ಚತುಷ್ಪಥಗೊಂಡ ರಾ ಹೆ ೭೫ ರ ನೆಕ್ಕಿಲಾಡಿಯಲ್ಲಿ ಜನರ ಸುರಕ್ಷತೆಯ ಕಾರಣಕ್ಕೆ ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸುವ ವಾಹನಗಳು ನೇರವಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವುದನ್ನು ಬ್ಯಾರಿಕೇಡ್ ಅಳವಡಿಸಿ ತಡೆಯಲಾಗಿದೆ. ಅನತಿ ದೂರದಲ್ಲಿರುವ ಅಂಡರ್ ಪಾಸ್ ಮೂಲಕವೇ ಸಂಚರಿಸಬೇಕಾಗಿದ್ದು, ಸಮರ್ಪಕ ಸೂಚನಾ ಫಲಕ ಅಳವಡಿಸದ ಕಾರಣಕ್ಕೆ ಪುತ್ತೂರು – ಉಪ್ಪಿನಂಗಡಿ ನಡುವಣದ ವಾಹನ ಸವಾರರು ಎತ್ತ ಕಡೆ ಸಂಚರಿಸುವುದೆಂದು ತಿಳಿಯದೆ ಹೆದ್ದಾರಿಯಲ್ಲಿಯೇ ನಿಯಮ ಉಲ್ಲಂಘಿಸಿ ಸಂಚರಿಸುವ ಗೊಂದಲಮಯ ಸ್ಥಿತಿ ನಿರ್ಮಾಣವಾಗಿದೆ.

ಉಪ್ಪಿನಂಗಡಿ ; ಚತುಷ್ಪಥಗೊಂಡ ರಾ ಹೆ ೭೫ ರ ನೆಕ್ಕಿಲಾಡಿಯಲ್ಲಿ ಜನರ ಸುರಕ್ಷತೆಯ ಕಾರಣಕ್ಕೆ ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸುವ ವಾಹನಗಳು ನೇರವಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವುದನ್ನು ಬ್ಯಾರಿಕೇಡ್ ಅಳವಡಿಸಿ ತಡೆಯಲಾಗಿದೆ. ಅನತಿ ದೂರದಲ್ಲಿರುವ ಅಂಡರ್ ಪಾಸ್ ಮೂಲಕವೇ ಸಂಚರಿಸಬೇಕಾಗಿದ್ದು, ಸಮರ್ಪಕ ಸೂಚನಾ ಫಲಕ ಅಳವಡಿಸದ ಕಾರಣಕ್ಕೆ ಪುತ್ತೂರು – ಉಪ್ಪಿನಂಗಡಿ ನಡುವಣದ ವಾಹನ ಸವಾರರು ಎತ್ತ ಕಡೆ ಸಂಚರಿಸುವುದೆಂದು ತಿಳಿಯದೆ ಹೆದ್ದಾರಿಯಲ್ಲಿಯೇ ನಿಯಮ ಉಲ್ಲಂಘಿಸಿ ಸಂಚರಿಸುವ ಗೊಂದಲಮಯ ಸ್ಥಿತಿ ನಿರ್ಮಾಣವಾಗಿದೆ.

ಜನರ ಸುರಕ್ಷತೆಗಾಗಿ ಅಳವಡಿಸಿದ ಬ್ಯಾರಿಕೇಡ್ ಜನರನ್ನು ಅಪಘಾತಕ್ಕೆ ಸಿಲುಕಿಸುವ ಸ್ಥಿತಿಗೆ ತಂದೊಡ್ಡಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.

೩೪ ನೆಕ್ಕಿಲಾಡಿಯಲ್ಲಿ ಚತುಷ್ಫಥ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಈ ಹೆದ್ದಾರಿಗೆ ತಾಗಿಕೊಂಡೇ ನೆಕ್ಕಿಲಾಡಿ - ಬೊಳುವಾರು ರಾಜ್ಯ ಹೆದ್ದಾರಿ ಕವಲೊಡೆದಿದೆ. ಈ ಮೊದಲು ಇಲ್ಲಿ ಪುತ್ತೂರು, ಬೊಳುವಾರು ಕಡೆಯಿಂದ ಬರುವ ವಾಹನಗಳು ೩೪ ನೆಕ್ಕಿಲಾಡಿಯಲ್ಲಿ ನೇರವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಿ ಉಪ್ಪಿನಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಏಕಮುಖ ಪಥವನ್ನು ದಾಟಿ ಬಿ.ಸಿ.ರೋಡ್ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಸಾಗುವ ಏಕಮುಖ ಪಥಕ್ಕೆ ಬಂದು ಉಪ್ಪಿನಂಗಡಿಯ ಕಡೆಗೆ ಸಾಗಬೇಕಿತ್ತು.ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಮಿತ ವೇಗದಲ್ಲಿ ವಾಹನಗಳು ಸಾಗುತ್ತಿದ್ದುದ್ದರಿಂದ ಪುತ್ತೂರು ಕಡೆಯಿಂದ ರಾಜ್ಯ ಹೆದ್ದಾರಿಯ ಮೂಲಕ ಬರುವ ವಾಹನಗಳು ನೇರವಾಗಿ ಹೆದ್ದಾರಿ ಪ್ರವೇಶಿಸುತ್ತಿರುವುದರಿಂದ ಬಹಳಷ್ಟು ಅಪಘಾತಗಳು ಸಂಭವಿಸಿತ್ತು. ಈಗ ಇಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಪುತ್ತೂರು ಕಡೆಯಿಂದ ಬರುವ ವಾಹನಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸುವದನ್ನು ನಿರ್ಬಂಧಿಸಲಾಗಿದೆ.

ಪುತ್ತೂರು ಕಡೆಯಿಂದ ಬರುವ ವಾಹನಗಳು ಉಪ್ಪಿನಂಗಡಿ ಕಡೆಗೆ ಸಾಗಬೇಕಾದರೆ ೩೪ ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸುಮಾರು ೨೦೦ ಮೀ.ನಷ್ಟು ಚಲಿಸಿ ಅಲ್ಲಿಂದ ಬಲಕ್ಕೆ ತಿರುವು ಪಡೆದು ಅಂಡರ್‌ಪಾಸ್ ಮೂಲಕ ಮತ್ತೊಂದು ಬದಿಗಿರುವ ಸರ್ವೀಸ್ ರಸ್ತೆಯಲ್ಲಿ ಬಲಕ್ಕೆ ತಿರುವು ಪಡೆದು ಸ್ವಲ್ಪ ದೂರ ಚಲಿಸಿ ಮತ್ತೆ ಬಿ.ಸಿ.ರೋಡ್ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಪಥಕ್ಕೆ ಹೋಗಬೇಕಿದೆ.ಸಾರ್ವಜನಿಕರ ಹಿತರಕ್ಷಣೆಗಾಗಿ ಅಳವಡಿಸಿರುವ ನಿಯಮ ಸರಿಯಿದ್ದರೂ ಇಲ್ಲಿ ಈ ಬದಲಿ ಮಾರ್ಗದ ಬಗ್ಗೆ ಗಮನ ಸೆಳೆಯುವಂತಹ ಯಾವುದೇ ಸೂಚನಾ ಫಲಕ ಇಲ್ಲಿ ಅಳವಡಿಸದೇ ಇದ್ದ ಕಾರಣ ವಾಹನ ಸವಾರರು ಇಲ್ಲಿ ಗೊಂದಲಕ್ಕೀಡಾಗುತ್ತಿದ್ದಾರೆ. ಇದರಿಂದ ಪುತ್ತೂರು ಕಡೆಯಿಂದ ಬರುವ ಕೆಲವು ವಾಹನ ಸವಾರರು ಈ ಮಾರ್ಗದ ಅರಿವಿಲ್ಲದೆ ನೇರವಾಗಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಏಕಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಗೊಂದಲಕ್ಕೀಡಾಗುತ್ತಿದ್ದಾರೆ. ನೆಕ್ಕಿಲಾಡಿಯಿಂದ ಸರ್ವೀಸ್ ರಸ್ತೆಯ ಅಂಡರ್ ಪಾಸ್ ಬಳಿಗೆ ನೇರ ರಸ್ತೆ : ಶಾಸಕ ರೈ

ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ , ೩೪ ನೇ ನೆಕ್ಕಿಲಾಡಿಯಿಂದ ಹೆದ್ದಾರಿ ಸಂಪರ್ಕದ ಗೊಂದಲವನ್ನು ತಪ್ಪಿಸುವ ಸಲುವಾಗಿ ಪುತ್ತೂರು - ನೆಕ್ಕಿಲಾಡಿಯ ರಸ್ತೆಯು ನೆಕ್ಕಿಲಾಡಿಯ ಭಾಗದಲ್ಲಿ ನೇರವಾಗಿ ಹೆದ್ದಾರಿ ಸರ್ವೀಸ್ ರಸ್ತೆಯ ಅಂಡರ್ ಪಾಸ್ ಬಳಿ ಸಂಪರ್ಕ ಸಾಧಿಸುವಂತೆ ಹೊಸದಾದ ರಸ್ತೆ ನಿರ್ಮಾಣಕ್ಕೆ ಗಮನ ಹರಿಸಲಾಗಿದೆ. ಈ ಸಂಬಂಧ ಈ ಭಾಗದ ಮೂವರು ಭೂಮಿಯನ್ನು ಒದಗಿಸಬೇಕಾಗಿದ್ದು , ಅವರ ಭೂಮಿಯ ಸ್ವಾಧೀನ ಪ್ರಕ್ರಿಯೆಯು ಮಾತುಕತೆಯ ಹಂತದಲ್ಲಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೇರ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿ ಈಗಿನ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ಇಲ್ಲಿನ ಈ ಸಮಸ್ಯೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ನವೀನ್ ಅವರ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ಮಾಧ್ಯಮಕ್ಕೆ ನೀಡಿದ್ದಾರೆ.