ಪಡಿತರ ವ್ಯವಸ್ಥೆಯಲ್ಲಿ ವಿತರಿಸುತ್ತಿರುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುವಂತೆ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಳ್ನಾವರ:

ಆರ್ಥಿಕ ಸಬಲತೆಗೆ ಸಹಕಾರಿಯಾಗಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಉಂಟಾಗುತ್ತಿರುವ ಅಡಚಣೆ ಸರಿಪಡಿಸಲು ತಾಂತ್ರಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪ್ರಯತ್ನ ನಡೆದಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಹೇಳಿದರು.

ಮಂಗಳವಾರ ಜರುಗಿದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಡಿತರ ವ್ಯವಸ್ಥೆಯಲ್ಲಿ ವಿತರಿಸುತ್ತಿರುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಯ ಮಾಹಿತಿ ಪಡೆದುಕೊಂಡರು.

ಸಾರಿಗೆ ಅಧಿಕಾರಿ ಮಾತನಾಡಿ, ಹಳಿಯಾಳ ಘಟಕದಲ್ಲಿರುವ ಒಟ್ಟಾರೆ ಬಸ್‌ಗಳ ಪೈಕಿ ೫೪ ಬಸ್‌ಗಳು 10 ಲಕ್ಷ ಕಿಮಿಗೂ ಅಧಿಕ ದೂರ ಕ್ರಮಿಸಿವೆ. ಇನ್ನುಳಿದ ಬಸ್‌ಗಳು ಶಾಲಾ ಮಕ್ಕಳ ಪ್ರವಾಸಕ್ಕೆ ತೆರಳುತ್ತಿರುವುದರಿಂದ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಹೊಸ ಬಸ್‌ಗಳನ್ನು ಓದಿಸುತ್ತಿದ್ದು ಸುಧಾರಣೆ ಕಾಣಲಿದೆ ಎಂದರು.

ಆಹಾರ ಇಲಾಖೆಯ ವಿನಾಯಕ ದಿಕ್ಷೀತ ಮಾತನಾಡಿ, ಪಡಿತರ ವಿತರಣೆಯ ತೂಕದಲ್ಲಿ ಕಾಣುವ ದೋಷ ಕಂಡು ಹಿಡಿಯಲು ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಪಡಿತರ ವಿತರಿಸಿದ ನಂತರ ರಸೀದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸೌಲಭ್ಯ ಪಡೆಯುವ ದಾವಂತದಲ್ಲಿ ಕೆಲವೊಬ್ಬರು ಕಾರ್ಡ್‌ಗಳಲ್ಲಿನ ಹೆಸರು ಕಡಿಮೆ ಮಾಡುವುದನ್ನು ತಡೆಯಲು ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ತಾಪಂ ಯೋಜನಾಧಿಕಾರಿ ಪ್ರಕಾಶ ಹಾಲಮತ್, ಸಿಡಿಪಿಒ ಮಂಜುನಾಥ ಕುಂಬಾರ, ಕೌಶಲ್ಯಾಭಿವೃದ್ಧಿ ಇಲಾಖೆಯ ಬಸವಂತ, ಸಮಿತಿ ಸದಸ್ಯರು ಇದ್ದರು.