ಎಸ್‌ಟಿಆರ್‌ಆರ್‌ ಯೋಜನೆ ರಾಮನಗರ ಜಿಲ್ಲೆಗೂ ಅನುಕೂಲ

| Published : Sep 12 2024, 01:47 AM IST

ಎಸ್‌ಟಿಆರ್‌ಆರ್‌ ಯೋಜನೆ ರಾಮನಗರ ಜಿಲ್ಲೆಗೂ ಅನುಕೂಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ರಾಜಧಾನಿ ಬೆಂಗಳೂರಲ್ಲಿನ ಸಂಚಾರ ದಟ್ಟಣೆ ತಡೆಗಟ್ಟುವ ಜೊತೆಗೆ ರಾಮನಗರ ಜಿಲ್ಲೆಗೂ ಅನುಕೂಲ ಕಲ್ಪಿಸಲಿರುವ ಬೆಂಗಳೂರು ಸ್ಯಾಟಲೈಟ್​ ಟೌನ್​ ರಿಂಗ್​ ರೋಡ್​ (STRR​) ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

- ಸ್ಯಾಟ್ ಲೈಟ್ ರಿಂಗ್ ರಸ್ತೆ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ - ಬೆಂಗಳೂರು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯ ರಾಜಧಾನಿ ಬೆಂಗಳೂರಲ್ಲಿನ ಸಂಚಾರ ದಟ್ಟಣೆ ತಡೆಗಟ್ಟುವ ಜೊತೆಗೆ ರಾಮನಗರ ಜಿಲ್ಲೆಗೂ ಅನುಕೂಲ ಕಲ್ಪಿಸಲಿರುವ ಬೆಂಗಳೂರು ಸ್ಯಾಟಲೈಟ್​ ಟೌನ್​ ರಿಂಗ್​ ರೋಡ್​ (STRR​) ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್ ಯೋಜನೆ ಅಡಿಯಲ್ಲಿ ​ ದಾಬಾಸ್​ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಅನೇಕಲ್​, ತಟ್ಟೆಕೆರೆ, ಕನಕಪುರ, ಮಾಗಡಿ, ರಾಮನಗರ ಸೇರಿದಂತೆ 12 ಪ್ರಮುಖ ಪಟ್ಟಣಗಳು ಬರುತ್ತವೆ.

ಇದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದುಹೋಗುತ್ತದೆ. ಬೆಂಗಳೂರಿನ ಉತ್ತರ ಭಾಗವನ್ನು ಪೂರ್ವ ಭಾಗದೊಂದಿಗೆ ಸಂಪರ್ಕಿಸುವ ಈ ರಸ್ತೆಯೂ ತಮಿಳುನಾಡಿನ ಹೊಸೂರ್ ಅನ್ನು ಸಂಪರ್ಕಿಸುತ್ತದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳನ್ನು ಬೈಪಾಸ್ ಮಾಡುವ ಟ್ರಕ್‌ಗಳು ಮತ್ತು ವಾಣಿಜ್ಯ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ.

ದಾಬಸ್​​ಪೇಟೆ-ದೊಡ್ಡಬಳ್ಳಾಪುರ ಬೈಪಾಸ್ ವಿಭಾಗ ಎನ್ ಎಚ್ -648 (42 ಕಿಮೀ) (1,438 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ) ಮತ್ತು ದೊಡ್ಡಬಳ್ಳಾಪುರ ಬೈಪಾಸ್​-ಹೊಸಕೋಟೆ ಎನ್.ಎಚ್ - 648 (37.6 ಕಿಮೀ) (1,317 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ) ಈ ಎರಡು ರಸ್ತೆಗಳು ಬೆಂಗಳೂರು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​​ ಪೂರ್ಣಗೊಂಡರೆ ತುಮಕುರು ರಸ್ತೆ ಮಾರ್ಗವಾಗಿ ನೇರವಾಗಿ ಬೆಂಗಳೂರು ನಗರವನ್ನು ಪ್ರವೇಶಿಸದೆ ತಮಿಳುನಾಡು ಗಡಿಯನ್ನು ಪ್ರವೇಶಿಸಬಹುದಾಗಿದೆ. ದೊಬ್ಬಾಸ್​​ಪೇಟೆ-ದೊಡ್ಡಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಬೈಪಾಸ್​-ಹೊಸಕೋಟೆ ಒಟ್ಟು 80 ಕಿಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ, ತುಮಕೂರು ರಸ್ತೆ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ, ಆಂಧ್ರಪ್ರದೇಶ, ತಮಿಳುನಾಡು ಅಥವಾ ಕೆಐಎ ಕಾರ್ಗೋ ಟರ್ಮಿನಲ್​ಗಳ ಕಡೆಗೆ ಚಲಿಸುವ ಭಾರಿ ವಾಹನಗಳು ನಗರವನ್ನು ಪ್ರವೇಶಿಸುವುದಿಲ್ಲ. ಬದಲಿಗೆ ಈ ಮಾರ್ಗದ ಮೂಲಕ ನೇರವಾಗಿ ದೇವನಹಳ್ಳಿ ಮತ್ತು ಹೊಸಕೋಟೆ ಕಡೆಗೆ ಹೋಗುತ್ತವೆ. ಇದರಿಂದ ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆ ಬಹತೇಕ ಕಡಿಮೆಯಾಗಲಿದೆ.

30 ದಿನಗಳಲ್ಲೇ ಅನುಮೋದನೆ

ಕಳೆದ 4-5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನೂತನ ಸಂಸದ ಡಾ.ಸಿ.ಎನ್. ಮಂಜುನಾಥ್ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು 45 ದಿನಗಳಲ್ಲಿ ಪ್ರಾರಂಭ ಮಾಡುವುದಾಗಿ ಭರವಸೆ ನೀಡಿದ್ದರು. ಆಶ್ಚರ್ಯ ಎಂದರೆ 30 ದಿನಗಳಲ್ಲೇ ಅನುಮೋದನೆ ನೀಡಿದ್ದಾರೆ.

2022ರಲ್ಲಿಯೇ ಮೋದಿ ಶಂಕುಸ್ಥಾಪನೆ

ಭಾರತ್​ ಮಾಲಾ ಪರಿಯೋಜನಾ ಅಡಿಯಲ್ಲಿ ಸ್ಯಾಟ್​ಲೈಟ್​ ಟೌನ್​ ರಿಂಗ್​ ರೋಡ್​ ನಿರ್ಮಾಣವಾಗುತ್ತಿದೆ. 288 ಕಿಮೀ ಉದ್ದದ ರಸ್ತೆ ಇದಾಗಿದ್ದು, ಕರ್ನಾಟಕದಲ್ಲಿ 243 ಕಿಮೀ ಮತ್ತು ತಮಿಳುನಾಡಿನಲ್ಲಿ 45 ಕಿಮೀ ಹಾದು ಹೋಗುತ್ತದೆ. ಈ ಸ್ಯಾಟ್ ​ಲೈಟ್​ ಟೌನ್​ ರಿಂಗ್​ ರೋಡ್​​​ಗೆ 2022ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಸ್ಯಾಟ್ ಲೈಟ್ ರಿಂಗ್ ರಸ್ತೆ ಯೋಜನೆ ಅನುಮೋದನೆಗೆ ಸಂಸದರ ಅಭಿನಂದನೆ

ರಾಮನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಯಾಟ್ ಲೈಟ್ ರಿಂಗ್ ರಸ್ತೆ ಯೋಜನೆಯಿಂದ ಬೆಂಗಳೂರು ನಗರ, ಗ್ರಾಮೀಣ ಮತ್ತು ಸುತ್ತಮುತ್ತಲಿನ ತಾಲೂಕುಗಳಿಗೆ ಪ್ರಯೋಜನವಾಗಲಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಯೋಜನೆಯು ಮುಂದುವರೆಯುತ್ತಿರುವುದಕ್ಕೆ ಸಂಸದ ಡಾ.ಸಿ.ಎನ್. ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

4,750 ಕೋಟಿ ರು.ಗಳ ಅಂದಾಜಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿದೆ. ಇದು ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವುದು ಮತ್ತು ಪ್ರಯಾಣದ ದಕ್ಷತೆ, ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಪ್ರಯಾಣದ ಸಮಯ ಉಳಿಯುತ್ತದೆ.

ಇಡೀ ಬೆಂಗಳೂರು ನಗರ ಗ್ರಾಮೀಣ ಮತ್ತು ಸುತ್ತಮುತ್ತಲಿನ ತಾಲೂಕುಗಳಾದ ಡಾಬಸ್ ಪೇಟೆ ದೇವನಹಳ್ಳಿ ದೊಡ್ಡಬಳ್ಳಾಪುರ ಸರ್ಜಾಪುರ ಹೊಸಕೋಟೆ ಕನಕಪುರ ಅತ್ತಿಬೆಲೆ ಸೂಲಿಬೆಲೆ ತಟ್ಟೆಕೆರೆ ರಾಮನಗರ ಮಾಗಡಿ ಮತ್ತು ಆನೇಕಲ್‌ಗೆ ಗಣನೀಯ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.

ಈ ಪ್ರದೇಶಗಳ ಅಭಿವೃದ್ಧಿಗೆ ಪ್ರಮುಖ ಮೈಲಿಗಲ್ಲಾಗಿದೆ, ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರವನ್ನು ನೀಡುತ್ತದೆ. ಸಾವಿರಾರು ದೈನಂದಿನ ಪ್ರಯಾಣಿಕರಿಗೆ ಸಂಪರ್ಕವನ್ನು ಸುಧಾರಿಸಲು ಮತ್ತು ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲು ನೆರವಾಗಲಿದೆ.

ಸಮಸ್ತ ರಾಜ್ಯದ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ನಿತಿನ್ ಗಡ್ಕರಿರವರು ಸ್ಯಾಟ್ ಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಟೆಂಡರ್ ಪ್ರಕ್ರಿಯೆಯನ್ನು ಅನುಮೋದಿಸಿದ್ದಕ್ಕಾಗಿ ಮಂಜುನಾಥ್ ಅಭಿನಂದನೆ ಸಲ್ಲಿಸಿದ್ದಾರೆ.