ಸಾರಾಂಶ
‘ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ನೀಡುವಲ್ಲಿ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯವಾಗುತ್ತಿದ್ದು, ನಮ್ಮ ಹಕ್ಕನ್ನು ರಕ್ಷಣೆ ಮಾಡಿಕೊಳ್ಳಲು ಹೋರಾಟ ನಡೆಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಬೆಂಗಳೂರು : ‘ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ನೀಡುವಲ್ಲಿ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯವಾಗುತ್ತಿದ್ದು, ನಮ್ಮ ಹಕ್ಕನ್ನು ರಕ್ಷಣೆ ಮಾಡಿಕೊಳ್ಳಲು ಹೋರಾಟ ನಡೆಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನ್ಯಾಯಯುತವಾಗಿ ನಮಗೆ ಬರಬೇಕಾದ ತೆರಿಗೆ ಪಾಲು ಕೇಳಿದರೆ ಇದಕ್ಕೆ ರಾಜಕೀಯ ಬಣ್ಣ ಕಟ್ಟುತ್ತಿದ್ದಾರೆ. ಕನ್ನಡಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಕ್ಕಿನ ರಕ್ಷಣೆ ಮಾಡಿಕೊಳ್ಳಲು ಹೋರಾಟ ನಡೆಸುವ ಕೆಲಸ ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ತೆರಿಗೆ ಸಂದಾಯದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. 4 ಲಕ್ಷ ಕೋಟಿ ರು.ಗೂ ಅಧಿಕ ಹಣವನ್ನು ತೆರಿಗೆಯಾಗಿ ನೀಡಿದರೂ ವಾಪಸ್ ನೀಡುತ್ತಿರುವುದು 55 ರಿಂದ 60 ಸಾವಿರ ಕೋಟಿ ರು. ಮಾತ್ರ. ನಾವು 1 ರು. ತೆರಿಗೆ ಪಾವತಿಸಿದರೆ ನಮಗೆ ವಾಪಸ್ ನೀಡುತ್ತಿರುವುದು 14 ರಿಂದ 15 ಪೈಸೆ ಮಾತ್ರ. ಮುಂದುವರೆದ ರಾಜ್ಯ ಎಂದು ನಮಗೆ ಅನ್ಯಾಯ ಮಾಡಬಾರದು ಎಂದು ಒತ್ತಾಯಿಸಿದರು.
ಲೋಕಸಭೆಯಲ್ಲಿ ಧ್ವನಿ ಎತ್ತಬೇಕು: ಹಸು ಹಾಲು ಕೊಡುತ್ತದೆ ಎಂದು ಎಲ್ಲ ಹಾಲನ್ನೂ ಕರೆದುಕೊಳ್ಳಬಾರದು. ಕರುವಿಗೂ ಹಾಲು ಬಿಡಬೇಕು. ಇಲ್ಲದಿದ್ದರೆ ಕರು ದುರ್ಬಲವಾಗುತ್ತದೆ. ನಮ್ಮ ಎಲ್ಲ ಸಂಸದರು, ರಾಜ್ಯಸಭಾ ಸದಸ್ಯರು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಲೋಕಸಭೆಯಲ್ಲಿ ಒಕ್ಕೊರಲ ಧ್ವನಿ ಎತ್ತಬೇಕು. ಆಗ ನ್ಯಾಯ ಸಿಗುತ್ತದೆ. 15 ನೇ ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಯಿತು. ಇದನ್ನು ಸರಿಪಡಿಸಿ ಎಂದು ಕೇಳಿದರೂ ಅನುದಾನ ನೀಡಲಿಲ್ಲ. ಆದರೂ ರಾಜ್ಯವನ್ನು ಅಭಿವೃದ್ಧಿಪಡಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
1973ರ ನ.1ರಂದು ಕರ್ನಾಟಕ ಎಂದು ನಾಮಕರಣವಾಗಿದ್ದು ಹಿಂದಿನ ಬಿಜೆಪಿ ಸರ್ಕಾರ 50 ನೇ ವರ್ಷಾಚರಣೆ ಆಚರಿಸಬೇಕಿತ್ತು. ಆದರೆ ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿಲ್ಲ. ನಾನು ಮುಖ್ಯಮಂತ್ರಿಯಾದ ಬಳಿಕ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ ವರ್ಷಪೂರ್ತಿ ‘ಕರ್ನಾಟಕ ಸಂಭ್ರಮ’ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು ಎಂದರು.
ಕರ್ನಾಟಕ ನಮ್ಮ ಸ್ವರ್ಗ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಕನ್ನಡ ಜ್ಯೋತಿ ಜಗಕ್ಕೆಲ್ಲ ಬೆಳಗು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಕರ್ನಾಟಕ ಹೆಸರಾಗಿ, ಉಸಿರಾಗಿ ಇಂದು 51 ವರ್ಷಕ್ಕೆ ಕಾಲಿಟ್ಟಿದ್ದೇವೆ. ನಮ್ಮ ಸ್ವರ್ಗವೇ ಕರ್ನಾಟಕವಾಗಿದ್ದು, ಕನ್ನಡವೇ ನಮ್ಮ ದೈವ ಭಾಷೆಯಾಗಿದೆ ಎಂದು ಬಣ್ಣಿಸಿದರು.
ನಮ್ಮ ಕರ್ನಾಟಕ ನಮ್ಮ ಹೆಮ್ಮೆಯಾಗಿದೆ. ಕನ್ನಡದ ಕೀರ್ತಿ ಪತಾಕೆ ಹಾರಿಸಬೇಕು. ಬದುಕಿನ ಪ್ರತಿ ಕ್ಷಣ ಕನ್ನಡವನ್ನೇ ಉಸಿರಾಗಿಸಿಕೊಳ್ಳಬೇಕು. ತಾಯ್ನಾಡಿಗೆ ಗೌರವ ಸಲ್ಲಿಸುವುದರೊಂದಿಗೆ ಈ ನೆಲಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎರಡು ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ ಭಾಷೆ, ನೆಲ, ಸಂಸ್ಕೃತಿ, ಕರ್ನಾಟಕದ ಖ್ಯಾತಿಯನ್ನು ಬೆಳೆಸುವುದರ ಜೊತೆಗೆ ನಮ್ಮ ನಾಡಿನ ಇತಿಹಾಸವನ್ನು ಎಲ್ಲರೂ ಎತ್ತಿಹಿಡಿಯಬೇಕು ಎಂದರು.
ಕನ್ನಡ ಸ್ಪಷ್ಟವಾಗಿ ಬರೆಯಲು ಮತ್ತು ಓದಲು ಬಾರದವರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಹೊರ ತಂದಿರುವ ‘ಕನ್ನಡ ದೀವಿಗೆ’ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ರಿಜ್ವಾನ್ ಹರ್ಷದ್, ಎನ್.ಎ.ಹ್ಯಾರಿಸ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಜರಿದ್ದರು.
500 ಕರ್ನಾಟಕ ಪಬ್ಲಿಕ್ ಶಾಲೆ ಅಭಿವೃದ್ಧಿಗೆ ಯೋಜನೆ: ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‍ಆರ್ ನಿಧಿಯಡಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಗ್ರೀನ್‍ಫೀಲ್ಡ್ ಯೋಜನೆಯಡಿ 100 ಶಾಲೆ ಗುರುತಿಸಿ ಅಭಿವೃದ್ಧಿ ಸಂಬಂಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಆಗದಂತೆ 42000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಹಯೋಗದೊಂದಿಗೆ ಶಾಲೆಗಳಲ್ಲಿ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತಿದೆ. ಈ ಹಿಂದೆ ವಾರದ 5 ದಿನ ಹಾಲು ನೀಡಲಾಗುತ್ತಿತ್ತು. ಕಳೆದ ಸಾಲಿನಿಂದ ಸತ್ಯಸಾಯಿ ಟ್ರಸ್ಟ್ ಸಹಯೋಗದಲ್ಲಿ ಹಾಲಿನೊಂದಿಗೆ ವಾರಕ್ಕೆ 3 ದಿನ ರಾಗಿ ಮಾಲ್ಟ್ ಸಹ ನೀಡಲಾಗುತ್ತಿದೆ ಎಂದರು.