ಕಳಪೆ ಬಿತ್ತನೆ ಬೀಜ ಮಾರಾಟಗಾರರ ಮೇಲೆ ಕಠಿಣ ಕ್ರಮವಾಗಬೇಕು. ಕೇವಲ ಕೇಸ್ ದಾಖಲಿಸುವುದು, ಚಾರ್ಜ್ ಶೀಟ್ ಸಲ್ಲಿಸಿದರೆ ಸಾಲದು. ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.
ಹಾವೇರಿ:ಕಳಪೆ ಬಿತ್ತನೆ ಬೀಜ ಮಾರಾಟಗಾರರ ಮೇಲೆ ಕಠಿಣ ಕ್ರಮವಾಗಬೇಕು. ಕೇವಲ ಕೇಸ್ ದಾಖಲಿಸುವುದು, ಚಾರ್ಜ್ ಶೀಟ್ ಸಲ್ಲಿಸಿದರೆ ಸಾಲದು. ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.
ಇಲ್ಲಿಯ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಕಲಿ ಹಾಗೂ ಕಳಪೆ ಬಿತ್ತನೆ ಬೀಜ ಮಾರಾಟಗಾರರ ಮೇಲೆ ಕೈಗೊಂಡ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 12 ಜನರ ಮೇಲೆ ಕೇಸ್ ಹಾಕಿದ್ದೀರಿ. ಆದರೆ, ಶಿಕ್ಷೆ ಆಗುತ್ತಿಲ್ಲವಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕರು, ಅಂಥವರ ಪರವಾನಗಿ ರದ್ದು ಮಾಡಲಾಗುವುದು ಎಂದು ಹೇಳಿದರು. ಇದರಿಂದ ಏನೂ ಪ್ರಯೋಜನವಿಲ್ಲ, ಅವರು ಬೇರೆ ಹೆಸರಿನಲ್ಲಿ ಲೈಸೆನ್ಸ್ ಪಡೆದು ಮತ್ತೆ ಅದೇ ದಂಧೆ ಆರಂಭಿಸುತ್ತಾರೆ. ಈ ಬಗ್ಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ತರಬೇಕು ಎಂದು ಹೇಳಿದರು.ಬೆಳೆ ಪದ್ಧತಿ ಬದಲಿಸಿ: ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಪ್ರಗತಿ ಪರಿಶೀಲಿಸಿದ ಸಚಿವರು, ಜಿಲ್ಲೆಯಲ್ಲಿ ಮೆಕ್ಕೆಜೋಳ ಅಧಿಕ ಪ್ರಮಾಣದಲ್ಲಿ ಬಿತ್ತನೆಯಾಗುತ್ತದೆ. ಈ ಸಲ ಬೆಲೆಯಿಲ್ಲದೇ ಸಮಸ್ಯೆ ಎದುರಿಸಿರುವುದನ್ನು ಗಮನಿಸಬೇಕು. ಬೆಳೆ ಪದ್ಧತಿ ಬದಲಾವಣೆಗೆ ರೈತರ ಮನವೊಲಿಸುವ ಕೆಲಸ ಮಾಡಬೇಕು. ರಾಗಿ, ಹೆಸರು, ಎಣ್ಣೆ ಕಾಳು ಉತ್ಪಾದನೆಗೆ ಆದ್ಯತೆ ನೀಡಬೇಕು. ಮಕ್ಕೆಜೋಳ ಬಿತ್ತನೆ ಕ್ಷೇತ್ರದ ಶೇ.50ರಷ್ಟಾದರೂ ಬೇರೆ ಬೆಳೆ ಆಗಬೇಕು ಎಂದು ತಾಕೀತು ಮಾಡಿದರು. ಮುಂಗಾರು ಹಂಗಾಮಿಗೆ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಸಾಕಷ್ಟಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಮಾವು ಬೆಳೆ ಹಾಳಾಗಿರುವ ಬಗ್ಗೆ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕಾ ಉಪನಿರ್ದೇಶಕರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಈ ಸಲ ಹೂವು ಚೆನ್ನಾಗಿ ಬಿಟ್ಟರೂ ಕಡಿಮೆ ಉಷ್ಣಾಂಶದಿಂದ ಆರಂಭದಲ್ಲಿ ಹೂವು ಉದುರಿತ್ತು. ಬಳಿಕ ಮಳೆ, ಮೋಡದ ವಾತಾವರಣದಿಂದ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದರೆ, ಈ ಸಲ ಬಹುತೇಕ ಮಾವು ಬೆಳೆಗಾರರು ವಿಮೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು. ವಿಮೆ ಮಾಡಿಸಿದರೆ ಸಾಲದು, ರೈತರಿಗೆ ವಿಮೆ ಕೊಡಿಸಬೇಕು ಎಂದು ಸಚಿವರು ಸೂಚಿಸಿದರು. ಹಾವೇರಿ ಮತ್ತು ರಾಣಿಬೆನ್ನೂರು ತಾಲೂಕಿನಲ್ಲಿ ಅಡಕೆ ಬೆಳೆಗೆ ಸಬ್ಸಿಡಿ ಸಿಗುತ್ತಿಲ್ಲ. ಈ ಬಗ್ಗೆ ಹಲವು ವರ್ಷಗಳಿಂದ ಹೇಳುತ್ತ ಬಂದರೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗುವುದಿಲ್ಲವೇ ಎಂದು ಸಚಿವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಶಿರಸಿ ಹಾವೇರಿ ರಸ್ತೆ ಯಾವಾಗ?: ಶಿರಸಿ ಹಾವೇರಿ ರಸ್ತೆ ಗುಂಡಿ ಬಗ್ಗೆ ಪ್ರಸ್ತಾಪಿಸಿದ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಇನ್ನೂ ಎಷ್ಟು ಜನರ ಪ್ರಾಣ ತೆಗೆಯಬೇಕು ಎಂದುಕೊಂಡಿದ್ದೀರಿ? ಹಾವೇರಿಯಿಂದ ನಾಲ್ಕರ ಕ್ರಾಸ್‌ವರೆಗೆ ಅಲ್ಲಲ್ಲಿ ರಸ್ತೆ ಗುಂಡಿ ಬಿದ್ದಿದೆ. ಈ ಬಗ್ಗೆ ಹಲವು ಸಲ ಗಮನಕ್ಕೆ ತಂದರೂ ಗುಂಡಿ ಮುಚ್ಚುವ ಕೆಲಸವಾಗುತ್ತಿಲ್ಲ. ನಿತ್ಯವೂ ಅನೇಕ ಅಪಘಾತಗಳು ಆಗುತ್ತಿವೆ. ಇನ್ನೂ ಎಷ್ಟು ದಿನ ಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ, ಮೇ ಅಂತ್ಯದೊಳಗೆ ಮುಗಿಸುತ್ತೇವೆ ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ನೀವು ಮಳೆಗಾಲದಲ್ಲಿ ಕೆಲಸ ಮಾಡುತ್ತೀರಾ, ಕೆಲಸ ವಿಳಂಬ ಮಾಡಿದ ಗುತ್ತಿಗೆದಾರರ ರಕ್ಷಣೆ ಮಾಡುತ್ತಿದ್ದೀರಾ, ಈಗಾಗಲೇ 3 ನೋಟಿಸ್ ಕೊಟ್ಟಿದ್ದೀರಿ ಎನ್ನುತ್ತೀರಿ, ಇನ್ನೂ ಎಷ್ಟು ನೋಟಿಸ್ ಕೊಡುತ್ತೀರಾ. ಈ ತಿಂಗಳ ಅಂತ್ಯದೊಳಗೆ ತಗ್ಗು ಗುಂಡಿ ತುಂಬಿಸುವ ಕೆಲಸ ಮುಗಿಸಬೇಕು ಎಂದು ತಾಕೀತು ಮಾಡಿದರು. ಶಿರಸಿ ಹಾವೇರಿ ರಸ್ತೆ ಕಾಮಗಾರಿ ವಿಳಂಬಕ್ಕೂ ತೀವ್ರ ಬೇಸರ ವ್ಯಕ್ತಪಡಿಸಿ, ಈ ವಿಷಯದ ಬಗ್ಗೆ ಶನಿವಾರ ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ಹೇಳಿದರು.
ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಬೇಸರ: ನಗರಸಭೆಯಿಂದ ನೀರಿನ ಟ್ಯಾಂಕ್ ನಿರ್ಮಾಣಕ್ಕೂ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡುತ್ತಿದ್ದಾರೆ. ಸಣ್ಣ ಗಿಡ ಕಡಿದದ್ದಕ್ಕೆ ಕೇಸ್ ಹಾಕಿದ್ದಾರೆ. ಖಂಡೇರಾಯನಹಳ್ಳಿಯಲ್ಲಿ ನನ್ನದೂ ಸೇರಿದಂತೆ ಹಲವು ವರ್ಷಗಳಿಂದ ವಾಸವಿರುವ ಜಾಗವನ್ನು ತೆರವು ಮಾಡಲು ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಇವರ ಕಿರುಕುಳದಿಂದ ನನಗೇ ಇಷ್ಟು ಸಮಸ್ಯೆ ಆಗಿರುವಾಗ ಜನಸಾಮಾನ್ಯರ ಗತಿಯೇನು ಎಂದು ವಿಧಾನಸಭೆ ಉಪಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಅಸಹಾಯಕತೆ ಪ್ರದರ್ಶಿಸಿದರು. ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಕುಡಿಯುವ ನೀರು ಸೇರಿದಂತೆ ಜನರಿಗೆ ಅಗತ್ಯವಿರುವ ಕೆಲಸ ಮಾಡುತ್ತಿದ್ದಾಗ ಕೇಸ್ ಹಾಕಿದರೆ ಹೇಗೆ? ಸುಖಾಸುಮ್ಮನೆ ಅಡ್ಡಿಪಡಿಸಬಾರದು ಎಂದು ಹೇಳಿದರು.ರಸ್ತೆ ಬದಿ ಗಿಡ ನೆಡುವ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ನೀಡುವಂತೆ ಡಿಎಫ್‌ಒಗೆ ಕೇಳಿದರು. ಪ್ರತಿ ವರ್ಷ ಗಿಡ ಹಚ್ಚುತ್ತಲೇ ಬಂದಿದ್ದೀರಿ. ಆದರೆ, ಅರಣ್ಯ ಮಾತ್ರ ವೃದ್ಧಿಯಾಗುತ್ತಿಲ್ಲ. ಹಚ್ಚಿದ ಗಿಡ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಮೆಡಿಕಲ್ ಕಾಲೇಜು ಆದ ಮೇಲೆ ಆಗಿರುವ ಪ್ರಯೋಜನ, ಜನರಿಗೆ ಸಿಗುತ್ತಿರುವ ಆರೋಗ್ಯ ಸೇವೆ, ತಾಯಿ ಶಿಶು ಮರಣ ಪ್ರಮಾಣ ಸೇರಿದಂತೆ ಆರೋಗ್ಯ ಮೂಲಸೌಕರ್ಯದ ಬಗ್ಗೆ ಚರ್ಚಿಸಿದ ಸಚಿವರು, ಸಾಮಾನ್ಯ ಹೆರಿಗೆಗಿಂತ ಸಿಸೇರಿಯನ್ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಪಿಜಿ ವಿದ್ಯಾರ್ಥಿಗಳ ಸೇವೆಯನ್ನು ಸುತ್ತಮುತ್ತಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡುವಂತೆ ಸೂಚಿಸಿದರು.ಶಾಸಕ ಪ್ರಕಾಶ ಕೋಳಿವಾಡ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ರೈತ ಆತ್ಮಹತ್ಯೆ ಬಗ್ಗೆ ಬೇಸರ: ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣ ನಿರಂತರವಾಗಿ ವರದಿಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಬ್ಯಾಡಗಿ ತಾಲೂಕು ಕದರಮಂಡಲಗಿಯಲ್ಲಿ ಗುರುವಾರ ದಾಖಲಾದ ರೈತ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದರು. ಇದರಿಂದ ಜಿಲ್ಲೆಯ ಮರ್ಯಾದೆ ಹೋಗುತ್ತಿದೆ. ನಿಜವಾಗಿಯೂ ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬುದನ್ನು ಪರಿಶೀಲಿಸಬೇಕು. ವಾಸ್ತವ ಪರಿಶೀಲಿಸಿ ಹೌದಾಗಿದ್ದರೆ ಪರಿಹಾರ ಕೊಡಲು ಯಾವುದೇ ಸಮಸ್ಯೆಯಿಲ್ಲ ಎಂದರು. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರೈತ ಆತ್ಮಹತ್ಯೆ ಪ್ರಕರಣ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ಅಂಕಿಸಂಖ್ಯೆ ನೀಡಿದರು.