ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳ ಅಕ್ಕಪಕ್ಕದಲ್ಲಿ 100 ಗಜಗಳ ಒಳಗೆ ತಂಬಾಕು ಮಾರಾಟ ನಡೆಯದಂತೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳುವಂತೆ ಹಾಗೂ ಕೋಟ್ಪಾ ಕಾಯಿದೆಯಲ್ಲಿನ ಸೂಚನೆಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ನಿರ್ದೇಶನ ನೀಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳ ಅಕ್ಕಪಕ್ಕದಲ್ಲಿ 100 ಮೀಟರ್‌ ಒಳಗೆ ತಂಬಾಕು ಮಾರಾಟ ನಡೆಯುತ್ತಿರುವ ಕುರಿತಂತೆ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಕ ಪರಿಶೀಲನೆ ಮಾಡಿ ವರದಿ ನೀಡುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ, ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳು ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ, ತಂಬಾಕು ಮುಕ್ತ ಶಾಲೆ, ಕಾಲೇಜು ಘೋಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.


ಜಿಲ್ಲೆಯಲ್ಲಿ ಈಗಾಗಲೇ ತಂಬಾಕು ಮುಕ್ತ ಹಳ್ಳಿಗೆ ಸಂಬಂಧಿಸಿದಂತೆ ಪ್ರತೀ ತಾಲೂಕಿಗೆ 2 ಹಳ್ಳಿಗಳನ್ನು ಆಯ್ಕೆ ಮಾಡಿದ್ದು, ಅವುಗಳಲ್ಲಿ 8 ಹಳ್ಳಿಗಳನ್ನು ತಂಬಾಕು ಮುಕ್ತ ಹಳ್ಳಿ ಎಂದು ಘೋಷಣೆ ಮಾಡಿದ್ದು, ಉಳಿದ 16 ಹಳ್ಳಿಗಳನ್ನು ಶೀಘ್ರದಲ್ಲಿ ಘೋಷಣೆ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಬೇಕು. ಎಲ್ಲಾ ಸರ್ಕಾರಿ ಕಚೇರಿಗಳನ್ನು ಕೂಡಾ ತಂಬಾಕು ಮುಕ್ತ ಕಚೇರಿಯನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಏ. 2025ರಿಂದ ಮಾ. 2026 ರವರೆಗೆ ಜಿಲ್ಲೆಯಾದ್ಯಂತ ಕೋಟ್ಪಾ ಕಾಯಿದೆಯಡಿ ನಡೆಸಿದ ದಾಳಿಗಳಲ್ಲಿ 952 ಪ್ರಕರಣಗಳಲ್ಲಿ ಒಟ್ಟು ₹1,36,200 ದಂಡ ವಿದದಿಸಲಾಗಿದೆ.

ಶಾಲಾ-ಕಾಲೇಜುಗಳಲ್ಲಿ 104 ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ (ಪ್ರಭಾರ) ಕ್ಯಾ. ಡಾ. ರಮೇಶ್ ರಾವ್ ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವ ಪ್ರಸಾದ್ ಗಾಂವಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ, ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಾಂತೇಶ್ ಉಳ್ಳಾಗೆಡ್ಡಿ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಇದ್ದರು.