ಡಿ.ವೈ.ಎಸ್.ಪಿ ಡಾ.ಬಸವರಾಜ ಯಲಿಗಾರ ಕಲಾವಿದರ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಶ್ಲೀಲತೆಯ ವಿರುದ್ಧ ಉತ್ತರ ಕರ್ನಾಟಕದ ಎಲ್ಲ ಕಲಾವಿದರು ಒಗ್ಗಟ್ಟಾಗಿ ಹೋರಾಟಕ್ಕಿಳಿದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಉತ್ತರ ಕರ್ನಾಟಕ ಕಲಾವಿದರ ಚರ್ಚಾಕೂಟ ಆಯೋಜಿಸಲಾಗಿತ್ತು. ಉತ್ತರ ಕರ್ನಾಟಕ ಜಿಲ್ಲೆಗಳ 200ಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದರು. ಸುಮಾರು 20 ಹಿರಿಯ ಅನುಭವಿ ಕಲಾವಿದರ ನೇತೃತ್ವದಲ್ಲಿ ಸುಮಾರು 6 ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು.ಎಲ್ಲ ಕಲಾವಿದರು ಅಶ್ಲೀಲತೆ ಕುರಿತು ತಮ್ಮ ಆಕ್ರೋಶ ಹೊರಹಾಕಿ, ಸಾಕಷ್ಟು ಸಲಹೆ ಸೂಚನೆ ನೀಡಿದರು. ಉತ್ತರ ಕರ್ನಾಟಕದ ಪವಿತ್ರ ಆಸ್ತಿಯಾದ ಜಾನಪದವನ್ನು ದುರುಪಯೋಗ ಮಾಡಿಕೊಂಡು ತಮ್ಮ ಸ್ವಾರ್ಥ ಹಾಗೂ ಶೀಘ್ರವಾಗಿ ಹಣ ಗಳಿಸುವ ಉದ್ದೇಶವನ್ನಿಟ್ಟುಕೊಂಡು ಕಲಾವಿದರ ದಾರಿ ತಪ್ಪಿಸಲಾಗುತ್ತಿದೆ. ಆ ಮೂಲಕ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ ಹಲವಾರು ವ್ಯಕ್ತಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮಾಡಲು ಕಾನೂನು ಹಾಗೂ ಇನ್ನಿತರ ಸಂಘ-ಸಂಸ್ಥೆ, ಸಂಘಟನೆಗಳ ಸಹಾಯ ಪಡೆಯಲು ಸಲಹೆಗಳು ಬಂದವು.
ಅತಿಥಿ ಡಿ.ವೈ.ಎಸ್.ಪಿ ಡಾ.ಬಸವರಾಜ ಯಲಿಗಾರ ಕಲಾವಿದರ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಶ್ಲೀಲತೆಯ ವಿರುದ್ಧ ಉತ್ತರ ಕರ್ನಾಟಕದ ಎಲ್ಲ ಕಲಾವಿದರು ಒಗ್ಗಟ್ಟಾಗಿ ಹೋರಾಟಕ್ಕಿಳಿದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಇತ್ತೀಚಿನ ಹಾಡುಗಳಿಗೆ ಜಾನಪದ ಹೆಸರು ನೀಡಿ ಎಲ್ಲರ ಮನಸ್ಸು ಕೆಡಿಸುತ್ತಿರುವುದು ವಿಷಾದನೀಯ. ಈ ತರಹದ ಅಶ್ಲೀಲ ಸಾಹಿತ್ಯ ಇರುವ ಹಾಡುಗಳಿಗೆ ಜಾನಪದ ಎನ್ನುವುದು ತಪ್ಪು. ಇಂತಹ ಹಾಡುಗಳನ್ನು ಹಾಡುವ ಗಾಯಕ, ಗಾಯಕಿಯರಿಗೆ ಕಲಾವಿದರೇ ಅನ್ನಬಾರದು. ಈ ನಿಟ್ಟಿನಲ್ಲಿ ಕಲಾವಿದರ ಈ ಹೋರಾಟಕ್ಕೆ ಪೊಲೀಸ್ ಇಲಾಖೆಯೂ ಕೂಡ ಸಕರಾತ್ಮಕವಾಗಿ ಸ್ಪಂದಿಸಲಿದೆ. ಬರುವ ದಿನಗಳಲ್ಲಿ ಈ ಅಶ್ಲೀಲ ಸಾಹಿತ್ಯ ಬರೆಯುವವರು, ಅದನ್ನು ಹಾಡುವ ಗಾಯಕ, ಗಾಯಕಿಯರು, ಆರ್ಕೆಷ್ಟ್ರಾ ತಂಡದ ನಾಯಕರು ಹಾಗೂ ಇಂತಹ ಕಾರ್ಯಕ್ರಮ ಆಯೋಜಿಸುವ ಆಯೋಜಕರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಕಲ್ಯಾಣ ಹಾಗೂ ಹೋರಾಟ ವೇದಿಕೆ ಸಿದ್ಧವಾಗಲಿದ್ದು, ಕಲಾವಿದರ ಜೊತೆಗೆ ಸದಾ ಸೇವೆಗಾಗಿ ನಿಲ್ಲಲಿದೆ ಎಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು.
ಹಿರಿಯ ಕಲಾವಿದರಾದ ಪ್ರಶಾಂತ ಚೌಧರಿ, ಚಂದ್ರಶೇಖರ ಜಾಧವ, ಶಬ್ಬೀರ್ ಡಾಂಗೆ, ಎಂ.ಡಿ. ಆನಂದ, ಪ್ರಕಾಶ ಮಠ, ವಿರೇಶ ವಾಲಿ, ರವಿ ಕೋರಿ, ಶಕ್ತಿಕುಮಾರ, ರಫೀಕ್, ರವಿ ಸಾರವಾಡ, ಯಾಸಿನ್ ಜಿಗರ್, ರವಿ ದೇಶಪಾಂಡೆ, ಪರೀಟ್, ರಾಜು ಹಂಚಾಟೆ, ಶ್ರೀಶೈಲ್ ಕಾಗಲ್, ಸೋಮಶೇಖರ ರಾಠೋಡ, ವರ್ಧಮಾನ್ ಮಾಂಜರೆ, ಮಹೇಶ ಶಿವಶರಣ, ಸಿದ್ಧಾರ್ಥ ಬೈಚಬಾಳ ಭಾಗವಹಿಸಿದ್ದರು.