ಒಗ್ಗಟ್ಟಿನಿಂದ ಜಾನಪದ ಯೋಜನೆಗಳ ಜಾರಿಗೆ ಶ್ರಮಿಸಿ: ಅಂಬಳಿಕೆ ಹಿರಿಯಣ್ಣ

| Published : Aug 22 2024, 12:47 AM IST

ಸಾರಾಂಶ

ನಾನು ಕುಲಪತಿಯಾಗಿದ್ದ ಸಮಯದಲ್ಲಿ ೧೬ ಗ್ರಂಥ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಹತ್ತು ಸಂಪುಟದ ಗ್ರಾಮ ಚರಿತೆ ಕೋಶ, ಹಾವೇರಿ ಜಿಲ್ಲಾ ಕ್ಷೇತ್ರ ಸವೇಕ್ಷಣೆ, ಲಂಬಾಣಿ ಸಂಸ್ಕೃತಿ ಕೋಶ, ಪದ ಸಂಸ್ಕೃತಿ ಕೋಶ ಇನ್ನಿತರ ಕೆಲವು ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಸಿಗಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾನಪದಕ್ಕೆ ಸಂಬಂಧಿಸಿದಂತೆ ಜಾನಪದ ಅಕಾಡೆಮಿ, ವಿಶ್ವವಿದ್ಯಾಲಯ, ಜಾನಪದ ಪರಿಷತ್ತು, ಯಕ್ಷಗಾನ, ಬಯಲಾಟ, ಕನ್ನಡ ಸಂಸ್ಕೃತಿ ಇಲಾಖೆ ಎಲ್ಲರೂ ಸೇರಿ ಕೆಲಸ ಮಾಡಿದರೆ ಜಾನಪದ ಸಂಬಂಧಿ ಯೋಜನೆಗಳನ್ನು ಜಾರಿಗೊಳಿಸಬಹುದು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಅಂಬಳಿಕೆ ಹಿರಿಯಣ್ಣ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಹಾಗೂ ಕ್ಯಾತನಹಳ್ಳಿ ರಾಮಣ್ಣ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಜಾನಪದ ಸಾಹಿತ್ಯ ಚರಿತ್ರೆಯ ಪ್ರಥಮ ಪ್ರತಿ ಸ್ವೀಕರಿಸಿ ಮಾತನಾಡಿದರು.

ಸರ್ಕಾರ ಈ ಅಕಾಡೆಮಿ, ಪರಿಷತ್ತುಗಳಿಗೆ ಕೋಟ್ಯಂತರ ರು. ಅನುದಾನ ನೀಡುತ್ತಿವೆ. ಹಾಗಾಗಿ ಜಾನಪದ ಕುರಿತ ಯೋಜನೆಗಳ ಕೆಲಸ ಶೀಘ್ರಗತಿಯಲ್ಲಿ ನಡೆಯಬೇಕು. ಸಾಹಿತ್ಯ ಚರಿತ್ರೆ ಕೆಲಸ ನಿಲ್ಲಬಾರದು. ಅದು ಪರಿಷ್ಕರಣೆಯಾಗುತ್ತಿರಬೇಕು ಎಂದು ನುಡಿದರು.

ನಾನು ಕುಲಪತಿಯಾಗಿದ್ದ ಸಮಯದಲ್ಲಿ ೧೬ ಗ್ರಂಥ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಹತ್ತು ಸಂಪುಟದ ಗ್ರಾಮ ಚರಿತೆ ಕೋಶ, ಹಾವೇರಿ ಜಿಲ್ಲಾ ಕ್ಷೇತ್ರ ಸವೇಕ್ಷಣೆ, ಲಂಬಾಣಿ ಸಂಸ್ಕೃತಿ ಕೋಶ, ಪದ ಸಂಸ್ಕೃತಿ ಕೋಶ ಇನ್ನಿತರ ಕೆಲವು ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಸಿಗಲಿಲ್ಲ ಎಂದು ಹೇಳಿದರು.

ಆ ಸಮಯದಲ್ಲಿ ವಿಶ್ವವಿದ್ಯಾಲಯದಲ್ಲಿ ಉಳಿಸಿಕೊಂಡಿದ್ದ ಹಣದಿಂದಲೇ ಯೋಜನೆಯನ್ನು ಮುನ್ನಡೆಸಿದವು. ಜಾನಪದ ವಿಶ್ವಕೋಶ ೨ ಸಂಪುಟ ಮಾತ್ರ ಹೊರಬಂದಿದ್ದು, ಉಳಿದ ಸಂಪುಟಗಳು ನಿಂತುಹೋಗಿವೆ. ಬೇರೆ ಯೋಜನೆಗಳ ಸ್ಥಿತಿ ಏನಾಗಿದೆಯೋ ಗೊತ್ತಿಲ್ಲ. ಇದರ ನಡುವೆ ನಾನಿದ್ದ ಅವಧಿಯಲ್ಲಿ ೪೦ ಸಂಪುಟಗಳನ್ನು ಹೊರತಂದಿದ್ದಾಗಿ ತಿಳಿಸಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಮಾತನಾಡಿ, ಜಾನಪದ ವಿವಿ ಗ್ರಾಮಚರಿತೆ ಕೋಶಕ್ಕೆ ಸಂಬಂಧಪಟ್ಟಂತಹ ೧೦ ಕೋಟಿ ರು.ವೆಚ್ಚದ ಬೃಹತ್ ಯೋಜನೆಯಾಗಿ ೧೭ ಜಿಲ್ಲೆಯ ಗ್ರಾಮಚರಿತ್ರೆ ಕೋಶಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಉಳಿದ ಜಿಲ್ಲೆಗಳಿಗೆ ಸಂಬಂಧಪಟ್ಟಂತ ಕೆಲಸ ಪ್ರಾರಂಭಗೊಂಡು ಮುಕ್ತಾಯದ ಹಂತದಲ್ಲಿವೆ. ಸರ್ಕಾರದಿಂದ ೨.೧೭ ಕೋಟಿ ರು. ಹಣ ಬಿಡುಗಡೆ ಹಂತದಲ್ಲಿದೆ. ಬಿಡುಗಡೆಯಾದ ಒಂದು ತಿಂಗಳಲ್ಲಿ ಎಲ್ಲಾ ಜಿಲ್ಲೆಯ ಗ್ರಾಮ ಚರಿತ್ರೆ ಕೋಶಗಳು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.

ಜನಪದ ಸಾಹಿತ್ಯ ಲೋಕದಲ್ಲಿ, ಶಿಷ್ಟ ಸಾಹಿತ್ಯ ಲೋಕದಲ್ಲಿ ಪವಿತ್ರತೆಯನ್ನು ಉಳಿಸಿಕೊಂಡು ಅದು ಅಧ್ಯಯನಕ್ಕೆ ಸಹಕಾರಿಯಾಗಿದೆ. ಅದ್ಭುತವಾಗಿರುವ, ಮಾದರಿಯಾಗಿರುವ, ಉತ್ತಮವಾಗಿರುವ ಜನಪದ ಸಾಹಿತ್ಯ ಚರಿತ್ರೆ ಅರ್ಥಪೂರ್ಣವಾಗಿದೆ,ಮಾರ್ಗದರ್ಶಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮಂಡ್ಯ ಕೇಂದ್ರ ಮತ್ತೆ ಆರಂಭ: ಕೋವಿಡ್ ಸಮಯದಲ್ಲಿ ಮಂಡ್ಯದಲ್ಲಿ ಸ್ಥಗಿತವಾಗಿರುವ ಅಧ್ಯಯನ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು. ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪುನರಾರಂಭ ಮಾಡುವುದಾಗಿ ಹೇಳಿದರು.

ಕೃತಿ ಬಗ್ಗೆ ಮಾತನಾಡಿದ ಕರ್ನಾಟಕ ಜಾನಪದ ವಿವಿ ಪ್ರಾಧ್ಯಾಪಕ ಡಾ.ಕೆ.ಪ್ರೇಮಕುಮಾರ್ ಅವರು, ಕ್ಯಾತನಹಳ್ಳಿ ರಾಮಣ್ಣನವರು ಒಂದು ಸಂಸ್ಥೆ ಮಾಡುವ ಕಾರ್ಯವನ್ನು ವೈಯಕ್ತಿಕ ನೆಲೆಯಲ್ಲಿ ಮಾಡಿದ್ದಾರೆ ಎಂಬುದು ಹೆಗ್ಗಳಿಕೆ. ನಮ್ಮ ತಲೆಮಾರಿನವರು ಪುಸ್ತಕ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಇಂದಿನ ಯುವಜನಾಂಗಕ್ಕೆ ಪುಸ್ತಕದ ಬಗ್ಗೆ ಯಾವ ಪ್ರೀತಿಯೂ ಇಲ್ಲ. ಫೇಸ್ಬುಕ್, ವಾಟ್ಸಾಪ್ ಯೂನಿವರ್ಸಿಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಗಳಲ್ಲಿ ಪ್ರಸಾರಾಂಗಗಳಲ್ಲಿ ಅಕಾಡೆಮಿಗಳಲ್ಲಿ ಪುಸ್ತಕದ ಮಹತ್ವದ ಕೆಲಸ ನಡೆಯುತ್ತಿಲ್ಲ. ಅದಕ್ಕೆ ಕಾರಣ ಬೇಡಿಕೆಯ ಕೊರತೆ ಬೇಡಿಕೆ ಇಲ್ಲದ ಕಾರಣಕ್ಕಾಗಿ ಅವೆಲ್ಲ ಸ್ಥಗಿತವಾಗಿದೆ ಇಲ್ಲವೇ ಆಮೆಗತಿಯಲ್ಲಿ ನಡೆಯುತ್ತಿವೆ ಎಂದು ವಿಷಾದಿಸಿದರು.

ಈ ಪುಸ್ತಕದ ೨೫ ಅಧ್ಯಾಯಗಳಲ್ಲಿ ವಿವಿಧ ಪ್ರಕಾರಗಳನ್ನು ಇಟ್ಟುಕೊಂಡು ಸಮಗ್ರವಾದ ಮಾಹಿತಿಯನ್ನು ಕೊಡುವ ಕೆಲಸವನ್ನು ಮಾಡಿದ್ದಾರೆ. ಕ್ಷೇತ್ರಕಾರ್ಯ, ಗಾದೆ, ಒಗಟು,ಒಡಪು, ಕಾವ್ಯ, ಆಟ, ನಂಬಿಕೆ,ಗಣಿತ, ಆತ್ಮಕಥನ, ಬೈಗಳು ಯಕ್ಷಗಾನ ಮುಂತಾದ ವಿಂಗಡಣೆಗಳಿವೆ.ಇದು ಸಂಶೋಧಕರಿಗೆ ಉಪಯುಕ್ತವಾದ ಕೃತಿ. ಇದನ್ನು ಅಧ್ಯಯನ ಮಾಡಿದರೆ ಪ್ರತಿಯೊಂದು ಪ್ರಕಾರದಲ್ಲಿ ವಿಶೇಷ ಸಂಶೋಧನೆ ಮಾಡಲು ಆಕರ ಗ್ರಂಥವಾಗಿ ಬಳಸಬಹುದು. ಭಾಷೆಯನ್ನು ಸಹ ಅದ್ಭುತವಾಗಿ ಬಳಸಿದ್ದಾರೆ. ಸುಲಭವಾಗಿ ಗ್ರಹಿಸುವ ಹಾಗೆ ಬರೆದಿದ್ದಾರೆ. ೧೯೨೪ ರಿಂದ ೨೦೨೩ ರವರೆಗಿನ ದಾಖಲೆಗಳನ್ನು ಕೊಡುತ್ತಾರೆ. ಬಹಳ ಶ್ರದ್ಧೆಯಿಂದ ಮಾಡಬೇಕಾದ ಕೆಲಸ ಅಂತ ಪರಿಶ್ರಮಪಟ್ಟು ಬಹಳ ಸುದೀರ್ಘವಾದ ಕ್ಷೇತ್ರಕಾರ್ಯವನ್ನು ಮಾಡಿರುವುದು ಗೊತ್ತಾಗುತ್ತದೆ ಎಂದರು.

ಜಾನಪದ ತಜ್ಞ ಹಾ.ತಿ.ಕೃಷ್ಣೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೃತಿ ಕರ್ತೃ ಕ್ಯಾತನಹಳ್ಳಿ ರಾಮಣ್ಣ, ಕೀಲಾರ ಕೃಷ್ಣೇಗೌಡ ಉಪಸ್ಥಿತರಿದ್ದರು.