ಪ್ರತಿಜ್ಞಾ ಕ್ರಾಂತಿ ಹೆಸರಿನಲ್ಲಿ ಮೀಸಲಾತಿಗಾಗಿ ಹೋರಾಟ

| Published : Jan 23 2025, 12:45 AM IST

ಪ್ರತಿಜ್ಞಾ ಕ್ರಾಂತಿ ಹೆಸರಿನಲ್ಲಿ ಮೀಸಲಾತಿಗಾಗಿ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಜ್ಞಾ ಕ್ರಾಂತಿ ಹೆಸರಿನಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ಸಂಚಾರವನ್ನು ಈಗಾಗಲೇ ಜ.14 ರಿಂದ ಬಳ್ಳಾರಿಯಿಂದ ಆರಂಭಿಸಲಾಗಿದೆ

ಗದಗ: ಪಂಚಮಸಾಲಿಗಳಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಪೊಲೀಸರಿಂದ ಲಾಠಿ ಏಟು ತಿಂದು ಗಾಯಗೊಂಡವರ ಮನೆಗೆ ಭೇಟಿ ನೀಡಿ ಮೀಸಲಾತಿ ವೀರರು ಎಂದು ಬಿರುದು ಹಾಗೂ ಲಾಠಿ ಚಾರ್ಜ್ ಒಳಗಾದವರಿಗೆ ಪಂಚಮಸಾಲಿ ವೀರ ಎನ್ನುವ ಬಸವ ರಕ್ಷಣೆ ನೀಡಲು ತಿರ್ಮಾನಿಸಲಾಗಿದ್ದು, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಪ್ರತಿಜ್ಞಾ ಕ್ರಾಂತಿ ಹೆಸರಿನಲ್ಲಿ 8ನೇ ಹಂತದ ಹೋರಾಟ ಆರಂಭ ಮಾಡಿದ್ದೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬ ಪಂಚಮಸಾಲಿಗಳ ಮನೆಗೆ ತೆರಳಿ ರಾಜ್ಯ ಸರ್ಕಾರ ಮೀಸಲಾತಿ ನಿರಾಕರಣೆ ಮಾಡಿರುವುದನ್ನು ತಿಳಿಸುತ್ತೇವೆ. ಪ್ರತಿಜ್ಞಾ ಕ್ರಾಂತಿ ಹೆಸರಿನಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ಸಂಚಾರವನ್ನು ಈಗಾಗಲೇ ಜ.14 ರಿಂದ ಬಳ್ಳಾರಿಯಿಂದ ಆರಂಭಿಸಲಾಗಿದೆ. ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನ ಮಾಡಿದರೇ ಹೆದರುವವರು ನಾವಲ್ಲ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

ಕಳೆದ ನಾಲ್ಕು ವರ್ಷದಿಂದ ಪಂಚಮಸಾಲಿಗಳು ಶಾಂತಯುತ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಬೆಳಗಾವಿಯಲ್ಲಿ ಹೋರಾಟಗಾರರ ಮೇಲೆ ನಡೆದ ಹಲ್ಲೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನಕ್ಕೆ ತರುವ ಕೆಲಸ ಪಂಚಮಸಾಲಿ ಸಮಾಜದ ವಕೀಲರ ಸಂಘಟನೆ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ವಿರೋಧಿ ಅಂತ ಸಾಬೀತು ಮಾಡಿದೆ. 12 ಜನ ಪಂಚಮಸಾಲಿ ಸಮಾಜದ ಶಾಸಕರಿದ್ದರೂ ಅಧಿವೇಶನದಲ್ಲಿ ಕೇವಲ ಇಬ್ಬರೂ ಮಾತ್ರ ಚರ್ಚಿಸಿದ್ದಾರೆ ಎಂದು ಕೆಲ ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಪ್ರಿಯಾಂಕಾ ಗಾಂಧಿ ನಮ್ಮ ಕಿತ್ತೂರು ರಾಣಿ ಚೆನ್ನಮ್ಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಚೆನ್ನಮ್ಮಳ ಕಾಲಿನ ಧೂಳಿಗೂ ಯಾರು ಸಮಾನ ಇಲ್ಲ. ಪ್ರಿಯಾಂಕಾ ಗಾಂಧಿ ಅವರನ್ನು ಚೆನ್ನಮ್ಮಳಿಗೆ ಹೋಲಿಕೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಹಾಂತೇಶ ನೆಲೂಡಿ, ಹಿರಿಯರಾದ ಬಸವರಾಜ ದೇಸಾಯಿ, ಜಿಲ್ಲಾ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಉಪಾಧ್ಯಕ್ಷ ಬಸವರಾಜ ಗಡ್ಡೆಪ್ಪನವರ, ಈರಮ್ಮ ತಾಳಿಕೋಟಿ, ಬಸವರಾಜ ಮನಗುಂಡಿ, ಸಂತೋಷ ಅಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಲ್ಲೆಗೊಳಗಾದವರ ಮನೆಗೆ ಭೇಟಿ: ಮೀಸಲಾತಿ ಹೋರಾಟದ ಸಮಯದಲ್ಲಿ ಗಾಯಗೊಂಡಿದ್ದ ಜಿಲ್ಲೆಯ ಬೂದಪ್ಪ ಅಂಗಡಿ, ಈರಣ್ಣ ಕೊಟಗಿಯವರ, ವೀರೂಪಾಕ್ಷಪ್ಪ ಹೊಸಮನಿ, ಸುರೇಶ ಮಲ್ಲೇಶಪ್ಪ ಕೊಂಡಿಕೋಪ್ಪ, ಮಲ್ಲಿಕಾರ್ಜುನ ಕಿರೆಸೂರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಇತ್ತಿಚೆಗೆ ಅನ್ಯಕೋಮಿನವರಿಂದ ಹಲ್ಲೆಗೋಳಗಾಗಿದ್ದ ಸಮಾಜದ ಯುವಕ ಅನಿಲ ಮುಳ್ಳಾಳ ಮನೆಗೂ ಶ್ರೀಗಳು ಭೇಟಿ ಆರೋಗ್ಯ ವಿಚಾರಿಸಿದರು.