ಮುಲಾಜಿಲ್ಲದೆ ಉಗ್ರರ ಸೆದೆಬಡಿಯಿರಿ

| Published : Apr 24 2025, 12:02 AM IST

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ನಡೆದ ಪ್ರವಾಸಿಗರ ಮೇಲಿನ ಘೋರ ದಾಳಿಯಲ್ಲಿ ಮೂವರು ಕನ್ನಡಿಗರು ಸೇರಿದಂತೆ 30 ಜನರ ಹತ್ಯೆ ಖಂಡಿಸಿ ನಾಗರಿಕರು ಗುಬ್ಬಿಯಲ್ಲಿ ಉಗ್ರರಿಗೆ ಗುಂಡಿಕ್ಕಿ ಕೊಲ್ಲುವಂತೆ ಘೋಷಣೆ ಕೂಗಿ ಪ್ರವಾಸಿಗರ ಸಾವಿಗೆ ಮೇಣದಬತ್ತಿ ಬೆಳಗಿಸಿ ಸಂತಾಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಜಮ್ಮು ಕಾಶ್ಮೀರದಲ್ಲಿ ನಡೆದ ಪ್ರವಾಸಿಗರ ಮೇಲಿನ ಘೋರ ದಾಳಿಯಲ್ಲಿ ಮೂವರು ಕನ್ನಡಿಗರು ಸೇರಿದಂತೆ 30 ಜನರ ಹತ್ಯೆ ಖಂಡಿಸಿ ನಾಗರಿಕರು ಗುಬ್ಬಿಯಲ್ಲಿ ಉಗ್ರರಿಗೆ ಗುಂಡಿಕ್ಕಿ ಕೊಲ್ಲುವಂತೆ ಘೋಷಣೆ ಕೂಗಿ ಪ್ರವಾಸಿಗರ ಸಾವಿಗೆ ಮೇಣದಬತ್ತಿ ಬೆಳಗಿಸಿ ಸಂತಾಪ ಸೂಚಿಸಿದರು.ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ ಹಲವರು ಮೃತಪಟ್ಟ ಘಟನೆಯಿಂದ ಕಾಶ್ಮೀರ ಕಣಿವೆಯಲ್ಲಿ ಭೀತಿ ಅವರಿಸಿದ್ದು ರಾಷ್ಟ್ರವ್ಯಾಪ್ತಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗುಬ್ಬಿ ಪಟ್ಟಣದಲ್ಲಿ ನಾಗರೀಕರು ಗುಬ್ಬಿಯ ಕೋರ್ಟ್ ಸರ್ಕಲ್ ಬಳಿ ದಿಢೀರ್ ಜಮಾಯಿಸಿ ಉಗ್ರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿ ಖಂಡನೀಯ. ಈ ಕೂಡಲೇ ಅಮಾಯಕ ಪ್ರವಾಸಿಗರ ಸಾವಿಗೆ ಕಾರಣವಾದ ಉಗ್ರರನ್ನು ಮುಲಾಜಿಲ್ಲದೆ ಸದೆಬಡಿಯುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.ಪಪಂ ಸದಸ್ಯ ಮಹಮ್ಮದ್ ಸಾದಿಕ್ ಮಾತನಾಡಿ, ನೆಮ್ಮದಿ ನೆಲೆಸಿದ್ದ ಪ್ರವಾಸಿ ತಾಣದ ಮೇಲೆ ದಾಳಿ ನಡೆಸಿ ಅಶಾಂತಿ ನೆಲೆಸುವಂತೆ ಮಾಡಿದ ಉಗ್ರರನ್ನು ಹುಡುಕಿ ಗುಂಡಿಕ್ಕಿ ಕೊಲ್ಲುವ ಜೊತೆಗೆ ಮುಂದೆ ಇಂತಹ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಶಾಂತಿ ನೆಮ್ಮದಿ ಇದ್ದ ದೇಶದಲ್ಲಿ ಉಗ್ರ ಚಟುವಟಿಕೆ ಮಾಡುವ ಉಗ್ರರು ಮತ್ತೊಮ್ಮೆ ಭಾರತಕ್ಕೆ ನುಸುಳದಂತೆ ಎಚ್ಚರಿಕೆ ನೀಡಬೇಕಿದೆ. ಉಗ್ರರ ಮಟ್ಟ ಹಾಕಿ ಭಾರತ ಖಡಕ್ ಸಂದೇಶ ನೀಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ಮುಖಂಡ ಜಿ.ಡಿ.ಸುರೇಶಗೌಡ ಮಾತನಾಡಿ, ಪ್ರವಾಸಕ್ಕೆ ತೆರಳಿದ್ದ ಭಾರತೀಯರ ಮೇಲೆ ಧರ್ಮ ಆಧಾರಿತದ ದಾಳಿ ನಡೆಸಿ ಕ್ರೌರ್ಯ ಮರೆದ ಉಗ್ರರನ್ನು ಸಹಿಸುವ ಮಾತಿಲ್ಲ. ಕಳೆದ ದಿನ ನಡೆದ ಈ ದುರ್ಘಟನೆ ಭಾರತವನ್ನೇ ಬೆಚ್ಚಿ ಬೀಳಿಸಿದ ಕೃತ್ಯ ಕನ್ನಡಿಗರಿಗೆ ನೋವಿನ ಸಂಗತಿಯಾಗಿದೆ. ಕೃತ್ಯಕ್ಕೆ ಕಾರಣರಾದ ಉಗ್ರರನ್ನು ಸದೆಬಡಿಯಲು ಭಾರತ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಜಿ.ಆರ್.ಶಿವಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕಾಂತರಾಜು, ವೀರಶೈವ ಮಹಾಸಭಾ ಅಧ್ಯಕ್ಷ ಮಂಜುನಾಥ್, ಕ್ರೀಡಾ ಪ್ರೋತ್ಸಾಹಕ ಶಂಕರ್ ಕುಮಾರ್, ವೀರಶೈವ ಯುವಸೇನೆ ಅಧ್ಯಕ್ಷ ಅರ್ಜುನ್, ಪಿಎಲ್ ಡಿ ಬ್ಯಾಂಕ್ ಸದಸ್ಯರಾದ ನಾಗರಾಜು, ಡಿ.ರಘು, ಪಪಂ ಮಾಜಿ ಸದಸ್ಯ ವಿರೂಪಾಕ್ಷ, ವರ್ತಕರ ಸಂಘದ ಅಧ್ಯಕ್ಷ ದಯಾನಂದಮೂರ್ತಿ, ಲಯನ್ಸ್ ಕೀರ್ತಿರಾಜ್, ಮುಖಂಡರಾದ ಮಲ್ಲಿಕಾರ್ಜುನ್, ಪ್ರಮೋದ್, ಸುರುಗೇನಹಳ್ಳಿ ರಂಗನಾಥ್ ಸೇರಿದಂತೆ ಪಟ್ಟಣದ ನಾಗರೀಕರು ಭಾಗವಹಿಸಿದ್ದರು.