ಕೊನೆಯ ಭಾಗದ ರೈತರಿಗೆ ತುಂಗಭದ್ರಾ ಎಡದಂಡೆ ನಾಲೆಯ ನೀರನ್ನು ಒದಗಿಸಲು ಈಗಾಗಲೇ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದ್ದು, ರೈತ ಮುಖಂಡರು ಅಧಿಕಾರಿಗಳೊಂದಿಗೆ ಸಹಕರಿಸಿ ಕೊನೆಯ ಭಾಗದ ರೈತರಿಗೆ ನೀರು ತಲುಪಲು ಶ್ರಮಿಸಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕೊನೆಯ ಭಾಗದ ರೈತರಿಗೆ ತುಂಗಭದ್ರಾ ಎಡದಂಡೆ ನಾಲೆಯ ನೀರನ್ನು ಒದಗಿಸಲು ಈಗಾಗಲೇ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದ್ದು, ರೈತ ಮುಖಂಡರು ಅಧಿಕಾರಿಗಳೊಂದಿಗೆ ಸಹಕರಿಸಿ ಕೊನೆಯ ಭಾಗದ ರೈತರಿಗೆ ನೀರು ತಲುಪಲು ಶ್ರಮಿಸಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಹೇಳಿದರು.

ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನೀರು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದ ಅವರು, ನೀರು ಪೋಲಾಗು ವಂತಹ ಪ್ರದೇಶಗಳನ್ನು ಅಧಿಕಾರಿಗಳ ಗಮನಕ್ಕೆ ರೈತ ಮುಖಂಡರು ತರಬೇಕು. ಕಾಲುವೆ ಪ್ರದೇಶದಲ್ಲಿ ಅಕ್ರಮವಾಗಿ ನೀರು ತೆಗೆಯುವರ ವಿರುದ್ಧ ಪ್ರಕರಣ ದಾಖಲೆ ಮಾಡಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೆ ರೈತರು ಕೇವಲ ಭತ್ತವನ್ನು ಬೆಳೆಯದೆ ಬೇರೆ, ಬೇರೆ ಬೆಳೆಗಳನ್ನು ಬೆಳೆಯಲು ಗಮನಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಜಾಗೃತಿ ಮೂಡಿಸಬೇಕು. ಕಾಲುವೆ ಪಕ್ಕದಲ್ಲಿ ಇರುವ ಕೆರೆಗಳಿಗೆ ನೀರು ಹೋಗದಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಕಾಲುವೆಗಳ ಮೇಲೆ ಸರಿಯಾಗಿ ಮೇಲುಸ್ತು ವಾರಿ ಮಾಡಬೇಕು. ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನು ಅಧಿಕಾರಿಗಳಿಂದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಪಡೆದರು.

ಅನಧಿಕೃತವಾಗಿ ನೀರನ್ನು ಬಳಕೆಯಾಗುವ ಪ್ರದೇಶದಲ್ಲಿ ಜೆಸ್ಕಾಂನವರು ವಿದ್ಯುತ್ ಟಿಸಿಗಳನ್ನು ತೆಗೆಸಿ, ಜಿಲ್ಲೆಯಲ್ಲಿ ವಿಶೇಷವಾಗಿ ಸಿರವಾರ ಹಾಗೂ ಮಸ್ಕಿ ಭಾಗ ದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಅಲ್ಲದೆ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಇದರ ಗಂಬೀರ ಪರೀಣಾಮವನ್ನು ಎದುರಿಸ ಬೇಕಾಗುತ್ತದೆ. ಎಲ್ಲೆಲಿ ಅಕ್ರಮ ನೀರು ಸಾಗಣೆ ಮಾಡುತ್ತಿದ್ದಾರೆ. ಅಂತಹ ಪ್ರದೇಶದಲ್ಲಿ ಅಧಿಕಾರಿಗಳು ಮುಲ್ಲಾಜಿ ಇಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.

ನೀರು ಪೋಲಾಗುತ್ತಿರುವುದು ಮತ್ತು ಅಕ್ರಮ ನಡೆಯಲ್ಲಿರುವುದು ನೀರಾವರಿ ಇಲಾಖೆಗೆ ಮುಜುಗರದ ಸಂಗತಿಯಾಗಿದ್ದು, ಪಾರದರ್ಶಕತೆಗೆ ಧಕ್ಕೆ ಬಾರದಂತೆ ಕೆಲಸ ಮಾಡಬೇಕು. ಅಗತ್ಯವಿದ್ದರೆ ಸೂಕ್ತ ಪೊಲೀಸ್ ರಕ್ಷಣೆ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನೀಡಲಾಗುವುದು. ತಕ್ಷಣವೇ ಅಕ್ರಮ ಪೈಪ್ಲೈನ್‌ಗಳನ್ನು ತೆರವು ಗೊಳಿಸಿ, ಅಕ್ರಮ ನೀರು ಎತ್ತುವಿಕೆಯನ್ನು ತಡೆಯಬೇಕು ಎಂದು ನಿರ್ದೇಶಿಸಿದರು.

ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಮಾತನಾಡಿ, ತುಂಗಭದ್ರಾ ಎಡದಂಡೆ ನಾಲೆಯ ನೀರನ್ನು ಸಮಗ್ರವಾಗಿ ಒದಗಿಸಲು ರಾಯಚೂರಿನ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೊಪ್ಪಳ ಜಿಲ್ಲೆಗೆ ಕರ್ತವ್ಯಗೆ ನಿಯೋಜಿಸಿ, ಕೊಪ್ಪಳ ಜಿಲ್ಲೆಯ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ರಾಯಚೂರಿಗೆ ನಿಯೋಜಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ ಅಧಿಕಾರಿಗಳು ಬಲ್ಯಾಡ ರೈತರ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಸಭೆಗೆ ತಮ್ಮ ಅಭಿಪ್ರಾಯವನ್ನು ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪೂವಿತಾ ಎಸ್. ಮಾತನಾಡಿ,ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ವಿವಿಧ ರೈತ ಮುಖಂಡರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಈಶ್ವರ್ ಕಾಂದೂ, ಎಡಿಸಿ ಶಿವಾನಂದ, ನೀರಾವರಿ ಇಲಾಖೆಯ ಸಿಇ ಮನೋಜ್ ಕುಮಾರ್, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಬಸವಣ್ಣೆಪ್ಪ ಕಲಶೆಟ್ಟಿ, ಮಾಜಿ ಶಾಸಕರು,ಮುಖಂಡರು, ವಿವಿಧ ತಾಲೂಕಿನ ತಹಸೀಲ್ದಾರರು, ವಿವಿಧ ಪ್ರಗತಿ ಪರ ರೈತರು, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.