ಸಾರಾಂಶ
ಕುರುಗೋಡು: ಕಾರ್ಖಾನೆ ಸ್ಥಾಪಿಸುವುದಾಗಿ ರೈತರನ್ನು ವಂಚಿಸಿ ಕಡಿಮೆ ಬೆಲೆಗೆ ರೈತರ ಭೂಮಿ ಖರೀದಿಸಿ ಕಾರ್ಖಾನೆ ಸ್ಥಾಪಿಸದ, ಉದ್ಯೋಗ ಭತ್ಯೆ ನೀಡದ ಮಿತ್ತಲ್, ಎನ್ಎಂಡಿಸಿ ಬ್ರಾಹ್ಮಿಣಿ ಕಾರ್ಖಾನೆ ಹಾಗೂ ಸರ್ಕಾರದ ವಿರುದ್ಧ ೬೦೦ನೇ ದಿನದ ಅನಿರ್ದಿಷ್ಟ ಧರಣಿ ಅಂಗವಾಗಿ ಕುಡತಿನಿಯಲ್ಲಿ ಮಂಗಳವಾರ ವಿವಿಧ ಕನ್ನಡ ಪರ ಸಂಘಟನೆಗಳು ಮತ್ತು ಮುಖಂಡರು ಮುಷ್ಕರ ಕೈಗೊಂಡರು.ಮುಷ್ಕರದಲ್ಲಿ ಕುಡತಿನಿ ಸೇರಿ ಅರಗಿನಡೋಣಿ, ಜಾನೆಕುಂಟೆ, ವೇಣಿವಿರಾಪುರ, ಕೊಳಗಲ್ಲು, ಏರಂಗಳ್ಳಿ ಗ್ರಾಮಗಳ ರೈತರು ಹಾಗೂ ಮುಖಂಡರು, ವಿವಿಧಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಬಳ್ಳಾರಿ ರಸ್ತೆ, ತೋರಣಗಲ್ಲು ರಸ್ತೆ, ಕುರುಗೋಡು, ಕಂಪ್ಲಿ, ಸಂಡೂರು ರಸ್ತೆಗಳನ್ನು ಸಂಪೂರ್ಣ ಬಂದ್ ಗೆ ಕರೆಕೊಟ್ಟಿದ್ದು ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು.ಇನ್ನು ಆಸ್ಪತ್ರೆ ಮತ್ತು ಮೆಡಿಕಲ್ ಸ್ಟೋರ್ ಗಳನ್ನು ಹೊರತು ಪಡಿಸಿ ಪ್ರತಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ್ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ೨೦೧೦ರಿಂದ ಭೂಮಿ ಕಳೆದುಕೊಂಡ ರೈತರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಕಾರ್ಖಾನೆಗಳು ನಷ್ಟ ಹೊಂದಿದರೆ ಸರ್ಕಾರ ಕಂಪನಿಗಳಿಗೆ ಪರಿಹಾರ ಘೋಷಿಸುತ್ತವೆ. ಆದರೆ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ರೈತರಿಗೆ ಸರ್ಕಾರ ಅಥವಾ ಕಂಪನಿಗಳಿಂದ ಹಣ ಕೊಡುವುದು ಬೇಡ. ರೈತರು ಶೇ.೩೦ ನೀಡುವ ತೆರಿಗೆ ಹಣದಲ್ಲಿ ಮೂರು ಕಂಪನಿಗಳಿಗೆ ನೀಡುತ್ತಿರುವ ₹೩೬ ಸಾವಿರ ಕೋಟಿಯಲ್ಲಿ ರೈತರ ಪರವಾಗಿ ಕೋರ್ಟ್ ಆದೇಶ ನೀಡಿರುವುದರ ಪ್ರಕಾರ ೧೩ ಸಾವಿರ ಎಕರೆಗೆ ₹೧೩ ಸಾವಿರ ಕೋಟಿ ಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಕೈಗಾರಿಕೆ ಮಂತ್ರಿ ಎಂ.ಬಿ. ಪಾಟೀಲ್ ಹಾಗೂ ಸಿಎಂ ಸಿದ್ದರಾಮಯ್ಯ ಸಮಸ್ಯೆಯನ್ನು ಕೂಡಲೇ ಸರಿಪಡಿಸಿ ರೈತರ ಸಭೆ ಕರೆಯುತ್ತೇನೆ ಎಂದು ಭರವಸೆ ನೀಡಿ ಕೈತೊಳೆದುಕೊಂಡಿದ್ದಾರೆ. ಇಲ್ಲಿವರೆಗೆ ಯಾವುದೇ ಸಭೆ ಕರೆದಿಲ್ಲ. ಜಿಲ್ಲಾಧಿಕಾರಿ ಮತ್ತು ಕೋರ್ಟ್ ನಿಯಮವಳಿಗಳನ್ನು ಪಾಲಿಸದೇ ಸರ್ಕಾರ ಮತ್ತು ಕಂಪನಿಗಳು ಒಗ್ಗೂಡಿ ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.ಜಿಲ್ಲಾಧ್ಯಕ್ಷ ವಿ. ಎಸ್. ಶಿವಶಂಕರ ಮಾತನಾಡಿ, ಕೋರ್ಟ್ ಆದೇಶದಂತೆ ಎಕರೆಗೆ ₹1.20 ಕೋಟಿ ಇದೆ. ಅದರಂತೆ ಹಣ ಕೊಡಿ. ಇಲ್ಲವೇ ಭೂಮಿಗಳನ್ನು ವಾಪಸ್ ನೀಡಿ ಎಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ಗುರುರಾಜ್ ಎಂ. ಛಲವಾದಿ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ರೈತರ ಭೂಮಿ ವಿಷಯ ಈಗಾಗಲೇ ಸಿಎಂ ಮಟ್ಟದಲ್ಲಿ ಚರ್ಚೆ ನಡಿಯುತ್ತಿದೆ. ಸಾವಿರಾರು ಕೋಟಿ ವೆಚ್ಚ ಆಗಿರುವುದು ಸ್ವಲ್ಪ ಸಮಯ ಬೇಕಾಗುತ್ತದೆ. ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದರು.ಪ್ರತಿಭಟನೆಯನ್ನು ೫ ಗಂಟೆಗೆ ವಾಪಸ್ ಪಡೆದ ನಂತರ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಎಸ್ಪಿ ಶೋಭಾರಾಣಿ, ಡಿವೈಎಸ್ಪಿ ಪ್ರಸಾದ್ ಗೋಕಲೆ, ಸಿಪಿಐ ವಿಶ್ವನಾಥ್ ಹಿರೆಗೌಡ, ಪಿಎಸ್‌ಐ ಶಾಂತಕುಮಾರ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು, ಬುಡಕಟ್ಟು ಸಮುದಾಯದ ರಾಜ್ಯ ಮುಖಂಡ ಎಸ್.ವೈ. ಗುರುಶಾಂತ, ದೇವದಾಸಿ ವಿಮೋಚನಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸ್ವಾಮಿ, ನರಸಿಂಹ ರಾಜು, ಬಾವಿ ಶಿವಕುಮಾರ್, ಎಂ.ತಿಪ್ಪೇಸ್ವಾಮಿ, ಜಂಗ್ಲಿಸಾಬ್, ಚನ್ನಬಸಯ್ಯ, ಸಂಪತ್ಕುಮಾರ್ ಸೇರಿ ವಿವಿಧ ಸಂಘಟನೆ ಮುಖಂಡರು ಇದ್ದರು.