ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯಗಳು ದೊರಕಲು ಶ್ರಮಿಸಿ

| Published : Nov 21 2024, 01:04 AM IST

ಸಾರಾಂಶ

ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಕಾನೂನುಬದ್ಧ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಅವರಿಗೆ ಉದ್ಯೋಗ ಭದ್ರತೆ, ಆರೋಗ್ಯ, ಶಿಕ್ಷಣ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಕಾನೂನುಬದ್ಧ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಅವರಿಗೆ ಉದ್ಯೋಗ ಭದ್ರತೆ, ಆರೋಗ್ಯ, ಶಿಕ್ಷಣ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಇಲ್ಲಿನ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕಾವೆಂಜರ್ಸ್ ವೃತ್ತಿನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯ ಹೋಟೆಲ್, ಕೈಗಾರಿಕೆಗಳಲ್ಲಿ ಸರ್ಕಾರದ ಕಾನೂನನ್ನು ಉಲ್ಲಂಘಿಸಿ, ಸಫಾಯಿ ಕರ್ಮಚಾರಿಗಳನ್ನು ಬಳಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಇದು ಪುನಃ ಮರುಕಳಿಸದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಸೂಕ್ಷ್ಮವಾಗಿ ಗಮನಹರಿಸಬೇಕು ಎಂದು ಸೂಚಿಸಿದರು.

ಈ ಪ್ರಕ್ರಿಯೆ ನಿರಂತರವಾಗಿದ್ದು, ತಿಂಗಳಿಗೊಮ್ಮೆ ಜನರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಬೇಕು. ಅಲ್ಲದೇ ಸಾರ್ವಜನಿಕರೂ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಕಾಲಿಕ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖಾಧಿಕಾರಿ ಗಮನಕ್ಕೆ ತರಬೇಕು ಎಂದರು.

ಭದ್ರಾವತಿ ತಾಲೂಕಿನ ಗುಡ್ಡದ ನೇರಳೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಶಕಗಳ ಹಿಂದೆ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣದ ಕುರಿತು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖಾಧಿಕಾರಿಗಳು ಪರಿಶೀಲಿಸಿ, ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.

2021-22ನೇ ಸಾಲಿನಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕಾವೆಂಜರ್ಸ್‍ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಹಾಯಧನ ಮಂಜೂರಾತಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಬಂದಲ್ಲಿ ಕ್ರಮಕ್ಕೆ ಸೂಚಿಸಲಾಗುವುದು. ಅರ್ಹ ಅರ್ಜಿದಾರರಿಗೆ ಸೌಲಭ್ಯ ಕೊಡುವಲ್ಲಿ ಬ್ಯಾಂಕುಗಳ ವ್ಯವಸ್ಥಾಪಕರಿಂದ ಅನಗತ್ಯ ವಿಳಂಬ ಆಗುತ್ತಿರುವ ಬಗ್ಗೆ ದೂರುಗಳಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚಿಸಿದರು.ಜಿಲ್ಲೆಯ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಶುಲ್ಕ ಭರಿಸಲು ನಗರ ಸ್ಥಳೀಯ ಸಂಸ್ಥೆಗಳ ವಂತಿಕೆ ಇಂದ ಭರಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಅಂತಹ ವಿದ್ಯಾರ್ಥಿಗಳಿದ್ದಲ್ಲಿ ಮಾಹಿತಿ ನೀಡಿದಲ್ಲಿ ಶುಲ್ಕ ಭರಿಸುವ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದರು.ದಶಕಗಳ ಹಿಂದೆ ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆಯ ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಮಾಡುವಾಗ ಮೃತಪಟ್ಟ ಕುಟುಂಬಕ್ಕೆ ಪರಿಹಾರ ದೊರಕದಿರುವುದು ಸಮಿತಿ ಸದಸ್ಯರು ಗಮನಕ್ಕೆ ತಂದಿದ್ದು, ಪರಿಹಾರಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‍ಕುಮಾರ್ ಭೂಮರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಶ್ರೀಮತಿ ಕವಿತಾಯೋಗಪ್ಪನವರ್, ಸಮಿತಿ ಸದಸ್ಯರಾದ ಚಿನ್ನಯ್ಯ, ಭಾನುಪ್ರಸಾದ್, ಕಾಗಿನಲ್ಲಿ ನಾಗರಾಜ್, ಶ್ರೀಮತಿ ರಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.