ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹಣ, ಅಧಿಕಾರ ದುರುಪಯೋಗ ಮತ್ತು ಕರ್ತವ್ಯ ಲೋಪವೆಸಗುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ತಿಳಿಸಿದ್ದಾರೆ.ಕಳೆದ 10 ತಿಂಗಳಿನಲ್ಲಿ ಈ ರೀತಿಯ ಪ್ರಕರಣಗಳ ಬಗ್ಗೆ ತ್ವರಿತ ಕ್ರಮಗಳನ್ನು ತೆಗೆದುಕೊಂಡು ಅಂತರ ತಾಲೂಕು ಸಮಿತಿ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚನೆ ಮಾಡಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ವರದಿಯಾಗಿರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ಗೋಪಾಲಪುರ: ಕರ್ತವ್ಯ ಲೋಪ ಎಸಗಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು 17 ಏಪ್ರಿಲ್ 2025ರಂದು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸಲಾಗಿತ್ತು.ಇಂಡುವಾಳು: ಇ- ಸ್ವತ್ತು ವಿತರಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಇಂಡುವಾಳು ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಒ , ಪ್ರಸ್ತುತ ಮುಂಡುಗದೊರೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರನ್ನು 29 ಮೇ 2025ರಂದು ಅಮಾನತ್ತುಗೊಳಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒನನ್ನೂ ಸಹ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುರುಕನಹಳ್ಳಿ: ಸಾರ್ವಜನಿಕರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ವಶಕ್ಕೆ ಪಡೆಯಲಾಗಿದ್ದ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒನನ್ನು 25 ಆಗಸ್ಟ್ 2025ರಂದು ಅಮಾನತ್ತು ಮಾಡಲಾಗಿತ್ತು.ಗೊಂಡೇನಹಳ್ಳಿ: ಗೊಂಡೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿದ್ದ ಪಿಡಿಒ ಹಣ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು 3 ಅಕ್ಟೋಬರ್ 2025ರಂದು ಅಮಾನತುಗೊಳಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂಡೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಕಂ, ಕಂಪ್ಯೂಟರ್ ಆಪರೇಟರ್ ಅವರ ವಿರುದ್ದವೂ ಸಹ ಶಿಸ್ತು ಕ್ರಮ ತೆಗೆದುಕೊಳ್ಳಲು ತಾಪಂ ಇಓರವರಿಗೆ ಸೂಚಿಸಲಾಗಿದೆ.
ಮಂದಗೆರೆ: ಹಣ ದುರುಪಯೋಗ, ಕರ್ತವ್ಯ ಲೋಪ ಹಾಗೂ ಗ್ರಾಪಂನ ಚುನಾಯಿತ ಸದಸ್ಯರೊಂದಿಗೆ ಅನುಚಿತ ವರ್ತನೆ ತೋರಿದ ಮಂದಗೆರೆ ಗ್ರಾಪಂ ಪಿಡಿಒರನ್ನು 9 ಅಕ್ಟೋಬರ್ 2025 ರಂದು ಅಮಾನತ್ತುಗೊಳಿಸಿದೆ. ಮಂದಗೆರೆ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿಯೂ ಕರ್ತವ್ಯ ಲೋಪವಾಗಿರುವ ಬಗ್ಗೆ ದೂರುಗಳು ಸ್ವೀಕೃತವಾಗಿದ್ದು, ಈ ದೂರಿನ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ನರೇಗಾ ಯೋಜನೆಯ ಹೊರಗುತ್ತಿಗೆ ಸಿಬ್ಬಂದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ.ಲಕ್ಷ್ಮೀಪುರ: ನರೇಗಾ ಯೋಜನೆಯಡಿ ರಸ್ತೆ ಬದು ನೆಡು ತೋಪು ಕಾಮಗಾರಿಯಲ್ಲಿ ಕಾಮಗಾರಿ ನಡೆಸದೇ ಹಣ ಪಾವತಿಸಿರುವ ದೂರಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ತನಿಖಾ ತಂಡವನ್ನು ರಚಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಹಂತದ ಅಧಿಕಾರಿ, ಸಿಬ್ಬಂದಿ ಹಾಗೂ ಹೊರಗುತ್ತಿಗೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ರೀತಿಯಲ್ಲಿ ಹಣದುರುಪಯೋಗ ಹಾಗೂ ಅಧಿಕಾರ ದುರುಪಯೋಗ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಧಿಕಾರಿ ಹಾಗೂ ಇತರ ಸಿಬ್ಬಂದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದ್ದು, ಈ ರೀತಿಯ ಕ್ರಮಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಪಂ ಸಿಇಒ ಸೂಚಿಸಿದ್ದಾರೆ.