ಸಾರಾಂಶ
ಹೊಸಪೇಟೆಯಲ್ಲಿ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ, ತಾಯಿ-ಶಿಶು ಮರಣಗಳ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಹೊಸಪೇಟೆಇದೇ ವರ್ಷಾಂತ್ಯಕ್ಕೆ ದಡಾರ ಮತ್ತು ರುಬೆಲಾ ಮುಕ್ತ ಜಿಲ್ಲೆಯನ್ನಾಗಿಸಲು ವೈದ್ಯರೊಂದಿಗೆ ಆರೋಗ್ಯ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ದಡಾರ ಮತ್ತು ರುಬೆಲಾ ನಿರ್ಮೂಲನಾ ಕಾರ್ಯಕ್ರಮದ ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆ ಮತ್ತು ತಾಯಿ ಮತ್ತು ಶಿಶು ಮರಣಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದಡಾರ, ರುಬೆಲಾ ರೋಗಿಗಳ ಬಗ್ಗೆ ವೈದ್ಯರು ವಿಶೇಷ ಕಾಳಜಿ ವಹಿಸಬೇಕಿದೆ. ವರ್ಷಾಂತ್ಯದೊಳಗೆ ದಡಾರ ಮತ್ತು ರುಬೆಲಾ ರೋಗಮುಕ್ತವನ್ನಾಗಿಸಲು ಗುರಿಯನ್ನು ನಿಗದಿಪಡಿಸಿ ಜಿಲ್ಲೆಯಲ್ಲಿ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಬೇಕಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘ-ಸಂಸ್ಥೆಗಳು, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಆಯುಷ್ ಇಲಾಖೆಯಿಂದ ಗರ್ಭಿಣಿ ಮತ್ತು ಬಾಣಂತಿಯರ ತಪಾಸಣೆ, ಸುರಕ್ಷಿತ ಹೆರಿಗೆ ಹಾಗೂ ಪೌಷ್ಟಿಕಾಂಶದ ಬಗ್ಗೆ ಆಪ್ತ ಸಮಲೋಚನೆ ಕೈಗೊಳ್ಳುವುದು ಮತ್ತು ಆಯುಷ್ ಕೇಂದ್ರದಲ್ಲಿ ನಿಯಮಿತವಾಗಿ ಗರ್ಭಿಣಿಯರಿಗೆ ತಪಾಸಣೆ ನಡೆಸಿ ಲಸಿಕೆ ನೀಡಬೇಕು. ಕೇಂದ್ರ ಸರ್ಕಾರದಿಂದ ಗರ್ಭಿಣಿಯರಿಗೆ ಮೊಬೈಲ್ ಮೂಲಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈಚೆಗೆ ಕಿಲ್ಕಾರಿ ಅಭಿಯಾನ ಆರಂಭಿಸಲಾಗಿದೆ. ಗರ್ಭಿಣಿಯರನ್ನು ಕಿಲ್ಕಾರಿ ಆಪ್ ಮೂಲಕ ನೋಂದಾಯಿಸಿ ಪ್ರತಿ ಗರ್ಭಿಣಿಯರ ಆರೈಕೆಗೆ ನಿಗದಿತ ವೇಳೆಗೆ ಸಲಹೆ ಸೇರಿದಂತೆ ವೈದ್ಯಕೀಯ ಚಿಕಿತ್ಸೆಗಳ ಫಾಲೋಅಪ್‌ಗಳನ್ನು ನೇರವಾಗಿ ತಿಳಿಸುವ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರು ಚಿಕಿತ್ಸೆಗೆ ಬಂದಾಗ ಕಡ್ಡಾಯವಾಗಿ ಇಸಿಜಿ ಪರೀಕ್ಷೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ್ ಮಾತನಾಡಿ, ದಡಾರ ಮತ್ತು ರುಬೆಲಾ ವೈರಾಣುವಿನಿಂದ ಬರುವ ಕಾಯಿಲೆಯಾಗಿದ್ದು, ಕೆಮ್ಮು ಮತ್ತು ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರದಿಂದ ನ್ಯೂಮೋನಿಯಾ, ಅತಿಸಾರ ಭೇದಿ, ಮೆದುಳಿನ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದರು.ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ, ವೈದ್ಯರಾದ ಡಾ. ಹರಿಪ್ರಸಾದ್, ಡಾ. ಭಾಸ್ಕರ್, ಡಾ. ರಾಧಿಕಾ, ಡಾ. ಸತೀಶ್ಚಂದ್ರ, ಡಾ. ಷಣ್ಮುಖ ನಾಯ್ಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಆರೋಗ್ಯ ನಿರೀಕ್ಷಕ ಧರ್ಮನಗೌಡ ಭಾಗವಹಿಸಿದ್ದರು.