ಸಾರಾಂಶ
ಶಿರಹಟ್ಟಿ: ಮಕ್ಕಳು ದೇಶದ ಸಂಪತ್ತಾಗಿದ್ದು, ಅವರ ಸರ್ವಾಂಗೀಣ ಬೆಳವಣಿಗೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪಾಲಕರು ಶ್ರಮಿಸಬೇಕು. ಸಮಾಜ ಕೂಡ ಮಕ್ಕಳ ಸಾಧನೆಗೆ ಸದಾ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಯುವ ಮುಖಂಡ ಸಂತೋಷ ಕುರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೯೫ ರಷ್ಟು ಅಂಕ ಪಡೆದು ಸಾಧನೆ ಮಾಡಿದ ಕುರುಬ ಸಮಾಜದ ವಿದ್ಯಾರ್ಥಿ ವಿನಾಯಕ ರಾಮಣ್ಣ ಕಂಬಳಿ ಅವರನ್ನು ಮೇಗೇರಿ ಓಣಿಯ ಕರಿಸಿದ್ದೇಶ್ವರ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ವಿದ್ಯಾರ್ಥಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಇಂದಿನ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ತಮ್ಮಲ್ಲಿರುವ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಜತೆಗೆ ಪಠ್ಯ ಪುಸ್ತಕ ಹೆಚ್ಚು ಓದಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ತಂದೆ ತಾಯಿಗಳ ಪಾತ್ರ ಕೂಡ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.
ತಲೆ ತಗ್ಗಿಸಿ ಪುಸ್ತಕ ಓದಿ ಮಸ್ತಕದಲ್ಲಿ ತುಂಬಿಕೊಂಡರೆ ಮುಂದಿನ ದಿನದಲ್ಲಿ ಆ ಪುಸ್ತಕದ ಜ್ಞಾನ ಉತ್ತಮ ಭವಿಷ್ಯ ರೂಪಿಸಿ ತಮ್ಮನ್ನು ಈ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದು ಕಿವಿಮಾತು ಹೇಳಿದರು.ಸಮಾಜದ ಮಕ್ಕಳಿಗೆ ಶಿಕ್ಷಣದ ಜತೆಗೆ ಮುಂದಿನ ದಿನಗಳಲ್ಲಿ ಜೀವನ ಹೇಗೆ ರೂಪಸಿಕೊಳ್ಳಬೇಕು ಎಂಬ ಜ್ಞಾನ ಹಿರಿಯರು, ಪಾಲಕರು ನೀಡಬೇಕು. ನಮ್ಮ ಸಮಾಜದ ವಿದ್ಯಾರ್ಥಿ ವಿನಾಯಕ ರಾಮಣ್ಣ ಕಂಬಳಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗುವುದರೊಂದಿಗೆ ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟ ಪ್ರತಿನಿಧಿಸಿ ಸಮಾಜದ ಊರಿನ ಕೀರ್ತಿ ಹೆಚ್ಚಿಸಿದ್ದು, ಇವನಂತೆ ಎಲ್ಲ ಮಕ್ಕಳು ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೂಡ ಬರೀ ಅಂಕಗಳಿಕೆಗೆ ಸೀಮಿತರಾಗದೇ ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಎದುರಿಸುವ ಶಕ್ತಿ ಮೈಗೂಡಿಸಿಕೊಳ್ಳಬೇಕು. ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಮುಂದಿನ ಕಾಲೇಜು ವ್ಯಾಸಂಗದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲು ಸಮಾಜ ಕೂಡ ಮುಂದಾಗಬೇಕು.ವಿದ್ಯಾರ್ಥಿ ಜೀವನದಲ್ಲಿಯೇ ನಾವು ಏನು ಸಾಧನೆ ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿ ಕಾರ್ಯಪ್ರವೃತ್ತರಾಗಬೇಕು. ಅಂದಾಗ ಮಾತ್ರ ಸಾಧನೆ ಸಾಧ್ಯ.ಇಂದು ನೀವು ಮಾಡಿದ ಸಾಧನೆ ನಿಮಗೆ ಸ್ಪೂರ್ತಿ ತಂದಿದ್ದು ಇಲ್ಲಿಂದ ಇನ್ನು ಹೆಚ್ಚು ಅಧ್ಯಯನ ಮಾಡುವ ಮೂಲಕ ಇನ್ನು ಹೆಚ್ಚು ಹೆಚ್ಚು ಮಹತ್ತರ ಸಾಧನೆ ಮಾಡಿ ಸಮಾಜದ ಕೀರ್ತಿ ಬೆಳಗಬೇಕು ಎಂದರು.
ಪಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪಗೌಡ್ರ ಅಣ್ಣಿಗೇರಿ, ಸೋಮನಗೌಡ ಮರಿಗೌಡ್ರ, ಯಲ್ಲಪ್ಪ ಹಾಲಪ್ಪನವರ, ಕರಿಯಪ್ಪ ಬಳೂಟಗಿ, ಸುರೇಶ ಕುರಿ, ರಾಮಣ್ಣ ಕಂಬಳಿ, ಮುತ್ತು ಗೂಳಪ್ಪನವರ, ಮಲ್ಲಪ್ಪ ಗುಕ್ಕನವರ ಸೇರಿ ಇತರರು ಉಪಸ್ಥಿತರಿದ್ದರು.