ಅರ್ಹ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸಿ: ಚಿದಾನಂದ

| Published : Dec 16 2024, 12:45 AM IST

ಅರ್ಹ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸಿ: ಚಿದಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನಲ್ಲಿ ಮೂರು ಸಾವಿರಕ್ಕಿಂತ ಅಧಿಕ ವಿಕಲಚೇತನರಿದ್ದು, ಸರ್ಕಾರದಿಂದ ಅನೇಕ ಸೌಲಭ್ಯಗಳು ಇವೆ. ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸೌಲಭ್ಯಗಳು ಸಿಗದೇ ಇರುವ ಅನೇಕ ವಿಕಲಚೇತನರನ್ನು ಗುರ್ತಿಸಿ, ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರಶಸ್ತಿ ವಿಜೇತ, ವಿಕಲಚೇತನ ಪತ್ರಕರ್ತ ಮಹಾಂತೇಶ್ ಬ್ರಹ್ಮ ಅವರು ಕೆಲಸ ನಿರ್ವಹಿಸಬೇಕಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದ ಹೇಳಿದ್ದಾರೆ.

- ಜಗಳೂರು ಪತ್ರಕರ್ತರ ಸಂಘದಲ್ಲಿ ವಿಕಲಚೇತನ ಮಹಾಂತೇಶ್ ಬ್ರಹ್ಮಗೆ ಸನ್ಮಾನ - - -ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನಲ್ಲಿ ಮೂರು ಸಾವಿರಕ್ಕಿಂತ ಅಧಿಕ ವಿಕಲಚೇತನರಿದ್ದು, ಸರ್ಕಾರದಿಂದ ಅನೇಕ ಸೌಲಭ್ಯಗಳು ಇವೆ. ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸೌಲಭ್ಯಗಳು ಸಿಗದೇ ಇರುವ ಅನೇಕ ವಿಕಲಚೇತನರನ್ನು ಗುರ್ತಿಸಿ, ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರಶಸ್ತಿ ವಿಜೇತ, ವಿಕಲಚೇತನ ಪತ್ರಕರ್ತ ಮಹಾಂತೇಶ್ ಬ್ರಹ್ಮ ಅವರು ಕೆಲಸ ನಿರ್ವಹಿಸಬೇಕಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದ ಹೇಳಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ಪಡೆದ ವಿಕಲಚೇತನ, ಪತ್ರಕರ್ತ ಮಹಾಂತೇಶ್ ಬ್ರಹ್ಮ ಅವರನ್ನು ಸಂಘದಿಂದ ಸನ್ಮಾನಿಸಿ ಅವರು ಮಾತನಾಡಿದರು.

ಮಹಾಂತೇಶ್ ಬ್ರಹ್ಮ ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಕಲಚೇತನರ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ಸಾಧನೆ ಕೊಡುಗೆ ಗುರುತಿಸಿ, ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಡಿ.3ರಂದು ವಿಕಲಚೇತನರ ದಿನಾಚರಣೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದ್ದಾರೆ. ಇದು ಜಗಳೂರು ತಾಲೂಕು ಹಾಗೂ ದಾವಣಗೆರೆ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.

ಸನ್ಮಾನ ಸ್ವೀಕರಿಸಿದ ಮಹಾಂತೇಶ್ ಬ್ರಹ್ಮ ಮಾತನಾಡಿ, ನನ್ನ ಸೇವೆ ಗುರ್ತಿಸಿ ರಾಜ್ಯ ಸರ್ಕಾರ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಗಳೂರು ಸೇರಿದಂತೆ ರಾಜ್ಯದಲ್ಲಿ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ತಾಲೂಕು ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ. ಐಹೊಳೆ, ಖಜಾಂಚಿ ಜಗದೀಶ್‌, ಕಾರ್ಯದರ್ಶಿ ಜೆ.ಓ. ರವಿಕುಮಾರ್‌, ಹಿರಿಯ ಪತ್ರಕರ್ತರಾದ ಎಂ.ಸಿ. ಬಸವರಾಜು, ಸೋಮನಗೌಡ, ಮಂಜಯ್ಯ, ಮಹಮ್ಮದ್‌ ರಕೀಬ್‌, ಸಿದ್ದಮ್ಮನ ಹಳ್ಳಿ ಬಸವರಾಜು, ಎಂ. ಹೊಳೆ ಮಹಾಲಿಂಗಪ್ಪ, ಮಲೇಮಾಚಿಕೆರೆ ಸತೀಶ್‌, ಶಿವಲಿಂಗಪ್ಪ, ಜೀವನ್‌ ಕುಮಾರ್ ಇದ್ದರು.

- - - -15ಜೆ.ಜಿ.ಎಲ್.1:

ಜಗಳೂರು ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಚೇರಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ, ಪತ್ರಕರ್ತ ಮಹಾಂತೇಶ್ ಬ್ರಹ್ಮ ಅವರನ್ನು ಸನ್ಮಾನಿಸಲಾಯಿತು.