ಕಲಬುರಗಿ: ಎಂಸಿಸಿ ಕಟ್ಟುನಿಟ್ಟಾಗಿ ಪಾಲಿಸಿ, ಚೆಕ್ ಪೋಸ್ಟ್ ತಪಾಸಣೆ ತೀವ್ರಗೊಳಿ

| Published : Mar 21 2024, 01:04 AM IST

ಸಾರಾಂಶ

ಎಲ್ಲೆಡೆ ಮಾದರಿ ನಿತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಂದು ವಾಹನ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭೆ ಚುನಾವಣೆ ಘೋಷಣೆಯಾಗಿ ಐದು ದಿನಗಳು ಕಳೆದಿವೆ. ಎಲ್ಲೆಡೆ ಮಾದರಿ ನಿತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಂದು ವಾಹನ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬುಧವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ಚುನಾವಣೆ ಸಮಿತಿಯ ವಿವಿಧ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು, ವಿಶೇಷವಾಗಿ ಆಳಂದ, ಅಫಜಲ್ಪುರ, ಚಿಂಚೋಳಿ ಅಂತಾರಾಜ್ಯ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದರು.

ಎಸ್.ಎಸ್.ಟಿ ಮತ್ತು ಅಬಕಾರಿ ತಂಡಗಳು ಪ್ರತಿನಿತ್ಯ ಸೀಜರ್ ಬಗ್ಗೆ ಕೂಡಲೆ‌ ವರದಿ ನೀಡಬೇಕು. ಚೆಕ್‌ಪೋಸ್ಟ್‌ನಲ್ಲಿ 10 ಲಕ್ಷ ರು. ಮೇಲ್ಪಟ್ಟ ಹಣ ದೊರೆತಲ್ಲಿ, ಕೂಡಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ವಾಣಿಜ್ಯ ತೆರಿಗೆ ಇಲಾಖೆಯವರು ಉಚಿತ ಉಡುಗೊರೆ ಸಾಗಾಟ ಕುರಿತು ಎಸ್.ಎಸ್.ಟಿ. ತಂಡಕ್ಕೆ ಮಾಹಿತಿ ನೀಡಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಆಯಾ ತಾಲೂಕಿನ ಸಹಾಯಕ ಚುನಾವಣಾಧಿಕಾರಿಗಳು ಮುಂದಿನ ಎರಡ್ಮೂರು ದಿನದಲ್ಲಿ ಅಬಕಾರಿ, ವಾಣಿಜ್ಯ ತೆರಿಗೆ, ಪ್ರಿಂಟರ್ಸ್, ಬ್ಯಾಂಕರ್ಸ್, ಆದಾಯ ತೆರಿಗೆ ಅಧಿಕಾರಿಗಳ ಸಭೆ ಕರೆದು ಚುನಾವಣಾ ನೀತಿ ಸಂಹಿತೆ ಪಾಲನೆ ಬಗ್ಗೆ ತಿಳಿಹೇಳಬೇಕು. ತಾಲೂಕಿನಲ್ಲಿ ಸಿಂಗಲ್ ವಿಂಡೋ‌ ಕಾರ್ಯಪ್ರವೃತ್ತಗೊಳಿಸಿ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಬೇಕು ಎಂದರು.

ಇ.ವಿ‌.ಎಂ. ರ್‍ಯಾಂಡಮೈಸೇಷನ್ ಕಾರ್ಯ ಕೂಡಲೆ ಮುಗಿಸಬೇಕು.‌ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದರ ಮೇಲುಸ್ತುವಾರಿ ಮಾಡಬೇಕು. ಸ್ಟ್ರಾಂಗ್ ರೂಂ ಸುರಕ್ಷೆ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಪ್ರತಿ ಸ್ಟ್ರಾಂಗ್ ರೂಂ ಪ್ರವೇಶಕ್ಕೆ ಒಂದೇ ಪ್ರವೇಶ ದ್ವಾರ ಮಾಡಿ ಅಲ್ಲಿ ಪ್ರತಿಯೊಬ್ಬರ ಚಲನವಲನ ಬಗ್ಗೆ ನಿಗಾ ಇಡಲು ಕಡ್ಡಾಯವಾಗಿ ಸಿ.ಸಿ.ಟಿ.ವಿ ಅಳವಡಿಸಬೇಕು ಎಂದರು.

ಸಿ-ವಿಜಿಲ್ ದೂರು 1 ಗಂಟೆಯಲ್ಲಿ ಕ್ರಮ: ಚುನಾವಣಾ ಕುರಿತಂತೆ ಸಿ-ವಿಜಿಲ್‌ನಲ್ಲಿ ಏನೇ ದೂರು ಬಂದಲ್ಲಿ ಒಂದು ಗಂಟೆಯಲ್ಲಿ ಅದರ‌ ಮೇಲೆ ಕ್ರಮ ವಹಿಸಬೇಕು. ವಿಳಂಬ ನೀತಿ ಸಹಿಸಲ್ಲ‌ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಎಸ್.ಪಿ. ಅಕ್ಷಯ ಹಾಕೈ ಮಾತನಾಡಿ, ಚೆಕ್‌ಪೋಸ್ಟ್‌ನಲ್ಲಿ ಸೈನೇಜ್ ಬೋರ್ಡ್ ಹಾಕಿಕೊಳ್ಳಬೇಕು. ಪ್ರತಿ ವಾಹನ ತಪಾಸಣೆಗೆ ಒಳಪಡಿಸಬೇಕು. ಮದ್ಯ, ಹಣ, ಉಚಿತ ಉಡುಗೊರೆ ಏನೇ ವಶ ಮಾಡಿಕೊಂಡಿದ್ದಲ್ಲಿ ಅದನ್ನು ಪ್ರತಿನಿತ್ಯ ಬೆಳಗ್ಗೆ 6ರ ಒಳಗೆ ವರದಿ ಸಲ್ಲಿಸಬೇಕು ಎಂದರು.

ಸೋಷಿಯಲ್‌ ಮೀಡಿಯಾ ಮೇಲೆ ಹದ್ದಿನ‌ ಕಣ್ಣಿಡಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಡಿಜಿಟಲ್ ಪ್ರಚಾರ ಹೆಚ್ಚಾಗಿದೆ. ಹೀಗಾಗಿ ರಾಜಕೀಯ ಪಕ್ಷ, ಅಭ್ಯರ್ಥಿಗಳ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್, ಇನ್ಸ್ಟಾಗ್ರಾಂ ಖಾತೆಗಳ‌ ಮೇಲೆ ನಿಗಾ ವಹಿಸಬೇಕು. ಅಲ್ಲಿ ಎಂ.ಸಿ.ಸಿ ಉಲ್ಲಂಘನೆ ಕಂಡುಬಂದಲ್ಲಿ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಹೇಳಿದರು.

ಸಭೆಯಲ್ಲಿ ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಶಾಲಾ ಸಾಕ್ಷರತೆ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ಅನೇಕ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.