆಯಲ್ಲಿ ರೈತರ ಅಹವಾಲುಗಳನ್ನು ಆಲಿಸಿ, ಮೊದಲ ಹಂತದಲ್ಲಿ ಸಮಸ್ಯೆಗಳಿಗೆ ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಕುರಿತು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆ ನಡೆಸಿ, ಸಮಸ್ಯೆಯ ಸಂಪೂರ್ಣ ಪರಿಶೀಲನೆ ನಡೆಸಲಾಗುವುದು. ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲುಪುಡಿ ಘಟಕಗಳ ಕಾರ್ಯಾಚರಣೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಮತ್ತು ಜಲ್ಲಿ ಸೇರಿದಂತೆ ಗಣಿ ಉತ್ಪನ್ನಗಳು ಅತ್ಯಗತ್ಯವಾಗಿವೆ. ಅದರಲ್ಲೂ ಬೆಂಗಳೂರು ಉತ್ತರ ಭಾಗಕ್ಕೆ ಜಿಲ್ಲೆಯಿಂದ ಶೇ.50ರಷ್ಟು ಗಣಿ ಉತ್ಪನ್ನಗಳು ಪೂರೈಕೆಯಾಗುತ್ತಿವೆ. ಆದ್ದರಿಂದ ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸಲು ಮುಂದೆ ಬರುವವರಿಗೆ ಅವಕಾಶ ಕಲ್ಪಿಸಲಾಗುವುದು. ಆದರೆ, ಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ನಿಗದಿಪಡಿಸಿರುವ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಣಿ ಮಾಲೀಕರಿಗೆ ತಿಳಿಸಿದರು.ರೈತರೊಂದಿಗೆ ಸಭೆ ನಡೆಸಿ, ಕಲ್ಲುಪುಡಿ ಘಟಕಗಳಿಂದ ಉಂಟಾಗುತ್ತಿರುವ ತೊಂದರೆಗಳ ಕುರಿತು ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರೈತರಿಂದ ಸಮಸ್ಯೆಗಳ ಕುರಿತು ಮಾಹಿತಿ ಹಾಗೂ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ಪಡೆದುಕೊಂಡರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸುರೇಶ್, ತಹಸೀಲ್ದಾರ್ ರಶ್ಮಿ, ಜಿಲ್ಲಾ ಪರಿಸರ ಅಧಿಕಾರಿ ವಿಮಲಾಕ್ಷಮ್ಮ ಹಾಗೂ ಸಿಬ್ಬಂದಿ ಇದ್ದರು.ಸಿಕೆಬಿ-1 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿಗಾರಿಕೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಸ್ವೀಕಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು.