ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರಿನಲ್ಲಿರುವ ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಒಕ್ಕಲಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್‌ನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಹೋಂ ಸ್ಟೇಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕೆಲವು ಹೋಂಸ್ಟೇ ಅನುಮತಿ ಪಡೆಯದೇ, ಅಕ್ರಮ ದಂಧೆಯಲ್ಲಿ ತೊಡಗುವ ಪರಿಣಾಮ ಪ್ರಾಮಾಣಿಕವಾಗಿ ಕಾನೂನು ಬದ್ಧವಾಗಿ ನಡೆಸುತ್ತಿರುವ ಹೋಂ ಸ್ಟೇ ಮಾಲೀಕರಿಗೂ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಅನಧಿಕೃತ ಹೋಂ ಸ್ಟೇ ಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.ಕಾಫಿ ತೋಟದ ಜತೆಗೆ ಉಪ ಕಸಬಾಗಿ ಬೆಳೆಗಾರರು ಹೋಂ ಸ್ಟೇ ವೃತ್ತಿಯನ್ನು ಅವಲಂಬಿಸಿದ್ದಾರೆ. ಆದರೆ, ಕೆಲವು ಅನಧಿಕೃತ ಹೋಂಸ್ಟೇ ತಪ್ಪಿನಿಂದ ಬಹುತೇಕ ಪ್ರಾಮಾಣಿಕ ಹೋಂಸ್ಟೇಗಳಿಗೆ ಅಧಿಕಾರಿಗಳು ತಪಾಸಣೆ ಹೆಸರಿನಲ್ಲಿ ತೊಂದರೆ ನೀಡಬಾರದು. ಈ ಸಮಸ್ಯೆ ಪರಿಹರಿಸಲು ಪ್ರವಾಸೋದ್ಯಮ ಸಚಿವರು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಮಲೆನಾಡಿನ ಶೈಲಿನ ಊಟೋಪಚಾರದ ವ್ಯವಸ್ಥೆಯಲ್ಲಿ ಆರಂಭಗೊಂಡು, ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಹೋಂ ಸ್ಟೇ ಗಳಲ್ಲಿ ಸಾರ್ವಜನಿಕ ಭದ್ರತೆ, ನೈರ್ಮಲ್ಯವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಹಾಗೂ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆಯ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒತ್ತು ನೀಡುತ್ತಿದೆ. ವಿಶೇಷವಾಗಿ ಜಿಲ್ಲೆಯಲ್ಲಿ ನೈಸರ್ಗಿಕ ಪರಿಸರ ಹಾಗೂ ಕಾಡನ್ನು ನಾಶಗೊಳಿಸದೇ ರೋಪ್‌ವೇ ನಿರ್ಮಿಸಲು ತೀರ್ಮಾನಿಸಿದೆ. ಇದು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಮೆರಗು ಹೆಚ್ಚಿಸಲಿದೆ ಎಂದು ಹೇಳಿದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಅವುಗಳ ಪೈಕಿ ಅನೇಕ ಹೋಂಸ್ಟೇ ಗುಣಮಟ್ಟ, ಮಲೆನಾಡಿನ ಕಲೆ, ಸಂಸ್ಕೃತಿ, ಊಟ, ವಸತಿ ಸೌಕರ್ಯವನ್ನು ಒದಗಿಸುವ ಮೂಲಕ ದೇಶ-ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿವೆ ಎಂದು ಹೇಳಿದರು.
ನಾಡಿನಲ್ಲೇ ಅತಿಹೆಚ್ಚು ಮಳೆ ಬೀಳುವ ಜಿಲ್ಲೆ ನಮ್ಮದು. ಈ ಪರಿಸರ ನಡುವೆ ಹೋಂಸ್ಟೇ ಉದ್ಯಮ ನಡೆಸುವುದು ಸುಲಭದ ಮಾತಲ್ಲ. ಈ ಹೋಂಸ್ಟೇಗಳಿಗೆ ಹೋಗುವ ರಸ್ತೆ ಪರಿಸ್ಥಿತಿಗಳನ್ನು ಅಸೋಸಿಯೇಷನ್ ಪದಾಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದಲ್ಲಿ ರಸ್ತೆ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಹೋಂಸ್ಟೇ ಅಭಿವೃದ್ಧಿ ಜೊತೆಗೆ ಪ್ರವಾಸಿಗರನ್ನು ಪ್ರಕೃತಿ, ಸಂಸ್ಕೃತಿ ಜೊತೆಗೆ ಸದಾಭಿರುಚಿಯನ್ನು ಬೆಳೆಸಲು ಆಕರ್ಷಿಸುವಂತೆ ಮಾಡಿದ್ದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಹೊಂದಲು ಸಾಧ್ಯ. ಪ್ರವಾಸಿಗರೂ ಕೂಡಾ ಜಿಲ್ಲೆಯ ಸೊಬಗನ್ನು ಅನುಭವಿಸಿದರೆ ಮಲೆನಾಡಿನ ಪರಿಸರ ಅರ್ಥವಾಗಲಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೌಂಟಿ ಗಣೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್. ತೇಜಸ್ವಿ, ಉಪಾಧ್ಯಕ್ಷ ಕೆ.ಪಿ.ಪ್ರವೀಣ್, ಕಾರ್ಯದರ್ಶಿ ಅನ್ಸರ್ ಜುವರ್, ಸಹ ಕಾರ್ಯದರ್ಶಿ ಎಂ.ಆರ್. ವರುಣ್‌ಕುಮಾರ್, ನಿರ್ದೇಶಕ ಉತ್ತಮ್‌ಗೌಡ, ಹೊಲದಗದ್ದೆ ಗಿರೀಶ್, ಅಕ್ಷತ್ ಪ್ರಸನ್ನ ಹಾಜರಿದ್ದರು.ಕಾಫಿ ಮಂಡಳಿಯು ಹೋಂ ಸ್ಟೇ ಮಾಲೀಕರು, ಅಸೋಸಿಯೇಷನ್‌ನೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯನಿವರ್ಹಿಸುವುದಕ್ಕೆ ಸಿದ್ಧವಿದೆ. ಹೋಂ ಸ್ಟೇ ಮಾಲೀಕರು ಮತ್ತು ಕಾಫಿ ಬೆಳೆಗಾರರು ಎಫ್‌ಪಿಸಿ ರಚನೆ ಮಾಡಿಕೊಂಡು ಬರುವ ಲಾಭವನ್ನು ತರಬೇತಿ ಮೊದಲಾದ ಕಾರ್ಯಗಳಿಗೆ ಬಳಸಿಕೊಳ್ಳಬಹುದು.
ದಿನೇಶ್ ದೇವವೃಂದ ಅಧ್ಯಕ್ಷ, ಕಾಫಿ ಮಂಡಳಿ.