ಮೂರ್ಕಣ್ಣು ಗುಡ್ಡ ರಕ್ಷಿತಾರಣ್ಯಕ್ಕೆ ತೀವ್ರ ವಿರೋಧ

| Published : Jul 24 2025, 01:45 AM IST

ಮೂರ್ಕಣ್ಣು ಗುಡ್ಡ ರಕ್ಷಿತಾರಣ್ಯಕ್ಕೆ ತೀವ್ರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ನೂರು ವರ್ಷಗಳ ಹಿಂದಿನ ಯೋಜನೆಯನ್ನು ಇಂದು ಜಾರಿಗೊಳಿಸುವ ಅರಣ್ಯ ಇಲಾಖೆಯ ಹುನ್ನಾರ ಫಲಿಸುವುದಿಲ್ಲ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ನೂರು ವರ್ಷಗಳ ನಂತರ ಯೋಜನೆ ಜಾರಿಗೊಳಿಸುವ ಹುನ್ನಾರ ನಡೆಸುತ್ತಿರುವ ಅರಣ್ಯ ಇಲಾಖೆ ಸ್ಥಳೀಯರಿಗೆ ಕಿರುಕುಳ ನೀಡುತ್ತಿದೆ. ಇದು ಅಕ್ಷಮ್ಯ. ಅಂದು ಈ ಭಾಗದಲ್ಲಿದ್ದ ಜನಸಂಖ್ಯೆ ಹಾಗೂ ಬೆಳೆಗಳ ಸ್ಥಿತಿಯೇ ಬೇರೆ. ಇಂದಿನ ಸ್ಥಿತಿಯೆ ಬೇರೆ ಇದೆ. ಆದ್ದರಿಂದ ಮೂರ್ಕಣ್ಣು ಗುಡ್ಡ ವ್ಯಾಪ್ತಿಯನ್ನು ರಕ್ಷಿತಾರಣ್ಯ ಪ್ರದೇಶ ಮಾಡುವ ಅರಣ್ಯ ಇಲಾಖೆ ಕ್ರಮದ ವಿರುದ್ಧ ಒಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ನೂರು ವರ್ಷಗಳ ಹಿಂದಿನ ಯೋಜನೆಯನ್ನು ಇಂದು ಜಾರಿಗೊಳಿಸುವ ಅರಣ್ಯ ಇಲಾಖೆಯ ಹುನ್ನಾರ ಫಲಿಸುವುದಿಲ್ಲ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಮೂರ್ಕಣ್ಣು ಗುಡ್ಡ ಸೆಕ್ಷನ್ ೪ ಬಾಧಿತರಾದ ಕಾಡುಮನೆ, ಕ್ಯಾಮನಹಳ್ಳಿ, ಜಂಭರಡಿ, ಅಚ್ಚನಹಳ್ಳಿ, ಅಗನಿ, ನಡಹಳ್ಳಿ, ಮಕ್ಕಿಹಳ್ಳಿ, ಮದನಾಪುರ ಗ್ರಾಮಸ್ಥರು ಅರಣ್ಯ ಇಲಾಖೆಯಿಂದಾಗುವ ದೌರ್ಜನ್ಯ ವಿರೋಧಿಸಿ ತಾಲೂಕಿನ ಕಾಡುಮನೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ೧೯೨೦ರಲ್ಲಿ ರಕ್ಷಿತಾರಣ್ಯ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆ ಸೆಕ್ಷನ್ ೪ ಅನ್ನು ಹೊರಡಿಸಿದೆ. ಆದರೆ, ನಂತರದ ನೂರು ವರ್ಷಗಳಲ್ಲಿ ಈ ಯೋಜನೆ ಸಂಬಂಧ ಯಾವುದೇ ಪ್ರಗತಿ ಮಾಡಲಾಗಿಲ್ಲ. ಆದರೆ, ನೂರು ವರ್ಷಗಳ ನಂತರ ಯೋಜನೆ ಜಾರಿಗೊಳಿಸುವ ಹುನ್ನಾರ ನಡೆಸುತ್ತಿರುವ ಅರಣ್ಯ ಇಲಾಖೆ ಸ್ಥಳೀಯರಿಗೆ ಕಿರುಕುಳ ನೀಡುತ್ತಿದೆ. ಇದು ಅಕ್ಷಮ್ಯ. ಅಂದು ಈ ಭಾಗದಲ್ಲಿದ್ದ ಜನಸಂಖ್ಯೆ ಹಾಗೂ ಬೆಳೆಗಳ ಸ್ಥಿತಿಯೇ ಬೇರೆ. ಇಂದಿನ ಸ್ಥಿತಿಯೆ ಬೇರೆ ಇದೆ. ಆದ್ದರಿಂದ ಮೂರ್ಕಣ್ಣು ಗುಡ್ಡ ವ್ಯಾಪ್ತಿಯನ್ನು ರಕ್ಷಿತಾರಣ್ಯ ಪ್ರದೇಶ ಮಾಡುವ ಅರಣ್ಯ ಇಲಾಖೆ ಕ್ರಮದ ವಿರುದ್ಧ ಒಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.

ಹೋರಾಟ ಅನಿವಾರ್ಯ:

ಅಂದು ನಮ್ಮ ಪೂರ್ವಿಕರು ಅರಣ್ಯ ರಕ್ಷಿಸಿದ್ದಕ್ಕಾಗಿ ನಾವು ಇಂದಿನ ಜನತೆ ಪಶ್ಚಾತ್ತಾಪ ಪಡುವಂತಾಗಿದೆ. ಇಂದು ತಾಲೂಕಿನಲ್ಲಿ ಅರಣ್ಯ ಇರುವುದರಿಂದ ಹೆಚ್ಚಿನ ಮಳೆ ಬೀಳುತ್ತಿದೆ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ನೀರು ಪೊರೈಕೆಯಾಗುತ್ತಿದೆ. ಇದರಿಂದ ಇಂದಿನ ಹಿರಿಯ ಅಧಿಕಾರಿಗಳು ಅರಣ್ಯ ಉಳಿಸುವ ಮಾತನಾಡುತ್ತಿದ್ದಾರೆ. ಸ್ಥಳೀಯ ಜನರು ಅರಣ್ಯ ನಾಶಕ್ಕೆ ಮನಸ್ಸು ಮಾಡಿದರೆ ಅರಣ್ಯ ಉಳಿಯುತ್ತಿರಲಿಲ್ಲ. ಅರಣ್ಯ ಇಲಾಖೆ ಹುಟ್ಟುವ ಮುನ್ನ ನಮ್ಮ ಪೂರ್ವಿಕರು ಇಲ್ಲಿ ಅರಣ್ಯ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಮರ್ಮವನ್ನೇ ಅರಿಯದೆ ರೈತರಿಗೆ ನೋಟಿಸ್ ನೀಡುವ ಮೂಲಕ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ವಿಧಾನಸೌಧದಲ್ಲಿ ನಾನು ನಿಮ್ಮೆಲ್ಲರ ಧ್ವನಿಯಾಗಿ ನಿಮಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅಗತ್ಯ ಬಿದ್ದರೆ ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧನಿರುತ್ತೇನೆ ಎಂದರು.

ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ ಮಾತನಾಡಿ, ಬ್ರಿಟೀಷರ ಕಾಲದ ಸರ್ಕಾರ ಮೂರುಕಣ್ಣು ಗುಡ್ಡ ವ್ಯಾಪ್ತಿಯ ೨೮೦೦.೩೮ ಎಕರೆ ಭೂಮಿಯನ್ನು ಕಂದಾಯ ಭೂಮಿಯಾಗಿಯೆ ಉಳಿಸಿತ್ತು. ಸತತ ಒಂದು ಶತಮಾನದ ದಾಖಲೆಗಳನ್ನು ಸಲ್ಲಿಸಬೇಕು ಎಂದರೆ ಪ್ರತಿಯೊಬ್ಬ ರೈತರು ಸಲ್ಲಿಸಬೇಕು. ರೈತರ ಮಧ್ಯೆ ಹೊಂದಾಣಿಕೆ ಇಲ್ಲದಿದ್ದರೆ ಇಡೀ ಮೂರುಕಣ್ಣು ಗುಡ್ಡ ವ್ಯಾಪ್ತಿಯ ರೈತರ ಜಮೀನು ಅರಣ್ಯ ಇಲಾಖೆಯ ಪಾಲಾಗಲಿದೆ ಎಂದರು. ಕಂದಾಯ ಹಾಗೂ ಅರಣ್ಯ ಭೂಮಿಯನ್ನು ಸರ್ವೇ ನಡೆಸದೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಬಾರದೆಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಇದೇ ರೀತಿಯ ಹೋರಾಟವನ್ನು ಸಕಲೇಶಪುರ ತಾಲೂಕಿನಲ್ಲೂ ಹೋರಾಟ ನಡೆಸಬೇಕಿದೆ ಎಂದರು.

ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಹಿತ್ ಮಾತನಾಡಿ, ಸೆಕ್ಷನ್ ೪ ವಿರುದ್ಧ ಬೆಳೆಗಾರರ ಸಂಘ ಹೋರಾಟ ಮಾಡುತ್ತಿದೆ. ಈ ಹೋರಾಟದ ಪ್ರತಿಯೊಂದು ಹಾದಿಯಲ್ಲೂ ಸಂಘ ಕೈಜೋಡಿಸುತ್ತದೆ ಎಂದರು.

ಬೆಳೆಗಾರ ಅಚ್ಚನಹಳ್ಳಿ ಪೂರ್ಣೇಶ್ ಮಾತನಾಡಿ, ನೂರು ವರ್ಷಗಳ ಹಿಂದೆ ಘೋಷಣೆಯಾದ ಸೆಕ್ಷನ್ ೪ ಇಂದು ಪ್ರಸ್ತುತವಲ್ಲ. ಹೊಸದಾಗಿ ಸೆಕ್ಷನ್ ೪ ಘೋಷಣೆ ಮಾಡಿ ನಂತರ ಅರಣ್ಯ ಇಲಾಖೆಯ ಭೂಮಿ ಎಂದು ಘೋಷಿಸಿ ಇಂದು ಸೆಕ್ಷನ್ ೪ ಎಂದು ಘೋಷಿಸಿರುವುದು ಕಾನೂನು ಬಾಹಿರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಜಯಪಾಲ್, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಬೆಳೆಗಾರರ ಸಂಘದ ಮೇಘರಾಜ್, ಕಾಡುಮನೆ ಗ್ರಾಮಸ್ಥರಾದ ಪ್ರದೀಪ್ ಕೆ.ಎಮ್, ವಿಜಿ, ಅನಿಲ್, ಹರೀಶ್ ಮುಂತಾದವರು ಹಾಜರಿದ್ದರು.

*ಹೇಳಿಕೆ:

ಸೆಕ್ಷನ್ ೪ ಅಧಿಸೂಚನೆಯ ಪ್ರಕಾರ ಅರಣ್ಯ ಇಲಾಖೆಯ ಅಧಿಕಾರಿ ಆ ಭೂಮಿ ಅರಣ್ಯವಾಗಬೇಕಾದರೆ ಅಲ್ಲಿನ ನಿವಾಸಿಗಳ ಒಪ್ಪಿಗೆ ಪಡೆಯಬೇಕು. ಇದು ಮೂರ್ಕಣ್ಣು ಗುಡ್ಡ ವ್ಯಾಪ್ತಿಯಲ್ಲಿ ನಡೆದಿಲ್ಲ. ಸೆಕ್ಷನ್ ೪ ಅರಣ್ಯ ಘೋಷಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅರಣ್ಯ ಇಲಾಖೆಯ ಕ್ರಮ ಸಾಕಷ್ಟು ಕಾನೂನು ಬಾಹಿರವಾಗಿ ಉಳಿದಿದೆ.

- ಸುಧೀಶ್‌ , ಕಾನೂನು ತಜ್ಞ

*ಹೇಳಿಕೆ:

ಅರಣ್ಯ ಇಲಾಖೆ ಮೂರುಕಣ್ಣು ಗುಡ್ಡ ವ್ಯಾಪ್ತಿಯನ್ನು ೧೯೨೪ರಲ್ಲಿ ಘೋಷಿಸಲಾಗಿದೆ. ಆದರೆ, ನಂತರ ರಕ್ಷಿತಾ ಅರಣ್ಯ ಎಂದು ಘೋಷಿಸುವ ಕೆಲಸ ನೂರು ವರ್ಷಗಳ ನಂತರ ನಡೆಯುತ್ತಿದೆ. ಇದು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಉದಾಹರಣೆ. ಸುಮಾರು ನಾಲ್ಕು ತಲೆಮಾರುಗಳು ಕಳೆದ ನಂತರ ರಕ್ಷಿತಾರಣ್ಯ ಮಾಡುವ ಇಲಾಖೆಯ ಕ್ರಮದ ವಿರುದ್ಧ ಹೋರಾಟ ನಡೆಸಬೇಕಿದೆ.

- ಸುಭಾಷ್, ಸಂತ್ರಸ್ತ