ಗ್ರಾಮ ಪಂಚಾಯಿತಿ ವ್ಯಾಪ್ತಿ ಆರೋಗ್ಯ ಕೇಂದ್ರಗಳ ಆರೋಗ್ಯ ಅಧಿಕಾರಿಗಳಿಂದ ಸುಮಾರು 2-3 ದಿನಗಳಿಂದ ವಾಂತಿ ಭೇದಿ ಪ್ರಕರಣಗಳು ವರದಿಯಾಗಿರುವ ಬಗ್ಗೆ ಮಾಹಿತಿ ಪಡೆದು ತಿಳಿಸಬೇಕು. ಪ್ರತಿ ಪಿಡಿಒಗಳು ತಮ್ಮ ನೀರು ವಿತರಕರಿಗೆ ಸಭೆ ನಡೆಸಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಉದ್ಭವಿಸದಂತೆ ಕ್ರಮ ವಹಿಸಬೇಕು.
ಕನ್ನಡ ಪ್ರಭ ವಾರ್ತೆ ಶಿರಾ
ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮವಹಿಸಿ. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವ ಗ್ರಾಮಗಳ ವಿವರ ತಾಲೂಕು ಪಂಚಾಯಿತಿಗೆ ಅತೀ ತುರ್ತಾಗಿ ಸಲ್ಲಿಸಬೇಕು ಕಾರ್ಯನಿರ್ವಾಹಕ ಅಧಿಕಾರಿ ರಂಗನಾಥ್ ಆರ್. ಸೂಚಿಸಿದರು. ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ನಿರ್ದೇಶನದಂತೆ ತಾಪಂ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಸಭೆ ನಡೆಸಿದ ಅವರು. ಎಲ್ಲಾ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸರಬರಾಜು ಬಗ್ಗೆ ಸೂಕ್ತ ನಿರ್ದೇಶನ ನೀಡಿದರು.ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತಮ್ಮ ನೀರು ವಿತರಕರ ಮೂಲಕ ನೀರಿನ ಎಲ್ಲ ಮೂಲಗಳನ್ನು ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷಿಸಿ ಆನ್ಲೈನ್ ನಲ್ಲಿ ಪ್ರತಿದಿನ ಇಂಡೀಕರಿಸುವಂತೆ ಸೂಚಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿ ಆರೋಗ್ಯ ಕೇಂದ್ರಗಳ ಆರೋಗ್ಯ ಅಧಿಕಾರಿಗಳಿಂದ ಸುಮಾರು 2-3 ದಿನಗಳಿಂದ ವಾಂತಿ ಭೇದಿ ಪ್ರಕರಣಗಳು ವರದಿಯಾಗಿರುವ ಬಗ್ಗೆ ಮಾಹಿತಿ ಪಡೆದು ತಿಳಿಸಬೇಕು. ಪ್ರತಿ ಪಿಡಿಒಗಳು ತಮ್ಮ ನೀರು ವಿತರಕರಿಗೆ ಸಭೆ ನಡೆಸಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಉದ್ಭವಿಸದಂತೆ ಕ್ರಮ ವಹಿಸಬೇಕು. ಅನುಷ್ಠಾನಗೊಳ್ಳುತ್ತಿರುವ ಜೆ.ಜೆ.ಎಂ ಕಾಮಗಾರಿಗಳಿಗೆ ಭೇಟಿ ನೀಡಿ ಪರೀಶೀಲಸಿ ವರದಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದರು.ಕಡ್ಡಾಯವಾಗಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು. ಕಡಿಯುವ ನೀರಿನ ಮೂಲಗಳ ಸುತ್ತ ಕಡ್ಡಾಯವಾಗಿ ಸ್ವಚ್ಛಗೊಳಿಸಿ ನೀರು ಎಲ್ಲೂ ಸಹ ಮಿಶ್ರಣವಾಗದಂತೆ ಹಾಗೂ ಪೋಲಾಗದಂತೆ ನೋಡಿಕೊಳ್ಳಬೇಕು. ಮಳೆಮಾಪನ ಕೇಂದ್ರ ಹಾಗೂ ಹವಮಾನ ಕೇಂದ್ರಗಳಿಗೆ ಭೇಟಿ ನೀಡಿ ಅವುಗಳ ಕಾರ್ಯವೈಖರಿ ಬಗ್ಗೆ ಸ್ಥಿತಿ-ಗತಿ ಪರಿಶೀಲಿಸಿ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗಳೊಂದಿಗೆ ದೃಢೀಕರಿಸಿ ವರದಿ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ನೀರು ವಿತರಕರು ಹಾಜರಿದ್ದರು.