ಉತ್ತರ ಕನ್ನಡ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಡಿಸಿ ಲಕ್ಷ್ಮೀಪ್ರಿಯಾ ಸೂಚನೆ

| Published : Jan 24 2025, 12:46 AM IST

ಉತ್ತರ ಕನ್ನಡ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಡಿಸಿ ಲಕ್ಷ್ಮೀಪ್ರಿಯಾ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಸಿದ್ಧಗೊಳಿಸುವ ಜವಾಬ್ದಾರಿ ಶಿಕ್ಷಕರದ್ದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಕಾರವಾರ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಿಸುವುದಕ್ಕಾಗಿ ಸಂಬಂಧಪಟ್ಟ ಶಾಲೆಗಳ ಮುಖ್ಯಾಪಾಧ್ಯಾಯರು, ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ಹೊರಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಎಲ್ಲ ಶಾಲೆಗಳ ಮುಖ್ಯಾಪಾಧ್ಯಾಯರು, ತಾಲೂಕು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದರೆ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುತ್ತಾರೆ.ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಸಿದ್ಧಗೊಳಿಸುವ ಜವಾಬ್ದಾರಿ ಶಿಕ್ಷಕರದ್ದು. ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಭವಿಷ್ಯವಾಗಿದ್ದು, ಅವರ ಜೀವನವನ್ನು ರೂಪಿಸುವ ಅತಿ ದೊಡ್ಡ ಜವಾಬ್ದಾರಿ ಹೊಂದಿರುವ ಶಿಕ್ಷಕರು, ತಮ್ಮ ಸಕಲ ಅನುಭವವನ್ನು ಧಾರೆಯೆರೆದು, ತಮ್ಮ ಶಾಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ನೋಡಿಕೊಳ್ಳಬೇಕು ಎಂದರು.ಜಿಲ್ಲೆಗೆ ಫಲಿತಾಂಶದಲ್ಲಿ ರ‍್ಯಾಂಕ್ ಬರುವುದು ಮುಖ್ಯವಲ್ಲ. ಆದರೆ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಪ್ರತಿಯೊಬ್ಬರೂ ಉತ್ತೀರ್ಣರಾಗಬೇಕು. ವಿದ್ಯಾರ್ಥಿಗಳಿಗೆ ಅನುದಾನಿತ ಶಾಲೆಗಳಲ್ಲಿ ಇರುವ ಮೂಲ ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಲ್ಲಿನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳಿಗೆ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು. ಶಾಲಾ ಪರೀಕ್ಷೆಯ ಫಲಿತಾಂಶದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ಉತ್ತೀರ್ಣರಾಗುವಂತೆ ಮಾಡಬೇಕು ಎಂದರು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಮತ್ತು ಪರೀಕ್ಷಾ ಕೊಠಡಿಯಲ್ಲಿ ಭಯ ಪಡದೇ ಉತ್ತರ ಬರೆಯುವ ಕುರಿತಂತೆ, ಸಮಯ ಪಾಲನೆ, ಒತ್ತಡ ನಿವಾರಣೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮನ ಮುಟ್ಟುವಂತೆ ವಿಶೇಷ ಉಪನ್ಯಾಸ ಆಯೋಜಿಸಬೇಕು. ಪರೀಕ್ಷಾ ಸಮಯದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಸಲಹೆ ನೀಡಿ ಜಾಗೃತಿ ಮೂಡಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ ಈ ಹಿಂದಿಗಿಂತಲೂ ಉತ್ತಮ ಸಾಧನೆ ತೋರಿದೆ. ಶಾಲಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹೆಚ್ಚುವರಿ ಸಮಯವನ್ನು ಮೀಸಲಿಟ್ಟು ಕಲಿಕೆಯಲ್ಲಿ ಹಿಂದುಳಿದಿರುವ ವಿಷಯಗಳನ್ನು ಬೋಧಿಸಬೇಕು. ಈ ಬಾರಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲವಾಗಿದ್ದು, ಜಿಲ್ಲೆಯಲ್ಲಿ ಗುಣಮಟ್ಟದ ಫಲಿತಾಂಶ ಈ ಬಾರಿ ಬರುವಂತಾಗಬೇಕು. ವಿದ್ಯಾರ್ಥಿಗಳನ್ನು ತಮ್ಮ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ರೀತಿಯಲ್ಲಿ ಕಾಳಜಿ ವಹಿಸಿ ಶಿಕ್ಷಕರು ಮೇಲ್ವಿಚಾರಣೆ ಮಾಡಬೇಕು.

ಫಲಿತಾಂಶ ವೃದ್ಧಿಗೆ ಈಗಾಗಲೇ ರೂಪಿಸಿರುವ 20 ಅಂಶಗಳ ಅನುಷ್ಠಾನ ಮಾತ್ರವಲ್ಲದೇ ಡಯಟ್ ಮೂಲಕ ಹೆಚ್ಚಿನ ತರಬೇತಿಯ ಅಗತ್ಯವಿದಲ್ಲಿ ಪಡೆದು, ಸಂಘಟಿತ ಪ್ರಯತ್ನದ ಮೂಲಕ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕಿ ಲತಾ ನಾಯಕ, ಡಯಟ್ ಪ್ರಾಂಶುಪಾಲ ಶಿವರಾಮ ಇದ್ದರು.