ಸಮಾಜದಲ್ಲಿ ಎಚ್‌ಐವಿ ಸೋಂಕಿತರಿಗೆ ಮತ್ತು ಬಾಧಿತರರಿಗೆ ಆಗುವ ಅಸಮಾನತೆಯನ್ನು ತೊಲಗಿಸಲು ಮುಂದಾಗಬೇಕು. ನೊಂದವರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.

ಗದಗ: ಏಡ್ಸ್ ನಿಯಂತ್ರಣದಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಎಚ್‌ಐವಿ ಮುಕ್ತ ಸಮಾಜ ನಿರ್ಮಾಣ ಮಾಡಲು ಯುವಕರು, ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಕೈಜೋಡಿಸಬೇಕೆಂದು ಆಪ್ತ ಸಮಾಲೋಚಕ ಗಂಗಾಧರ ಕೆಂಗಾರ ತಿಳಿಸಿದರು.ತಾಲೂಕಿನ ಅಡವಿಸೋಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಎಚ್‌ಐವಿ ಸೋಂಕಿತರಿಗೆ ಮತ್ತು ಬಾಧಿತರರಿಗೆ ಆಗುವ ಅಸಮಾನತೆಯನ್ನು ತೊಲಗಿಸಲು ಮುಂದಾಗಬೇಕು. ನೊಂದವರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಂಸತ್ತಿನಲ್ಲಿ ಎಚ್ಐವಿ ಏಡ್ಸ್ ಮಸೂದೆ- 2017 ಪಾಸಾಗಿದ್ದು, ಸೋಂಕಿತರಿಗೆ ತಾರತಮ್ಯ ಮಾಡಿದರೆ ಕೀಳಾಗಿ ನೋಡಿದರೆ ಎಚ್ಐವಿ ಏಡ್ಸ್ ಮಸೂದೆಯಲ್ಲಿ ಅಂತಹವರಿಗೆ ಶಿಕ್ಷೆಯಾಗಿ ಒಂದು ಲಕ್ಷದವರೆಗೆ ದಂಡವನ್ನು ಹಾಗೂ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಶಿದ್ದಪ್ಪ ಎನ್. ಲಿಂಗದಾಳ ಮಾತನಾಡಿ, ಎಚ್ಐವಿ ಬಗ್ಗೆ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿ ಬದಲಾವಣೆ ಮಾಡಲು ವಿದ್ಯಾರ್ಥಿಗಳು, ಶಿಕ್ಷಕರು ಆರೋಗ್ಯ ಇಲಾಖೆಯ ನೌಕರರಿಂದ ನಿಯಂತ್ರಣ ಮಾಡಲು ಸಾಧ್ಯ. ಆದ್ದರಿಂದ ಸಮುದಾಯವು ಆರೋಗ್ಯ ಇಲಾಖೆಯು ನೀಡುವ ಜಾಗೃತಿಯ ಮಾಹಿತಿಯನ್ನು ಪರಿಪಾಲಿಸಿ ಸೋಂಕು ಮುಕ್ತ ನಾಡನ್ನು ಕಟ್ಟಬಹುದೆಂದರು.

ಜಿಲ್ಲೆಯಲ್ಲಿ 8 ಐಸಿಟಿಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಸ್ಥಿತಿಗತಿ 2004ರಲ್ಲಿ 1.01ರಷ್ಟು ಪ್ರತಿಶತ ಇದ್ದು, 2024- 25ರಲ್ಲಿ 0.019ಗೆ ಇಳಿದಿದ್ದು, ಗರ್ಭಿಣಿಯರಲ್ಲಿ 0.02ಗೆ ಇಳಿದಿದೆ. ಇನ್ನು ಹೆಚ್ಚಿನ ತಪಾಸಣೆ ಕೈಗೊಳ್ಳಲು ಸಂತೆಯಲ್ಲಿ ಮತ್ತು ಜಾತ್ರೆಗಳಲ್ಲಿ ಸಮುದಾಯ ಆಧರಿತ ತಪಾಸಣೆ ಕೈಗೊಳ್ಳುತ್ತಿದೆ ಎಂದರು. ಜೇನುಗೂಡು ಕಲಾತಂಡದ ಬಸವರಾಜ ಎಫ್. ಈರಣ್ಣವರ ಅವರು, ಪರಿಸರ ಹಾಡನ್ನು ಹೇಳುವ ಮೂಲಕ ಸ್ವಚ್ಛತೆ, ದುಶ್ಚಟದ ಪರಿಣಾಮ, ವೈಯಕ್ತಿಕ ಸ್ವಚ್ಛತೆ ಆರೋಗ್ಯ ಭಾಗ್ಯದ ಬಗ್ಗೆ ಹಾಡಿನ ಮೂಲಕ ಯುವ ಸಮುದಾಯವನ್ನು ಜಾಗೃತಿಗೊಳಿಸಿದರು.

ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪತ್ತಾರ ವಹಿಸಿದ್ದರು. ಸಂತೋಷ ಬಡಿಗೇರ, ಸವಿತಾ ಪವಾರ, ಶಿಕ್ಷಕಿ ನೀಲಮ್ಮ ಅಂಗಡಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.