ಸಾರಾಂಶ
ಶಿಕ್ಷಕರ ದಿನಾಚರಣೆ, ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿದ ಸಚಿವ
ಕನ್ನಡಪ್ರಭ ವಾರ್ತೆ ಕಾರಟಗಿಶಿಕ್ಷಕ ಹುದ್ದೆಯನ್ನು ಪಡೆದು ರಾಜ್ಯದ ವಿವಿಧೆಡೆಯಿಂದ ಈ ಭಾಗಕ್ಕೆ ಬಂದಂಥವರು ಕಳೆದ ವರ್ಷದಿಂದೀಚೆಗೆ ಏಕಾಏಕಿ ಇಲ್ಲಿಂದ ಕಾಲ್ಕಿತ್ತಿದ್ದು, ಈ ಭಾಗದ ಶಿಕ್ಷಣ ವ್ಯವಸ್ಥೆಗೆ ಮತ್ತು ಮಕ್ಕಳಿಗೆ ಮಾಡಿದ ಅನ್ಯಾಯವಲ್ಲವೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.
ಇಲ್ಲಿನ ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಕಾರ್ಯಾಗಾರ- ೨೦೨೪ ನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಕಳೆದ ವರ್ಷದಿಂದ ಇತ್ತೀಚಿನವರೆಗೂ ದಕ್ಷಿಣ ಕರ್ನಾಟಕದ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಒಮ್ಮಿಂದೊಮ್ಮೇಲೆ ಈ ಭಾಗದಿಂದ ಕಾಲ್ಕಿತ್ತಿದರು. ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕು, ಉತ್ತರ ಕರ್ನಾಟಕವಾದರೇನು, ಹೈದ್ರಾಬಾದ್ ಕರ್ನಾಟಕವಾದರೇನು ಎಂದವರು ಈಗ ಇಲ್ಲಿಂದ ಬಹುಸಂಖ್ಯೆಯಲ್ಲಿ ವರ್ಗಾವಣೆಯಾಗಿ ಹೋಗಿರುವುದು ನಮ್ಮ ಮಕ್ಕಳಿಗೆ ಮಾಡಿದ ಅನ್ಯಾಯವಲ್ಲದೇ ಮತ್ತೇನು ಎನ್ನುವುದನ್ನು ಮತ್ತು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಬಗ್ಗೆ ಶಿಕ್ಷಕರು ಪ್ರಶ್ನಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಕೊಪ್ಪಳ ಜಿಲ್ಲೆ ೧೬-೧೭ನೇ ಸ್ಥಾನದಲ್ಲಿದ್ದು, ಈ ಬಾರಿ ೨೭ನೇ ಸ್ಥಾನಕ್ಕೆ ಕುಸಿದಿದೆ. ಈಗ ಆ ಪಟ್ಟಿಯಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಶಿಕ್ಷಕರು ಹಾಗೂ ಆಡಳಿತ ಸಂಸ್ಥೆಗಳು ಶ್ರಮಿಸಬೇಕು. ಇದು ನಮ್ಮ ಬೇಡಿಕೆಯೂ ಹೌದು, ಆದೇಶವೂ ಹೌದು. ಕೊಪ್ಪಳ ಜಿಲ್ಲೆಯ ರ್‍ಯಾಂಕಿಂಗ್ ಪಟ್ಟಿಯನ್ನು ಉತ್ತಮ ಪಡಿಸಿ ಜಿಲ್ಲೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆಯಲು ಸರ್ವ ಶಿಕ್ಷಕರು ಶ್ರಮಿಸಬೇಕು. ಶಿಕ್ಷಕರ ಜೊತೆ ಜಿಲ್ಲಾಡಳಿತ, ಸಚಿವರು ಮತ್ತು ಶಾಸಕರು ಇದ್ದೇವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಮಟ್ಟದಲ್ಲಿ ಎಷ್ಟನೇ ಸ್ಥಾನಕ್ಕೆ ಬರುತ್ತಿರೆಂಬುದನ್ನು ನೀವೇ ನಿರ್ಧರಿಸಿ, ಗುರಿ ರೂಪಿಸಿಕೊಳ್ಳಿ ಎಂದು ಹೇಳಿದರು.ಶಿಕ್ಷಕರು ಬರೀ ಕೊಠಡಿಯೊಳಗಿನ ಪಾಠಗಳಿಗೆ ಸೀಮಿತರಾಗಬೇಡಿ. ತಮ್ಮಲ್ಲಿನ ಅಗಾಧವಾದ ಪ್ರತಿಭೆ, ಬುದ್ಧಿವಂತಿಕೆಯಿಂದ ಶೈಕ್ಷಣಿಕವಾಗಿ ಹಿಂದೆ ಇರುವ ಪ್ರದೇಶ ಎನ್ನುವ ಹಣೆಪಟ್ಟಿಯಿಂದ ಹೈದ್ರಬಾದ್ ಕರ್ನಾಟಕ ಪ್ರದೇಶವನ್ನು ವಿಮೋಚನೆಗೊಳಿಸಿ ಎಂದು ತಂಗಡಗಿ ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿಠ್ಠಲ್ ಜೀರಗಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಅನೇಕ ಸಮಸ್ಯೆಗಳನ್ನು ಪಟ್ಟಿ ಮಾಡಿ ಎಲ್ಲವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿದೆ. ಐಟ ಫಾರ್ಮ, ಇ- ಫೈಲಿಂಗ್, ಶಿಕ್ಷಕರ ಹಲವು ಸಂಘಗಳ ಸಹಯೋಗದಲ್ಲಿ ತರಬೇತಿ ಕಾರ್ಯಾಗಾರ, ಮಾಹಿತಿ ಹಕ್ಕು ಕಾರ್ಯಾಗಾರ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಶಿಕ್ಷಕರ ಸಬಲೀಕರಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು.ನಿವೃತ್ತ ಶಿಕ್ಷಕರಿಗೆ ಮತ್ತು ಅಖಂಡ ಗಂಗಾವತಿ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಉತ್ತಮ ಸೇವೆ ಸಲ್ಲಿಸಿದ ೧೨೦ಕ್ಕೂ ಹೆಚ್ಚು ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸಚಿವ ಶಿವರಾಜ ತಂಗಡಗಿ ಸನ್ಮಾನಿಸಿದರು.
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಬಿಇಒ ವೆಂಕಟೇಶ ರಾಮಚಂದ್ರಪ್ಪ, ಬಿಇಒ ಕಚೇರಿ ನೋಡಲ್ ಅಧಿಕಾರಿ ಆನಂದ ನಾಗಮ್ಮನವರ್, ಶರಣಪ್ಪ ಸೋಮಲಾಪುರ, ಹುಸೇನಪ್ಪ, ಜಗದೀಶ ಹಾದಿಮನಿ, ರಾಚಯ್ಯ ಹಿರೇಮಠ ಸೇರಿದಂತೆ ನೌಕರರ ಸಂಘದ ಅಧ್ಯಕ್ಷರಾದ ಶರಣೇಗೌಡ ಪೊ.ಪಾ, ಸರ್ದಾರ ಅಲಿ, ಚನ್ನಬಸಪ್ಪ ವಕ್ಕಳದ, ರಮೇಶ ಕುಕನೂರು, ಶಿವರಾಜಕುಮಾರ್, ಜಟಿಂಗರಾಯ, ಜಂಬಣ್ಣ ಇತರರಿದ್ದರು. ಶಿಕ್ಷಕರಾದ ಬಸವರಾಜ್ ರ್‍ಯಾವಳದ, ಜಿ. ಅಮರಮ್ಮ, ಅನ್ನಪೂರ್ಣ ಸಜ್ಜನ್, ಮಂಜುನಾಥ್ ಚಿಕೇನಕೊಪ್ಪ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗಂಗಾವತಿ ಹಾಗೂ ತಾಲೂಕಿನ ಶಿಕ್ಷಕರ ಸಂಘದ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.