ಎನ್‌ಡಿಎ ಅಕ್ರಮವಾಗಿ ಗೆದ್ದರೆ ಹೋರಾಟ: ಸಂಘಟನೆ ಎಚ್ಚರಿಕೆ

| Published : Jun 03 2024, 01:16 AM IST / Updated: Jun 03 2024, 08:05 AM IST

bjp flag

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎದ್ದೇಳು ಕರ್ನಾಟಕ ಆಗ್ರಹಿಸಿದೆ.

 ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎದ್ದೇಳು ಕರ್ನಾಟಕ ಆಗ್ರಹಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎದ್ದೇಳು ಕರ್ನಾಟಕ ಗವರ್ನಿಂಗ್‌ ಕೌನ್ಸಿಲ್‌ ಸದಸ್ಯ ಕೆ.ಎಲ್. ಅಶೋಕ್, ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಕಾರ್ಮಿಕರ, ರೈತರ, ದಲಿತರ, ಮಹಿಳೆಯರ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ವಿದ್ಯುನ್ಮಾನ ಮತಯಂತ್ರ (ಇವಿಎಂ) ದುರುಪಯೋಗ ಹಾಗೂ ವಿರೋಧ ಪಕ್ಷದ ಪ್ರಭಾವಿ ನಾಯಕರ ಮೇಲೆ ಇಡಿ, ಐಟಿ ದಾಳಿ ಮಾಡಿಸುತ್ತಿದೆ.

ಈ ವಿಚಾರ ದೇಶದ ಪ್ರಜೆಗಳ ಅರಿವಿಗೆ ಬಂದಿದ್ದು, ಇಂತಹ ದುಷ್ಟ ಸರ್ಕಾರ ಕಿತ್ತೊಗೆಯಲು ಎಲ್ಲರೂ ಸಿದ್ಧರಾಗಿದ್ದಾರೆ. ಜೂನ್‌ 4ರ ಚುನಾವಣಾ ಫಲಿತಾಂಶದ ಮೂಲಕ ಉತ್ತರಿಸಲಿದ್ದಾರೆ ಎಂದರು.

ಜನಪರ ಚಿಂತಕಿ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಎದ್ದೇಳು ಕರ್ನಾಟಕ ರಾಜ್ಯಾದ್ಯಂತ ಸಮೀಕ್ಷೆ ನಡೆಸುವ ಮೂಲಕ ಈ ಬಾರಿ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿ ಗುರುತಿಸಿದೆ. ಚುನಾವಣಾ ಆಯೋಗ ಮತ ಎಣಿಕೆಯನ್ನು ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಡೆಸಬೇಕು. ಒಂದು ವೇಳೆ ಎನ್‌ಡಿಎ ಮೈತ್ರಿಕೂಟ ಬಹುಮತದಿಂದ ಗೆದ್ದರೆ ಅದು ಇವಿಎಂ ದುರುಪಯೋಗ ಹಾಗೂ ಚುನಾವಣಾ ಅಕ್ರಮದಿಂದ ಮಾತ್ರ ಸಾಧ್ಯವಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ನಾಯಕ ಎನ್‌. ವೆಂಕಟೇಶ್, ಹೋರಾಟಗಾರ್ತಿ ತಾರಾ ರಾವ್, ಜನಪರ ಚಿಂತಕ ಎಲ್‌.ಎನ್‌. ಮುಕುಂದರಾಜ್‌ ಉಪಸ್ಥಿತರಿದ್ದರು.