ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು, ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವಂತಾಗಬೇಕು ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.

ಮಡಿಕೇರಿ: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು, ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವಂತಾಗಬೇಕು ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಮರಗೋಡು ಗೌಡ ಸಮಾಜ ಸಂಯುಕ್ತಾಶ್ರಯದಲ್ಲಿ ಮರಗೋಡು ಗೌಡ ಸಮಾಜದ ಆವರಣದಲ್ಲಿ ಅರೆಭಾಷೆ ಗ್ರಾಮೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡದ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸಿದಲ್ಲಿ ಕನ್ನಡ ಭಾಷೆಯನ್ನೂ ಸಹ ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಮಕ್ಕಳು ಮತ್ತು ಯುವಜನರಿಗೆ ಕಲಿಸುವಂತಾಗಬೇಕು ಎಂದು ಅವರು ನುಡಿದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಅಕಾಡೆಮಿ ಮೂಲಕ ಹಲವು ಪುಸ್ತಕಗಳನ್ನು ಹೊರತರಲಾಗುತ್ತಿದೆ. ಹಾಗೆಯೇ ತ್ರೈಮಾಸಿಕ ‘ಹಿಂಗಾರ’ ಪುಸ್ತಕವನ್ನು ಪ್ರಕಟಿಸಲಾಗುತ್ತಿದ್ದು, ಇದನ್ನು ಪ್ರತಿ ಕುಟುಂಬದವರು ಪಡೆಯುವಂತಾಗಬೇಕು ಎಂದರು. ಅರೆಭಾಷೆಯು ಇಂದು ವ್ಯವಹಾರಿಕ ಭಾಷೆಯಾಗಿ ಬೆಳೆದಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಮಾತನಾಡಲು ಹಿಂಜರಿಕೆ ಪಡದೆ, ಎಲ್ಲರೂ ಅರೆಭಾಷೆ ಮಾತನಾಡುವಂತಾಗಬೇಕು ಎಂದು ಕರೆ ನೀಡಿದರು. ಅರೆಭಾಷೆಯಲ್ಲಿ ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ ಅರೆಭಾಷೆಯನ್ನು ಎಲ್ಲರಿಗೂ ತಲುಪಿಸುವಲ್ಲಿ ಮುಂದಾಗಲಾಗಿದೆ. ಹಲವು ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಐನ್‌ಮನೆಗಳ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದರು. ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆರಂಭದಿಂದ ಇಲ್ಲಿಯವರೆಗೂ ಉತ್ತಮ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷರಾದ ಮಂದ್ರೀರ ಮೋಹನ್‌ದಾಸ್ ಮಾತನಾಡಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಉಳಿಸುವಲ್ಲಿ ಗ್ರಾಮೋತ್ಸವ ಮತ್ತು ಗಡಿನಾಡ ಉತ್ಸವ ಸಹಕಾರಿ ಎಂದರು.

ಮರಗೋಡು ಗೌಡ ಸಮಾಜದ ಅಧ್ಯಕ್ಷರಾದ ಕಟ್ಟೆಮನೆ ಜನಾರ್ದನ ಮಾತನಾಡಿ, ಅರೆಭಾಷೆಯನ್ನು ಮತ್ತಷ್ಟು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಭಾಷೆ ಉಳಿದರೆ ಸಮಾಜ ಉಳಿಯಲು ಸಾಧ್ಯ. ಹಾಗೆಯೇ ಅನಾದಿಕಾಲದಿಂದಲೂ ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದರು. ಮೈಸೂರಿನ ಗೌಡ ವಿದ್ಯಾಸಂಘದ ಮಾಜಿ ಅಧ್ಯಕ್ಷರಾದ ತೋಟಂಬೈಲು ಮನೋಹರ್ ಅವರು ಮಾತನಾಡಿ ಅರೆಭಾಷೆಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಪ್ರೋತ್ಸಾಹಿಸಬೇಕು ಎಂದರು. ನಿವೃತ್ತ ಪ್ರಾಂಶುಪಾಲ ಚೆರಿಯಮನೆ ರಾಮಚಂದ್ರ ಮಾತನಾಡಿ ಅರೆಭಾಷಿಕರ ಇತಿಹಾಸ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಅರೆಭಾಷಿಕರ ಬದುಕು, ಕೃಷಿ ಚಟುವಟಿಕೆ ವಿಶಿಷ್ಟವಾಗಿದೆ ಎಂದರು. ಕಾರ್ಯಕ್ರಮ ಸಂಚಾಲಕ ಸಂದೀಪ್ ಪೂಳಕಂಡ ಅವರು ಮಾತನಾಡಿ ರಾಷ್ಟ್ರದಲ್ಲಿ ಅನೇಕ ಭಾಷೆಗಳಿದ್ದು, ಭಾಷೆ ಸಂಸ್ಕೃತಿ ಪ್ರತಿಯೊಬ್ಬರ ಅವಿನಾಭಾವ ಸಂಬಂಧವನ್ನು ಹೊಂದಿವೆ ಎಂದು ಅವರು ನುಡಿದರು. ಸೂರ್ತಲೆ ವಾರಿಜ ಅವರು ಬರೆದಿರುವ ‘ರ‍್ಸು ಮತ್ತು ಪ್ರಧಾನಿನ ಕಥೆ’ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಹೊರತಂದಿರುವ ಹಲವು ಪುಸ್ತಕಗಳನ್ನು ಮರಗೋಡು ಗ್ರಾಮ ಪಂಚಾಯಿತಿಗೆ ನೀಡಲಾಯಿತು. ಮರಗೋಡು ವ್ಯಾಪ್ತಿಯ ಪಟ್ಟೆದಾರರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಾಂಗೀರ ಸತೀಶ್, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಬೆಂಗಳೂರಿನ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ, ಮರಗೋಡು ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ದೇವಜನ ನಾಣಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಅಪ್ಪಯಂಡ್ರ ದೇವಯ್ಯ, ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ, ಪಿ.ಎಸ್.ಕಾರ್ಯಪ್ಪ, ತೇಜಕುಮಾರ ಕುಡೆಕಲ್, ಕುದ್ಪಾಜೆ ಪ್ರಕಾಶ್, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಕಾಶ್ ಕುದ್ಪಾಜೆ, ವಿನೋದ್ ಮೂಡಗದ್ದೆ, ಮರಗೋಡು ಗ್ರಾ.ಪಂ.ಪಿಡಿಒ ಶೋಭರಾಣಿ ಇತರರು ಇದ್ದರು.ವಿನೋದ್ ಮೂಡಗದ್ದೆ ಸ್ವಾಗತಿಸಿದರು. ಡೀನಾಪ್ರಭಾ ಮತ್ತು ತೇಜ ಪ್ರವೀಣ್ ಅವರು ನಿರೂಪಿಸಿದರು. ರೋಹಿಣಿ ಚೆರಿಯಮನೆ ಮತ್ತು ತಂಡದವರು ಪ್ರಾರ್ಥಿಸಿದರು. ವೆಂಕಟೇಶ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.