ಶಿವಮೊಗ್ಗ : ಜಿಲ್ಲೆಯಲ್ಲೇ 247 ಜನ ಬಾಲ ಗರ್ಭಿಣಿಯರ ಪ್ರಕರಣ ದಾಖಲು

| N/A | Published : Jul 24 2025, 01:45 AM IST / Updated: Jul 24 2025, 06:54 PM IST

pregnancy Delay

ಸಾರಾಂಶ

  ಜಿಲ್ಲಾ ವ್ಯಾಪ್ತಿಯಲ್ಲೇ 247 ಜನ ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್‌.ಸಂತೋಷ್‌ ಆತಂಕ  

  ಶಿವಮೊಗ್ಗ : 2023-24ರಲ್ಲಿ ನಮ್ಮ ಜಿಲ್ಲಾ ವ್ಯಾಪ್ತಿಯಲ್ಲೇ 247 ಜನ ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್‌.ಸಂತೋಷ್‌ ಆತಂಕ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಕೋಶ ಮತ್ತು ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಹಾಗೂ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಜಾಲತಾಣದ ಪರಿಣಾಮದಿಂದಾಗಿ ಪ್ರಸ್ತುತ ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು, ಎಲ್ಲ ಮಕ್ಕಳು ಪೋಕ್ಸೋ ಹಾಗೂ ಬಾಲ್ಯವಿವಾಹದ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಆಕರ್ಷಷಣೆಗೆ ಒಳಗಾಗಿ ಇತ್ತೀಚೆಗೆ ಚಿಕ್ಕ ವಯಸ್ಸಿನ ಮಕ್ಕಳು ಮನೆ ಬಿಟ್ಟು ಹೋಗಿ ಮದುವೆಯಾಗುತ್ತಿರುವುದು ಹಾಗೂ ಇತರೆ ಅಪರಾಧಗಳನ್ನು ಕಾಣುತ್ತಿದ್ದೇವೆ. ಕಾನೂನು ನಮ್ಮೆಲ್ಲರಿಗೆ ಹಲವು ಮೂಲಭೂತ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ನೀಡಿದೆ. ಅದರ ದುರ್ಬಳಕೆ ಆಗಬಾರದು. ದುರ್ಬಳಕೆಯನ್ನು ತಡೆಯಲು ಕಾಯ್ದೆಗಳ ರೂಪದಲ್ಲಿ ಕೆಲವು ನಿರ್ಬಂಧಗಳನ್ನು ಹಾಕಲಾಗಿದೆ. ನಮ್ಮ ನೆಲದ ಕಾನೂನು ಸಂವಿಧಾನ, ಇದೇ ನಮ್ಮ ತಳಹದಿ ಮತ್ತು ಬುನಾದಿ, ನಾವೆಲ್ಲರೂ ಕಾನೂನನ್ನು ಅನುಸರಿಸಬೇಕು ಎಂದರು.

ಪೋಕ್ಸೊ ಹಾಗೂ ಬಾಲ್ಯವಿವಾಹ ಕಾಯ್ದೆಗಳ ಬಗ್ಗೆ ಎಲ್ಲ ಮಕ್ಕಳಿಗೆ ಅರಿವು ಇರಬೇಕು. ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಜ್ಞಾನ ಇರಬೇಕು. ಯಾವುದೋ ಉದ್ದೇಶದಿಂದ ಪುರುಷ/ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ಮುಟ್ಟುವುದು, ಸ್ವರ್ಶಿಸುವುದರ ಕುರಿತು ಜಾಗ್ರತೆಯಿಂದರಬೇಕು.

ಪೋಕ್ಸೋ ಹಾಗೂ ಬಾಲ್ಯ ವಿವಾಹ ಕಾಯ್ದೆಗಳಡಿಯಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯಲ್ಲಿ ರಕ್ಷಣೆ ಇದೆ. ಅದನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕು. ಶಾಲೆ ಹಾಗೂ ತಮ್ಮ ಸುತ್ತಮುತ್ತಲಿನಲ್ಲಿ ಬ್ಯಾಡ್ ಟಚ್‌ನಂತಹ ಪ್ರಕರಣಗಳು ಅಥವಾ ಇಂತಹ ಅನುಭವವಾದರೆ ಶಾಲಾ ಶಿಕ್ಷಕರಿಗೆ ಅಥವಾ ತಂದೆ ತಾಯಿಗೆ ಕೂಡಲೇ ತಿಳಿಸಬೇಕು. ನಿಮ್ಮನ್ನು ರಕ್ಷಣೆ ಮಾಡುವ ಸಂಪೂರ್ಣ ಜವಾಬ್ದಾರಿ ಕಾನೂನು ಕೈಗೊಳುತ್ತದೆ ಎಂದು ಸಲಹೆ ನೀಡಿದರು.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮಾತಿನಂತೆ “ದೇವರು ಯಾವಾಗಲು ನಮ್ಮ ಜೊತೆ ಇರುತ್ತಾರೆ. ಇವತ್ತು ನನ್ನ ದಿನ, ನಾನು ಇದನ್ನು ಮಾಡುತ್ತೇನೆ, ನಾನೇ ಉತ್ತಮ, ನಾನೇ ವಿಜಯಶಾಲಿ” ಈ 5 ಸೂತ್ರಗಳು ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಜ್ಞಾನದ ಮೇಲೆ ನಂಬಿಕೆ ಮತ್ತು ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.

ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಪೋಕ್ಸೋ ಹಾಗೂ ಬಾಲ್ಯ ವಿವಾಹ ಕಾಯ್ದೆ ಕುರಿತು ಅರಿವು ಅತ್ಯಗತ್ಯ. ಸರ್ಕಾರಿ ಶಾಲೆಯಲ್ಲಿ ಬಡವರು ಹಾಗೂ ಮಧ್ಯವರ್ಗದ ಮಕ್ಕಳೇ ಹೆಚ್ಚಾಗಿ ಓದುವುದರಿಂದ ಆ ಮಕ್ಕಳ ಕುಟುಂಬದ ತಂದೆ ತಾಯಿಗಳು ಅನಕ್ಷರಸ್ಥರಾಗಿರುತ್ತಾರೆ. ಇದರಿಂದ ಪೋಕ್ಸೋ ಹಾಗೂ ಬಾಲ್ಯ ವಿವಾಹದಂತಹ ಕಾಯ್ದೆಗಳ ಬಗ್ಗೆ ಕುಟುಂಬಕ್ಕೆ ಮತ್ತು ಮಕ್ಕಳಿಗೆ ಸಾಮಾನ್ಯವಾಗಿ ಅರಿವು ಇರುವುದಿಲ್ಲ. ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಗರದ 7 ಕರ್ನಾಟಕ ಪಬ್ಲಿಕ್ ಶಾಲೆಗಳ ಮಕ್ಕಳನ್ನು ಒಟ್ಟಾಗಿ ಸೇರಿಸಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಮೂಲಕ ಅವರಿಗೆ ಪೋಕ್ಸೋ ಹಾಗೂ ಬಾಲ್ಯವಿವಾಹ ಕಾಯ್ದೆದ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಮಕ್ಕಳು ಇದರ ಸದುಪಯೋಗ ಪಡೆಯಬೇಕು ಎಂದರು.

ಈ ವೇಳೆ ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಡಿಡಿಪಿಐ ಮಂಜುನಾಥ್, ಕ್ಷೇತ್ರ ಸಮನ್ವಯ ಅಧಿಕಾರಿ ಶಿವಣ್ಣ ಸಂಗಣ್ಣನವರ್, ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Read more Articles on