ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲು ಜ. 30ರಂದು ಹೋರಾಟ

| Published : Jan 21 2025, 12:31 AM IST

ಸಾರಾಂಶ

ಧಾರವಾಡ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಕೂಪಗಳಾಗಿವೆ. ಅವಶ್ಯಕ ತಜ್ಞ ವೈದ್ಯರ, ದಾದಿಯರ ಮತ್ತಿತರ ಸಿಬ್ಬಂದಿಗಳ ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಗಳಂತಹ ಸಮಸ್ಯೆಗಳು ನಿತ್ಯ ಬಾಧಿಸುತ್ತಿವೆ.

ಧಾರವಾಡ:

ಧಾರವಾಡದ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕೆಎಂಸಿಆರ್‌ಐ ಸೇರಿದಂತೆ ಎಲ್ಲ ಹಂತದ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಲು ಅಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್, ಎಸ್‌ಯುಸಿಐ (ಸಿ) ಪಕ್ಷದಿಂದ ಜ. 30ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸೋಮವಾರ ಜಿಲ್ಲಾಸ್ಪತ್ರೆ ಎದುರು ಪ್ರಚಾರಾಂದೋಲನ, ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.

ಈ ವೇಳೆ ಎಸ್‌ಯುಸಿಐ(ಕ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಮಾತನಾಡಿ, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಕೂಪಗಳಾಗಿವೆ. ಅವಶ್ಯಕ ತಜ್ಞ ವೈದ್ಯರ, ದಾದಿಯರ ಮತ್ತಿತರ ಸಿಬ್ಬಂದಿಗಳ ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಗಳಂತಹ ಸಮಸ್ಯೆಗಳು ನಿತ್ಯ ಬಾಧಿಸುತ್ತಿವೆ. ಸರ್ಕಾರಗಳಿಂದ ಬರಬೇಕಾದ ಆರ್ಥಿಕ ಅನುದಾನ ಬಂದಿಲ್ಲವೆಂದು ಬಿಪಿಎಲ್ ಕಾರ್ಡದಾರರಿಗೂ ಪ್ರತಿಯೊಂದಕ್ಕೂ ಶುಲ್ಕ ಹೇರಲಾಗಿದೆ. ಇನ್ನೊಂದೆಡೆ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಹೊಸ ಚೀಟಿ ಮಾಡಿಸಲು, ತಪಾಸಣೆ, ಔಷಧಿಗಾಗಿ, ಹಣ ತುಂಬಲು ಪರದಾಡುವಂತಾಗಿಗೆ ಎಂದರು.

ಸಣ್ಣ-ಪುಟ್ಟ ರೋಗಗಳಿಗೂ ಹಲವಾರು ಬಾರಿ ಅಲೆದಾಡುವ ಪರಿಸ್ಥಿತಿ ಇದೆ. ಉತ್ತಮ ಗುಣಮಟ್ಟದ ಔಷಧಿಗಳೂ ಕೂಡ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಬದಲಾಗಿ ಹೊರಗೆ ಬರೆದುಕೊಡುವ ಪರಿಪಾಟ ಹೆಚ್ಚುತ್ತಿದೆ. ಅವುಗಳನ್ನು ಕೊಳ್ಳುವ ಶಕ್ತಿ ನಮ್ಮ ಬಡಜನರಿಗಿದೆಯೇ? ಆದ್ದರಿಂದ ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಬೇಕು. ಬಡವರ ಹಾಗೂ ಜನಸಾಮಾನ್ಯರಿಗೆ ಆರೋಗ್ಯ ಸುರಕ್ಷತೆಗಾಗಿ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಲು, ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯನ್ನು ಉತ್ತಮಪಡಿಸಲು ಹಾಗೂ ಬಲಪಡಿಸಲು ಆಗ್ರಹಿಸಿ ಜ. 30ರಂದು ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ವೇಳೆ ಮಧುಲತಾ ಗೌಡರ, ಭವಾನಿಶಂಕರ ಗೌಡ, ಹನುಮೇಶ ಹುಡೇದ, ಗಂಗೂಬಾಯಿ ಕೊಕರೆ, ರಣಜಿತ್ ದೂಪದ್, ಶಶಿಕಲಾ ಮೇಟಿ, ಪ್ರೀತಿ ಸಿಂಗಾಡಿ, ರುದ್ರಕಾಂತ್, ಅನುಸೂಯ ಇದ್ದರು.