ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು, ಕನ್ನಡ ಓದುವ ಮಕ್ಕಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಕರ್ನಾಟಕದಲ್ಲೇ ಕನ್ನಡ ಭಾಷೆ ಉಳಿಸಲು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಮಹಾ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಕೃಷ್ಣಾನಗರ 3ನೇ ಹಂತದ ಶ್ರೀಬಾಲಶನೇಶ್ವರ ಸ್ವಾಮಿ ಭಕ್ತ ಮಂಡಳಿ ಇವರು ಆಯೋಜಿಸಿದ್ದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಕನ್ನಡ ರಾಜ್ಯೋತ್ಸವದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಹೆತ್ತ ತಂದೆ-ತಾಯಿಗೆ ನೀಡುವಷ್ಟು ಗೌರವವನ್ನು ಕನ್ನಡ ಭಾಷೆಗೂ ನೀಡಬೇಕು. ಭಾಷೆ ಉಳಿವಿಗಾಗಿ ಹೋರಾಟ ಮಾಡುವ ಸಂದರ್ಭ ಎದುರಾಗಿರುವುದು ದುರಂತ ಸಂಗತಿ ಎಂದರು.ಸಂವಿಧಾನದಲ್ಲಿ ಎಲ್ಲಾ ಭಾಷೆಗಳನ್ನು ಕಲಿಯಲು ಅವಕಾಶ ನೀಡಲಾಗಿದೆ. ಕನ್ನಡಿಗರು ಬೇರೆ ಭಾಷೆ ಕಲಿಯುವ ಜತೆಗೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ನಾವು ಎಷ್ಟೇ ಎತ್ತರದ ಸ್ಥಾನದಲ್ಲಿ ಇದ್ದರೂ ಸಹ ಕನ್ನಡ ಭಾಷೆ ಮೇಲಿನ ಅಭಿಮಾನ ಕಡಿಮೆಯಾಗಬಾರದು. ಕನ್ನಡ ಮಾತನಾಡುವುದು, ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವ ಅವ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳು ಮನೆಯನ್ನೇ ದೇವಾಲಯವೆಂದು ಭಾವಿಸಿ ಮನೆಯಲ್ಲಿಯೇ ದೇವರಿಗೆ ದೀಪ ಹಚ್ಚಿ ಪೂಜಿಸುವ ಸಂಪ್ರದಾಯವನ್ನು ರೂಡಿಸಿಕೊಂಡು ಬಂದಿದ್ದಾರೆ. ನಾವು ಮನೆಯಲ್ಲಿ ದೀಪಕ್ಕೆ ಎಣ್ಣೆಬಿಟ್ಟು ದೀಪ ಹಚ್ಚುವ ಜತೆಗೆ ನಾವು ನಮ್ಮ ಮನಸ್ಸಿನಲ್ಲಿ ಜ್ಞಾನ ಹಾಗೂ ಅರಿವು ಜ್ಯೋತಿಯನ್ನು ಹೆಚ್ಚಿಕೊಳ್ಳಬೇಕು ಎಂದರು.ರವಿತೇಜ ಅವರು ಶನೇಶ್ವರ ದೇವರ ಪೂಜೆ ಮಾಡುವ ಜತೆಗೆ ಸರಳ ಸಾಮೂಹಿಕ ವಿವಾಹಗಳು, ಪರಿಸರ ಸಂರಕ್ಷಣೆ, ಅನಾಥ ಮಕ್ಕಳಿಗೆ ಆಸರೆಯಾಗುವಂತಹ ಅನೇಕ ಸಾಮಾಜಿಕ ಕಾರ್‍ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜಮುಖಿ ಕೆಲಸ ಮಾಡುವಂತಹವರಿಗೆ ಸಮಾಜದಿಂದಲೂ ಉತ್ತಮ ಸಹಕಾರ ದೊರೆಯಬೇಕು ಎಂದರು.
ಇಂದು ಶಿಕ್ಷಣಕ್ಕಿಂತ ಮದುವೆಗಳಿಗೆ ದುಂದುವೆಚ್ಚ ಮಾಡುತ್ತಿದ್ದಾರೆ. ಇಂತಹ ದಿನಗಳಲ್ಲಿ ರವಿತೇಜ ಅವರು 480 ಜೋಡಿ ಮದುವೆ ಮಾಡುವ ಮೂಲಕ ಆ ಕುಟುಂಬಗಳಿಗೆ ಆಸರೆಯಾಗುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಿದ್ದಗಂಗಾ ಮಠವು ಜಾತಿ-ಮತ, ಧರ್ಮ ಬೇದವಿಲ್ಲದೆ ಅನೇಕ ಸಾಮಾಜಿಕ ಕೆಲಸ ಮಾಡಿದೆ. ನಾಡಿನ ಅನೇಕ ಬಡ ಮಕ್ಕಳಿಗೆ ಅನ್ನದಾಸೋಹದ ಜತೆಗೆ ಅಕ್ಷರದ ದಾಸೋಹ ನೀಡುತ್ತಿದೆ ಎಂದರು.
ಮಠದಲ್ಲಿ ಶಿಕ್ಷಣ ಕಲಿತಿರುವಂತಹ ಅನೇಕ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರದಲ್ಲಿ ದೊಡ್ಡದೊಡ್ಡ ಉನ್ನತವಾದ ಹುದ್ದೆಗಳನ್ನು ಅಲಂಕರಿಸಿ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿರುವುದನ್ನು ನಾನು ಶಾಸಕ, ಸಚಿವ, ಸಂಸದನಾಗಿ ನೋಡಿದ್ದೇನೆ. ಇಂತಹ ಪುಣ್ಯದ ಕೆಲಸವನ್ನು ನಮ್ಮ ನಾಡಿ ಮಠಗಳು ಮಾಡುತ್ತಿರುವುದು ನಮ್ಮೆಲ್ಲ ಹೆಮ್ಮೆಯಾಗಿದೆ ಎಂದರು.ಇದೇ ವೇಳೆ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀಸಿದ್ದಲಿಂಗ ಮಹಾ ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸಿದರು. ಕಾರ್ತಿಕ ಮಾಸದ ಅಂಗವಾಗಿ ಶ್ರೀಬಾಲಶನೇಶ್ವರಸ್ವಾಮಿ ಭಕ್ತ ಮಂಡಳಿ ವತಿಯಿಂದ ಲಕ್ಷ ದೀಪೋತ್ಸವ ಆಚರಣೆ ಮಾಡಲಾಯಿತು. ಕಾವ್ಯ ಸಂಗಮ ಕವಿಗೋಷ್ಠಿ, ಚಲನಚಿತ್ರ ನಟ-ನಟಿಯರಿಂದ ರಸಸಂಜೆ ಕಾರ್‍ಯಕ್ರಮ ನಡೆದವು.
ಸಮಾರಂಭದಲ್ಲಿ ಬೇಬಿಬೆಟ್ಟ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಮಹಾ ಸ್ವಾಮೀಜಿ, ಶ್ರೀಬಾಲಶನೇಶ್ವರ ಭಕ್ತಿ ಮಂಡಳಿ ಕಾರ್‍ಯದರ್ಶಿ ಡಾ.ರವಿತೇಜ, ಪುರಸಭೆ ಸದಸ್ಯ ಕೃಷ್ಣ ಅಣ್ಣಯ್ಯ, ತಹಸೀಲ್ದಾರ್ ಸಂತೋಷ್, ರೈತ ಸಂಘ ನಾಯಕಿ ಸುನೀತ ಪುಟ್ಟಣ್ಣಯ್ಯ, ಕಾಯಕ ಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ. ಮಂಜುನಾಥ್, ಲಿಂಗಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ರೈತ ಮುಖಂಡ ವಿಜಯ್‌ಕುಮಾರ್, ಕನಕ ಯುವ ಬಳಗದ ಅಧ್ಯಕ್ಷ ಬೆಟ್ಟಹಳ್ಳಿ ಸ್ವಾಮೀಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.)
;Resize=(128,128))
;Resize=(128,128))
;Resize=(128,128))
;Resize=(128,128))