ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
2024 ರ ಏಪ್ರೀಲ್ ನಿಂದ 2025 ರ ಮಾರ್ಚ್ ಮಾಹೆಯವರೆಗೆ ಜಿಲ್ಲೆಯಲ್ಲಿ 10 ತಾಯಂದಿರ ಮರಣ ಸಂಭವವಿಸಿದೆ. ಮುಂದಿನ ದಿನಗಳಲ್ಲಿ ತಾಯಿ ಮರಣ ಪ್ರಮಾಣ ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ‘ತಾಯಿ ಮರಣ ಪ್ರಕರಣಗಳ ಪರಿಶೀಲನಾ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2024-25 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ತಲಾ 2 ತಾಯಿ ಮರಣಗಳು ಸಂಭವಿಸಿವೆ. ಚಿಂತಾಮಣಿ ತಾಲೂಕಿನಲ್ಲಿ 3 ಪ್ರಕರಣ ಹಾಗೂ ಬಾಗೇಪಲ್ಲಿ ತಾಲ್ಲೂಕಿನಲ್ಲಿ 1 ಪ್ರಕರಣ ದಾಖಲಾಗಿವೆ ಎಂದರು.
ನಿಯಮಿತವಾಗಿ ಚಿಕಿತ್ಸೆ ಪಡೆಯಿರಿ:ಈ ಪ್ರಕರಣಗಳನ್ನು ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಮೃತರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮರಣ ಸಂಭವಿಸಲು ನೈಜ ಕಾರಣ ಏನು ಎಂಬುದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಮರಣ ಪ್ರಮಾಣ ತಗ್ಗಿಸಲು ಪೋಷಕರ, ಪಾತ್ರವೇನು, ಆರೋಗ್ಯ ಚಿಕಿತ್ಸೆ ನೀಡುವವರ ಪಾತ್ರವೇನು ಯಾವುದನ್ನು ಸುಧಾರಿಸಿಕೊಳ್ಳಬೇಕು. ಮುಂದೆ ತಾಯಿ ಮರಣ ಪ್ರಮಾಣಗಳು ಜಿಲ್ಲೆಯಲ್ಲಿ ಸಂಭವಿಸದಂತೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಅರಿಯಲು ಈ ಸಭೆಯು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಸೂಚನೆಗಳನ್ನು ನೀಡಿಲಾಗಿದೆ. ಮಗುವಿನ ಜನನದ ನಂತರವೂ ನಿಯಮಿತವಾಗಿ ಆರೋಗ್ಯ ಚಿಕಿತ್ಸೆಗಳನ್ನು ತಾಯಂದಿರು ಪಡೆಯಬೇಕು ಎಂದು ಮನವಿ ಮಾಡಿದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು ಈ ತಿಂಗಳ 24 ರಿಂದ 30ರವರೆಗೆ ಜಿಲ್ಲೆಯಲ್ಲಿ ನಡೆಯಲಿದ್ದು, ದಡಾರ, ರುಬೆಲ್ಲ ಲಸಿಕೆಯಿಂದ ತಪ್ಪಿ ಹೋದ ಮಕ್ಕಳು ಅಥವಾ ಇತರೆ ಲಸಿಕೆಗಳಿಂದ ವಂಚಿತರಾದ ಮಕ್ಕಳು ಲಸಿಕೆ ಹಾಕಿಸಿಕೊಳ್ಳುವಂತೆ ಆಗಬೇಕು. ಲಸಿಕೆ ಹಾಕಿದ ಮಾಹಿತಿಯನ್ನು ಹೆಚ್ ಎಂಐಎಸ್, ಆರ್ ಸಿಹೆಚ್ ಯೂವಿನ್ ಪೋರ್ಟಲ್ ಗಳಲ್ಲಿ ನಮೂದಿಸಿ ಇಂಡೀಕರಿಸಬೇಕು. ಎಂದರು.ವಿಶೇಷ ಲಸಿಕಾ ಅಭಿಯಾನ:
ಪ್ರತಿ ಗುರುವಾರ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ವಿಶೇಷ ಲಸಿಕಾ ಅಭಿಯಾನವನ್ನು ಕೈಗೊಳ್ಳಬೇಕು. ಲಸಿಕೆಗಳನ್ನು ಹಾಕಿಸಿಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಕೆಲವರು ತಪ್ಪಾಗಿ ಭಾವಿಸುತ್ತಾರೆ. ಅಂತಹ ತಪ್ಪು ಭಾವನೆಯನ್ನು ಹೋಗಲಾಡಿಸಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಲಸಿಕೆಯನ್ನು ನಿರ್ಲಕ್ಷ ಮಾಡುವ ಭಾಗಗಳಲ್ಲಿ, ಗ್ರಾಮ ಗಳಲ್ಲಿ, ವಾರ್ಡ್ಗಳಲ್ಲಿ ಸಮುದಾಯದವರನ್ನು ಸೇರಿಸಿಕೊಂಡು ಅರಿವು ಮೂಡಿಸಬೇಕು. ಗೌರಿಬಿದನೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಲಸಿಕ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.ಶೇ.100ರಷ್ಟು ಸಾಧನೆಯಾಗಲಿ:
ಈ ಬಾರಿ ಲಸಿಕಾಕರಣದಲ್ಲಿ ಶೇಕಡ 100 ರಷ್ಟು ಪ್ರಗತಿ ಸಾಧನೆಯಾಗಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಗೂ ಇತರೆ ಇಲಾಖೆಗಳ ಸಹಕಾರ ತೆಗೆದುಕೊಂಡು ಲಸಿಕಾಕರಣ ಪ್ರಮಾಣ ಕಡಿಮೆ ಇರುವ ಗ್ರಾಮಗಳು, ವಾರ್ಡ್ ಗಳ ಮಾಹಿತಿ ಪಡೆದು ವಿಶೇಷ ಕಾಳಜಿ ವಹಿಸಿ ಎಲ್ಲಾ ಐದು ವರ್ಷ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮ ವಹಿಸಬೇಕು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರ ಪಡೆದು ಯಶಸ್ವಿ ಲಸಿಕಾಕರಣ ಆಗಬೇಕು. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಲಸಿಕಾಕರಣ ಕೈಗೊಳ್ಳಲು ಮೊಬೈಲ್ ಲಸಿಕಾ ವಾಹನವನ್ನು ಒದಗಿಸಬೇಕು. ಒಟ್ಟಾರೆ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನಿರ್ವಹಿಸಲು ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ತಾಲೂಕು ಅರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ದಾದಿಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.