ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ಡಾ. ನಂದಿತಾ

| Published : Sep 25 2024, 01:00 AM IST

ಸಾರಾಂಶ

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಯವರು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಯವರು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ಹೀಗಾಗಿ ಇಂತಹ ಗುಣಮಟ್ಟದ ಅಂಗನವಾಡಿ ಕಟ್ಟಡ ನಿರ್ಮಿಸಿಕೊಳ್ಳಲು ಸಾಧ್ಯವಾಗಿದೆ ಎಂದು ೧೫ನೇ ವಾರ್ಡಿನ ಸದಸ್ಯೆ ಡಾ. ನಂದಿತಾ ಶಿವನಗೌಡ ದಾನರಡ್ಡಿ ಹೇಳಿದರು.

ಪಟ್ಟಣದ ೧೫ನೇ ವಾರ್ಡಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು ₹೧೪.೨೧ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ನನ್ನ ವಾರ್ಡಿನ ಸಮಗ್ರ ಅಭಿವೃದ್ಧಿ ಜತೆಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಸುಮಾರು ದಶಕಗಳ ಕಾಲ ಬಾಡಿಗೆ ಕಟ್ಟಡದಲ್ಲಿತ್ತು. ಇದನ್ನು ಅರಿತ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಈ ಇಲಾಖೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ₹೨ ಕೋಟಿ ಅನುದಾನ ನೀಡಿದ್ದು, ಅದಕ್ಕೆ ಭೂಮಿ ಕೂಡ ಒದಗಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.

ಸಿಡಿಪಿಒ ಅಧಿಕಾರಿ ಬೆಟದಪ್ಪ ಮಾಳೆಕೊಪ್ಪ ಮಾತನಾಡಿ, ಮಕ್ಕಳಲ್ಲಿನ ಅಪೌಷ್ಟಿಕತೆ ನಿರ್ಮೂಲನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೆ ಇಲಾಖೆ ಶ್ರಮಿಸುತ್ತಿದೆ ಎಂದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯ ಅಮರೇಶ ಹುಬ್ಬಳ್ಳಿ, ಮುಖ್ಯಾಧಿಕಾರಿ ನಾಗೇಶ ಮಾತನಾಡಿದರು.

ಈ ಸಂದರ್ಭ ಸದಸ್ಯರಾದ ವಸಂತ ಭಾವಿಮನಿ, ಕಳಕಪ್ಪ ತಳವಾರ, ಅಶೋಕ ಅರಕೇರಿ, ರಿಯಾಜ್‌ ಖಾಜಿ, ಮುಖಂಡರಾದ ಇಕ್ಬಾಲ್‌ಸಾಬ ವಣಗೇರಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಚಂದ್ರು ಮರದಡ್ಡಿ, ಅಂಗನವಾಡಿ ಮೇಲ್ವಿಚಾರಕಿಯರಾದ ಲಲಿತಾ ನಾಯಕ, ಶಿವಪುತ್ರಮ್ಮ ಅಂಗಡಿ, ಕಾರ್ಯಕರ್ತರು, ಸಹಾಯಕಿಯರು ಇದ್ದರು.