ಸಾರಾಂಶ
ಗದಗ: ಮಾದಕ ದ್ರವ್ಯಗಳ ಸೇವನೆ ಯುವ ಜನತೆಯ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟ ಹಾಗೂ ಸಾಗಾಣಿಕೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ದಿಸೆಯಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ಎಸ್ಪಿ ಬಿ.ಎಸ್. ನೇಮಗೌಡ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಾದಕ ದ್ರವ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಮಾತನಾಡಿದರು.ಶಾಲಾ ಕಾಲೇಜುಗಳ ಹತ್ತಿರವಿರುವ ಗೂಡಂಗಡಿಗಳಲ್ಲಿ ಮಾದಕ ದ್ರವ್ಯಗಳ ಮಾರಾಟವಾಗುವ ಸಂಭವ ಅಧಿಕವಾಗಿರುತ್ತವೆ. ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಅಂತಹ ಸ್ಥಳಗಳ ಮೇಲೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು ಎಂದರು.
ಜಗತ್ತಿನಲ್ಲಿ ಹೇಳುವುದೆಲ್ಲವನ್ನು ಈಗಾಗಲೇ ಹೇಳಿಯಾಗಿದೆ. ಈಗೇನಿದ್ದರೂ ಮಾಡುವುದೊಂದೇ ಬಾಕಿ ಎಂದು ಸಿದ್ದೇಶ್ವರ ಶ್ರೀಗಳು ತಿಳಿಸಿದಂತೆ ನಾವೆಲ್ಲರೂ ಮಾದಕದ್ರವ್ಯ ನಿಯಂತ್ರಣಕ್ಕೆ ಸಂಪೂರ್ಣವಾಗಿ ಕಾರ್ಯ ನಿರ್ವಹಿಸೋಣ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸಂಪೂರ್ಣ ನಿಯಂತ್ರಣ ಮಾಡುವ ಮೂಲಕ ಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸುವಲ್ಲಿ ಶ್ರಮಿಸೋಣ ಎಂದರು.ಮಾದಕ ದ್ರವ್ಯಗಳ ವ್ಯಸನದಿಂದ ಹಲವಾರು ದುಷ್ಪರಿಣಾಮಗಳು ಆಗಿರುವ ಬಗ್ಗೆ ಈಗಾಗಲೇ ಅನೇಕ ಉದಾಹರಣೆಗಳನ್ನು ಸಮಾಜದಲ್ಲಿ ನೋಡಬಹುದಾಗಿದೆ.ವ್ಯಸನದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು ಸಂಪೂರ್ಣ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಸಹ ಅತ್ಯಗತ್ಯವಾಗಿದೆ. ಮಾದಕ ದ್ರವ್ಯಗಳನ್ನು ಸೇವಿಸುವವರು ಹಾಗೂ ಮಾರಾಟ ಸಾಗಾಣಿ ಮಾಡುವವರ ಮಾಹಿತಿ ದೊರೆತಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಕರೆ ಮಾಡಿ ಮಾಹಿತಿ ಒದಗಿಸಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವ್ಯಸನ ಮಾಡುವವರು ಹೆಚ್ಚಾಗಿ ಯುವಜನತೆ ಆಗಿದ್ದು, ಇದರಿಂದ ಅನೇಕ ದುಷ್ಪರಿಣಾಮ ಬೀರಲಿದೆ. ಇದರ ಸಂಪೂರ್ಣ ನಿಯಂತ್ರಣಕ್ಕೆ ಅಧಿಕಾರಿ ವರ್ಗ ಮುಂದಾಗಬೇಕು.ಜಿಲ್ಲೆಯ ಮೆಡಿಕಲ್ ಹಾಗೂ ಎಂಜನೀಯರಿಂಗ್ ಕಾಲೇಜು ಮತ್ತು ವಸತಿ ನಿಲಯಗಳ ಮೇಲೆ ನಿಗಾವಹಿಸಬೇಕು. ಶಾಲಾ ಕಾಲೇಜುಗಳ ಹತ್ತಿರ ಹಾಗೂ ಹಾಸ್ಟೆಲ್‍ಗಳಲ್ಲಿ ಅಧಿಕಾರಿ ವರ್ಗ ನಿರಂತರವಾಗಿ ತಪಾಸಣೆ ನಡೆಸಬೇಕು. ಮಾದಕ ದ್ರವ್ಯಗಳು ಕಂಡುಬಂದಲ್ಲಿ ತಕ್ಷಣ ಅದರ ಮೂಲ ಪತ್ತೆ ಹಚ್ಚಿ ಅಪರಾಧ ಎಸಗುವವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸಲು ಅಧಿಕಾರಿಗಳು ಪಣ ತೊಡಬೇಕು ಎಂದರು.ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ,ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯದೊಂದಿಗೆ ಮಾದಕ ದ್ರವ್ಯಗಳ ನಿಯಂತ್ರಣ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ಕೈ ಜೋಡಿಸುವಂತೆ ತಿಳಿಸಿದರು.ಮದ್ಯ,ತಂಬಾಕು, ಗಾಂಜಾ,ಕೋಕೇನ್, ಓಪಿಯಮ್, ಅಂಪಿಟಮೈನ್, ಹೆರಾಯಿನ್, ನಿದ್ರೆ ಮಾತ್ರೆಗಳು, ಅನಿಲಗಳು (ವೈಟನರ್ ಪೆಟ್ರೋಲಿಯಂ ಉತ್ಪನ್ನಗಳು) ಮುಂತಾದವುಗಳು ಮಾದಕ ವಸ್ತುಗಳಾಗಿದ್ದು, ಇವುಗಳ ದುಶ್ಚಟ ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತವೆ. ಮಾದಕ ವಸ್ತುಗಳನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಾರೆ. ಶಾಲಾ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗುವುದು, ಕೆಲಸ ಅರ್ಧಕ್ಕೆ ಬಿಡುವುದು ಸೇರಿದಂತೆ ಇತರ ಕಾರಣಗಳ ಮೂಲಕ ಗುರುತಿಸಬಹುದು.ಮಾದಕ ದ್ರವ್ಯಗಳಿಗೆ ಬಲಿಯಾದವರನ್ನು ಇಲಾಖಾಧಿಕಾರಿಗಳು ಗುರುತಿಸಬೇಕು. ಅವರ ಚಲನವಲನಗಳ ಮೂಲಕ ಅವರನ್ನು ಗಮನಿಸಿ ಮಾದಕ ದ್ರವ್ಯಗಳ ಸರಬರಾಜನ್ನು ಬುಡ ಸಮೇತ ಕಿತ್ತೆಸೆಯಲು ಅಧಿಕಾರಿಗಳು ಶ್ರಮಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜೀಕರ್, ಜಿಮ್ಸ್ ಮಾನಸಿಕ ವಿಭಾಗದ ಮುಖ್ಯಸ್ಥ ಡಾ. ಸೋಮಶೇಖರ ಬಿಜ್ಜಳ ಸೇರಿದಂತೆ ಪೊಲೀಸ್, ಅಬಕಾರಿ, ಅರಣ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.