ಕೊಪ್ಪ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

| Published : Jun 30 2025, 12:34 AM IST

ಸಾರಾಂಶ

ಕೊಪ್ಪ, ಪಟ್ಟಣದ ಹೊರವಲಯದ ಕೌರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೯ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶನಿವಾರ ರಾತ್ರಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ತನಿಖೆಗೆ ಶಮಿತಾ ಪೋಷಕರು, ಗ್ರಾಮಸ್ಥರ ಆಗ್ರಹ

ಕನ್ನಡಪ್ರಭ ವಾರ್ತೆ, ಕೊಪ್ಪ

ಪಟ್ಟಣದ ಹೊರವಲಯದ ಕೌರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೯ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶನಿವಾರ ರಾತ್ರಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.ತಾಲೂಕಿನ ಹಿರೇಕೊಡಿಗೆ ಗ್ರಾಪಂ ವ್ಯಾಪ್ತಿಯ ಬೊಮ್ಮಲಾಪುರ ಸಮೀಪದ ಹೊಕ್ಕಳಿಕೆಯಲ್ಲಿ ವಾಸವಿರುವ ಸಂದೇಶ್ ಶೆಟ್ಟಿ ಮತ್ತು ಸಂಗೀತ ಶೆಟ್ಟಿ ದಂಪತಿ ಪುತ್ರಿ ಶಮಿತಾ ಎಸ್. ಶೆಟ್ಟಿ (೧೪) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.ಶಮಿತಾ ಶನಿವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಬಾತ್ ರೂಮಿಗೆ ತೆರಳಿ ತನ್ನ ಚೂಡಿದಾರ್ ವೇಲ್‌ನಲ್ಲಿ ನೇಣು ಬಿಗಿದು ಕೊಂಡಿದ್ದಾಳೆ. ಬೆಳಗಿನ ಜಾವ ೩ ಗಂಟೆ ವೇಳೆಯಲ್ಲಿ ಬೇರೆ ವಿದ್ಯಾರ್ಥಿನಿಯರು ಬಾತ್‌ರೂಮಿಗೆ ಹೋದ ವೇಳೆ ಶಮಿತಾ ನೇಣು ಬಿಗಿದುಕೊಂಡಿರುವ ವಿಚಾರ ಹಾಸ್ಟೆಲ್ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಶಿಕ್ಷಕರು ಮತ್ತು ಸಿಬ್ಬಂದಿ ಬಂದು ನೋಡುವ ಸಮಯದಲ್ಲಿ ಹುಡುಗಿ ಪ್ರಾಣ ಹೋಗಿತ್ತು. ಶಮಿತ ೬ನೇ ತರಗತಿಯಿಂದಲೂ ಇದೇ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ 2 ವರ್ಷಗಳ ಹಿಂದೆ ನಾರ್ವೆ ಮೂಲದ ೯ ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಇದೆ ಬಾತ್‌ರೂಮಿನಲ್ಲಿ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಳು.ಶಮಿತಾ ಸಾವಿನಲ್ಲಿಯೂ ಇದೇ ರೀತಿ ಸಾಮ್ಯತೆ ಕಂಡುಬಂದಿದ್ದು ಶೌಚಾಲಯವನ್ನು ಕೂಡಲೇ ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದು ಶಮಿತಾ ಸಾವಿನ ಬಗ್ಗೆ ಮತ್ತು ಮೊರಾರ್ಜಿ ವಸತಿ ಶಾಲೆ ವ್ಯವಸ್ಥೆ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕೆಂದು ಶಮಿತಾ ಪೋಷಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಅಪರ ಜಿಲ್ಲಾಧಿಕಾರಿ ನಾರಯಣರಡ್ಡಿ ಕನಕರಡ್ಡಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಲತಿ, ಕೊಪ್ಪ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ಕೊಪ್ಪ ಪೋಲಿಸ್ ಉಪವಿಭಾಗದ ಉಪ ಆಧಿಕ್ಷಕ ಬಾಲಾಜಿ ಸಿಂಗ್ ಸ್ಥಳದಲ್ಲಿದ್ದರು. ಕೊಪ್ಪ ಪೋಲಿಸ್ ಠಾಣೆ ಮಹಿಳಾ ಪಿ.ಎಸ್.ಐ ಶಿವರುದ್ರಮ್ಮ, ಠಾಣಾ ಗುಪ್ತಚರದಳದ ಮತಾಯಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.