ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದಲ್ಲಿ ವಿವಿಧ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಹೊರತಾದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬಡಾವಣೆ ಅಭಿವೃದ್ಧಿ, ಕಟ್ಟಡ ನಿರ್ಮಾಣದ ಸಂಬಂಧ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ-2025ರ ನಿಯಮಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ-1961ರ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಪರಿಶೀಲನಾ ಶುಲ್ಕ, ಕಟ್ಟಡ ನಿರ್ಮಾಣ ಸೆಟ್ ಬ್ಯಾಕ್, ಬಡಾವಣೆಗಳ ಉದ್ಯಾನ ಜಾಗ, ಎಫ್‌ಎಎಆರ್, ಬಫರ್ ಜೋನ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ವಸತಿ ಬಡಾವಣೆ ನಿರ್ಮಾಣದ ವೇಳೆ ಕನಿಷ್ಠ 9 ಮೀ. ರಸ್ತೆಗಳನ್ನು ನಿರ್ಮಿಸಬೇಕು. ಪರ್ವತ ಪ್ರದೇಶದಲ್ಲಿ 6 ಮೀಟರ್, ಸಮೂಹ ಮನೆಗಳ ಬಡಾವಣೆಯಲ್ಲಿ 12 ಮೀ., ವಾಣಿಜ್ಯ ನಿವೇಶನಗಳಿಗೆ 12 ಮೀ. ರಸ್ತೆ, ಶಿಕ್ಷಣ ಮತ್ತು ಆರೋಗ್ಯ, ಕೈಗಾರಿಕೆಗಳಿಗೆ ಕನಿಷ್ಠ 12 ಮೀ. ರಸ್ತೆ ಇರಬೇಕು ಎಂದು ನಿಯಮಗಳಲ್ಲಿ ತಿಳಿಸಿದೆ.ಸೆಟ್ ಬ್ಯಾಕ್ ಕಡ್ಡಾಯ:
100 ಚ.ಮೀ.ಗಿಂತ ಹೆಚ್ಚು ವಿಸ್ತೀರ್ಣದ ನಿವೇಶನದಲ್ಲಿ ಮುಂಭಾಗ 1.25 ಮೀಟರ್, ಬಲ ಭಾಗ 0.75 ಮೀಟರ್ (ಹಿಂಭಾಗ -0) ಸೆಟ್ ಬ್ಯಾಕ್ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು. 100 ರಿಂದ 150 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ಮುಂಭಾಗ 1.25 ಮೀಟರ್, ಹಿಂಭಾಗ 1 ಮೀ. ಅಂತರ ಇರಬೇಕು. 300 ಚ.ಮೀ. ಯಿಂದ 500 ಚ.ಮೀ. ವ್ಯಾಪ್ತಿಯ ನಿವೇಶನದಲ್ಲಿ ಮುಂಭಾಗ 2 ಮೀ., ಹಿಂಭಾಗ 1 ಮೀ, ಎಡ ಮತ್ತು ಬಲ ಭಾಗ ತಲಾ 1 ಮೀ. ಸೆಟ್ ಬ್ಯಾಕ್ ಬಿಡಬೇಕು.ನಿವೇಶನ ವಿಸ್ತೀರ್ಣದ ಆಧಾರದ ಮೇಲೆ ಎಫ್‌ಎಆರ್:
ಇನ್ನು ಕಟ್ಟಡ ನಿರ್ಮಿತ ಪ್ರದೇಶ ನಿಗದಿ ಮಾಡಲು ಅನುಮತಿ ನೀಡಿದ ಎಫ್‌ಎಆರ್ (ಫ್ಲೋರ್ ಏರಿಯಾ ರೇಷಿಯೋ) ಪ್ರಮಾಣ ನಿಗದಿ ಮಾಡಿದ್ದು, 510 ಚದರ ಮೀ.ವರೆಗಿನ ಕಟ್ಟಡಗಳಿಗೆ ಎಫ್‌ಎಆರ್ 1.50 ರಷ್ಟು ನೀಡಲಾಗಿದೆ. ಅಂದರೆ 500 ಚ.ಮೀ. ನಿವೇಶನ ವಿಸ್ತೀರ್ಣದಲ್ಲಿ ಒಟ್ಟು 750 ಚ.ಮೀ. ನಿರ್ಮಿತ ಪ್ರದೇಶದಷ್ಟು ನಿರ್ಮಿಸಲು ಅನುಮತಿ ನೀಡಲಾಗಿದೆ.510 ಚ.ಮೀ.ನಿಂದ 1,020 ಚ.ಮೀ.ಗೆ 1.75 ಎಫ್‌ಎಆರ್, 1,020 ರಿಂದ 2025 ಚ.ಮೀ.ವರೆಗೆ 1.75, 2025ರಿಂದ 2050 ಚ.ಮೀ.ವರೆಗೆ 2 ಎಫ್‌ಎಆರ್, 4,050 ರಿಂದ 8,100 ಚ.ಮೀ.ವರೆಗೆ 2.0 ಎಫ್‌ಎಆರ್, 8,100 ರಿಂದ 12,200 ಚ.ಮೀ.ವರೆಗೆ 2.25 ಎಫ್‌ಎಆರ್, 12,200 ರಿಂದ ಮೇಲ್ಪಟ್ಟು 2.50 ರಷ್ಟು ಎಫ್‌ಎಆರ್ ನೀಡಲು ಅವಕಾಶ ಕಲ್ಪಿಸಲಾಗಿದೆ.
400 ಕೆ.ವಿ. ಮಾರ್ಗದಿಂದ 26 ಮೀ. ನಿರ್ಮಾಣ ನಿಷಿದ್ಧ:ಹೈಟೆನ್ಷನ್ ವಿದ್ಯುತ್ ಮಾರ್ಗದ ಬಳಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ ಮುಂದುವರೆಸಲಾಗಿದೆ. ಕೆಲ ತಿದ್ದುಪಡಿಗಳೊಂದಿಗೆ 400 ಕೆ.ವಿ. ಸಾಮರ್ಥ್ಯದ ಮಾರ್ಗದಿಂದ 26 ಮೀ. ಕಟ್ಟಡ ನಿರ್ಮಾಣ ನಿಷಿದ್ಧ ಎಂದು ಬಫರ್ ವಲಯ ಘೋಷಿಸಲಾಗಿದೆ.
ಇನ್ನು 220 ಕೆ.ವಿ. ಮಾರ್ಗದಿಂದ 17.5 ಮೀಟರ್, 132 ಕೆ.ವಿ. ಮಾರ್ಗದಿಂದ 13.20 ಮೀಟರ್, 110 ಕೆ.ವಿ. ಮಾರ್ಗದಿಂದ 11 ಮೀ., 66 ಕೆ.ವಿ. ಮಾರ್ಗದಿಂದ 8 ಮೀಟರ್ 33 ಕೆ.ವಿ. 7.50 ಮೀಟರ್, 11 ಕೆ.ವಿ. ಮಾರ್ಗದಿಂದ 3.50 ಮೀಟರ್ ಬಫರ್ ಜೋನ್ ಆಗಿ ಗುರುತಿಸಲಾಗಿದೆ. ರೈಲ್ವೆ ಮಾರ್ಗದ ಪಕ್ಕದಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದರೆ ರೈಲ್ವೆ ಇಲಾಖೆಯಿಂದ ಎನ್‌ಒಸಿ ಕಡ್ಡಾಯ ಎಂದು ಹೇಳಲಾಗಿದೆ.ಶೇ.5 ರಷ್ಟು ಉದ್ಯಾನಕ್ಕೆ ಮೀಸಲು:
4,000 ಚದರ ಚ.ಮೀಟರ್‌ನಿಂದ 20,000 ಮೀಟರ್ ವರೆಗೆ ಶೇ. 5 ರಷ್ಟು ಉದ್ಯಾನಕ್ಕೆ ಕಾಯ್ದಿರಿಸಬೇಕು. 20,000 ಚ.ಮೀ.ಗಿಂತ ಹೆಚ್ಚು ಜಾಗ ಇದ್ದರೆ ಶೇ.5 ರಿಂದ ಶೇ.10 ರಷ್ಟು ಉದ್ಯಾನಕ್ಕೆ ಮೀಸಲಿಡಬೇಕು. ಯಾವುದೇ ಬಡಾವರಣೆ ಅಭಿವೃದ್ಧಿ ವೇಳೆ ನಕ್ಷೆ ಮಂಜೂರಾತಿ ನೀಡಲು 1,000 ಚ.ಮೀಟ್‌ವರೆಗಿನ ಜಮೀನಿಗೆ 500 ರು. ಪರಿಶೀಲನಾ ಶುಲ್ಕ ನಿಗದಿ ಮಾಡಲಾಗಿದೆ. 1,000 ಚ.ಮೀ. ಮೇಲ್ಪಟ್ಟ ಜಮೀನಿಗೆ ಪ್ರತಿ 1,000 ಚ.ಮೀ.ಗೆ 500 ರು. ಜತೆಗೆ ಪ್ರತಿ ಚದರ ಮೀಟರ್‌ಗೆ 50 ಪೈಸೆ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗಿದೆ.ಬಾಕ್ಸ್...
ಪ್ರೀಮಿಯಂ ಎಫ್‌ಎಆರ್ ಪ್ರಸ್ತಾಪವಿಲ್ಲ:ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾದಾಗ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಪ್ರೀಮಿಯಂ ಎಫ್‌ಎಆರ್ ತರುತ್ತಿರುವುದಾಗಿ ಹೇಳಿದ್ದರು. ಅನುಮತಿಸಿದ ಎಫ್‌ಎಆರ್‌ಗಿಂತ 0.4 ರಷ್ಟು ಹೆಚ್ಚು ಎಫ್‌ಎಆರ್‌ನ್ನು ಹೆಚ್ಚುವರಿ ಹಣ ಪಾವತಿಸಿ ಪ್ರೀಮಿಯಂ ಎಫ್‌ಎಆರ್ ರೂಪದಲ್ಲಿ ಪಡೆಯಬಹುದು ಎಂದು ಹೇಳಲಾಗಿತ್ತು. ಆದರೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ-2025ರ ನಿಯಮಗಳಲ್ಲಿ ಪ್ರೀಮಿಯಂ ಎಫ್‌ಎಆರ್ ಬಗ್ಗೆ ಪ್ರಸ್ತಾಪ ಮಾಡಿಲ್ಲ.
==ಮುಂದಿನ ಆವೃತ್ತಿ ಅಥವಾ ಸಿಟಿ ಆವೃತ್ತಿಗೆ...