ಸಾಗುವಳಿದಾರರು ಒದಗಿಸುವ ದಾಖಲಾತಿಗಳ ಆಧಾರದ ಮೇಲೆ ಜಮೀನು ಮಂಜೂರ ಮಾಡಲಾಗುವುದು. ತಮ್ಮ ತಮ್ಮಲ್ಲಿ ಗೊಂದಲ ಸೃಷ್ಠಿಸಿಕೊಳ್ಳದೆ ಸರ್ಕಾರ ಕೇಳುವ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವ ಜವಾಬ್ದಾರಿ ನಿಮ್ಮದು. ಇದನ್ನೇ ಮುಂದಿಟ್ಟುಕೊಂಡು ಶಾಂತಿ ಭಂಗಕ್ಕೆ ಯತ್ನಿಸಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ.

ಅಳ್ನಾವರ:

ತಾಲೂಕಿನ ಕುಂಬಾರಕೊಪ್ಪದಲ್ಲಿ ಸರ್ಕಾರಿ ಭೂಮಿ ಅಕ್ರಮ ಸಾಗುವಳಿಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಉಂಟಾದ ವ್ಯಾಜ್ಯದಿಂದ ಗ್ರಾಮದಲ್ಲಿ ನಿರ್ಮಾಣವಾದ ಪ್ರಕ್ಷುಬ್ಧ ವಾತಾವರಣ ತಿಳಿಗೊಳಿಸಲು ಕಂದಾಯ ಮತ್ತು ಪೊಲೀಸ್‌ ಅಧಿಕಾರಿಗಳು ಶುಕ್ರವಾರ ರಾತ್ರಿ ಶಾಂತಿ ಸಭೆ ನಡೆಸಿದರು. ಸರ್ಕಾರಿ ಜಮೀನದಲ್ಲಿ ಅಕ್ರಮ ಪ್ರವೇಶ ತಡೆಗೆ ಗ್ರಾಮದಲ್ಲಿ ಕಲಂ 144 ಜಾರಿಗೊಳಿಸಿದ್ದು ಯಾರಾದರೂ ಕಾನೂನು ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಇದೇ ವೇಳೆ ಧಾರವಾಡ ಉಪ ವಿಭಾಗಾಧಿಕಾರಿ ಪ್ರಭಾವತಿ ಎಚ್ಚರಿಸಿದರು.

ಗ್ರಾಮದ ಸರ್ವೇ ನಂಬರ್‌ 118ಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಾಗುವಳಿ ಕುರಿತು ವ್ಯಾಜ್ಯ ಉಂಟಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಜತೆಗೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರಿಂದ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಪ್ರಭಾವತಿ, ಭೂಮಿಯ ಅಕ್ರಮ ಸಾಗುವಳಿ ಸಕ್ರಮಗೊಳಿಸಲು ನೀವು ಅರ್ಜಿ ಸಲ್ಲಿಸಿದ್ದು ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಸಮಿತಿ ಮುಂದೇ ಇಡಲಾಗಿದೆ. ಅಲ್ಲಿ ನಿರ್ಣಯವಾಗುವ ವರೆಗೂ ಭೂಮಿ ಸರ್ಕಾರಕ್ಕೆ ಸೇರಿರುತ್ತದೆ ಎಂದು ತಿಳಿಸಿದರು.

ಸಾಗುವಳಿದಾರರು ಒದಗಿಸುವ ದಾಖಲಾತಿಗಳ ಆಧಾರದ ಮೇಲೆ ಜಮೀನು ಮಂಜೂರ ಮಾಡಲಾಗುವುದು. ತಮ್ಮ ತಮ್ಮಲ್ಲಿ ಗೊಂದಲ ಸೃಷ್ಠಿಸಿಕೊಳ್ಳದೆ ಸರ್ಕಾರ ಕೇಳುವ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವ ಜವಾಬ್ದಾರಿ ನಿಮ್ಮದು. ಇದನ್ನೇ ಮುಂದಿಟ್ಟುಕೊಂಡು ಶಾಂತಿ ಭಂಗಕ್ಕೆ ಯತ್ನಿಸಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಅರ್ಹ ಸಾಗುವಳಿದಾರರಿಗೆ ಅನ್ಯಾಯವಾಗುವುದನ್ನು ತಡೆಯಲು ಇಲಾಖೆ ಅಗತ್ಯ ಮಾಹಿತಿ ಕಲೆ ಹಾಕುತ್ತಿದೆ. ಗೊಂದಲಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಕ್ರಮ ವಹಿಸಲಾಗುವುದು. ಜಾತಿ ನಿಂದನೆಯಂತಹ ಪ್ರಕರಣ ದಾಖಲಾದರೆ ಆಯಾ ಸಮಾಜದ ನಡುವೆ ಒಡಕನ್ನು ಸೃಷ್ಟಿಸಲಿದೆ. ಹೀಗಾಗಿ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

ಡಿವೈಎಸ್ಪಿ ವಿನೋದ ಮುಕ್ತೇದಾರ ಮಾತನಾಡಿ, ಗ್ರಾಮಸ್ಥರು ಸೌಹಾರ್ದತೆ ಮತ್ತು ಶಾಂತಿಯಿಂದ ಬದುಕಬೇಕು. ಅದನ್ನು ಬಿಟ್ಟು ಜಮೀನಿನ ವಿಷಯದಲ್ಲಿ ಅನವಶ್ಯಕವಾಗಿ ಶಾಂತಿ ವಾತಾವರಣ ಹಾಳು ಮಾಡಿದರೆ ಕ್ರಮಕೈಕೊಳ್ಳಲು ಹಿಂಜರಿಯುವುದಿಲ್ಲ. ಪೊಲೀಸರ ತಾಳ್ಮೆ ಪರೀಕ್ಷಿಸಬೇಡಿ ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಸಾಗುವಳಿ ಜಮೀನು ಮಂಜೂರು ಮಾಡುವ ನಿಯಮಾವಳಿ ವಿವರಿಸಿ ಸಾಗುವಳಿದಾರರು ಎನ್ನುವ ಕುರಿತು ಪುಷ್ಟಿಕರಿಸುವ ದಾಖಲಾತಿಗಳನ್ನು ಒಂದೆರಡು ದಿನದಲ್ಲಿ ಹಾಜರಪಡಿಸಲು ಸೂಚಿಸಿದರು.

ಸಚಿವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ಸಿಪಿಐ ರಫೀಕ್‌ ತಹಶೀಲದಾರ, ತಾಪಂ ಇಒ ಪ್ರಶಾಂತ ತುರಕಾಣಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಆರ್‌ಎಫ್‌ಒ ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಗೀತಾ ಕುಂಚನೂರ ಇದ್ದರು.ಪೊಲೀಸರು-ಅಧಿಕಾರಿಗಳಿಗೆ ತಲೆನೋವು

ಗ್ರಾಮದ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಅನೇಕರು ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿದ್ದು ತಮಗೆ ಭೂಮಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಮತ್ತೊಂದು ಗುಂಪು ಈ ಜಮೀನುಗಳನ್ನು ತಾವೇ ಸಾಗುವಳಿ ಮಾಡುತ್ತಿದ್ದು ತಮಗೆ ನೀಡುವಂತೆ ಒತ್ತಾಯಿಸಿವೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಕಟಾವಿಗೆ ಬಂದಿದ್ದ ಕೃಷಿ ಬೆಳೆ ಕೊಯ್ಲಿಗೆ ಮುಂದಾದಾಗ ಉಂಟಾದ ಗೊಂದಲದ ಬಗ್ಗೆ ದೂರು-ಪ್ರತಿ ದೂರು ದಾಖಲಾಗಿದೆ. ಈಗ ಅಂತಹದ್ದೆ ಘಟನೆ ಮತ್ತೊಮ್ಮೆ ನಡೆದಿದ್ದು, ಕಂದಾಯ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.