ಸಾರಾಂಶ
ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ಹಾಗೂ ವಿವಿಧ ಸಂಘಗಳ, ತರಗತಿ ನಾಯಕರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಉತ್ತಮ ನಾಯಕನಿಗೆ ಗೌರವಗಳು ಸಿಗುತ್ತದೆ ಎಂದು ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಹೇಳಿದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಜಿ. ಎಮ್. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ಹಾಗೂ ವಿವಿಧ ಸಂಘಗಳ, ತರಗತಿ ನಾಯಕರ ಪದಗ್ರಹಣ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿಯ ಸೈಬರ್, ಆರ್ಥಿಕ ಮತ್ತು ಮಾದಕ ಅಪರಾಧ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಅವರು ಆಗಮಿಸಿದ್ದರು. ಅವರು ಮಾತನಾಡಿ ಜಿ. ಎಮ್. ಸಂಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ಅನುಭವವನ್ನು ನೀಡಿದೆ. ಮಕ್ಕಳು ಕಲಿಕೆಯ ಜೊತೆಗೆ ಬದುಕುವ ಕಲೆಯನ್ನು ತಿಳಿಯಬೇಕು. ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳುವುದು ನಿಜವಾದ ನಾಯಕತ್ವ ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಎಲ್ಲ ಚುನಾಯಿತ ನಾಯಕರಿಗೆ ಅಭಿನಂದನೆ ಸಲ್ಲಿಸಿ ಈಗ ನಿಮ್ಮೆಲ್ಲರ ಜವಾಬ್ದಾರಿ ಇಮ್ಮಡಿಯಾಗಿದ್ದು ಇತರರಿಗೆ ಮಾರ್ಗದರ್ಶಕರಾಗಿ ಕಾರ್ಯವನ್ನು ನಿರ್ವಹಿಸಬೇಕು. ಭವಿಷ್ಯದಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಪೋಷಕರ ನಿರೀಕ್ಷೆಯನ್ನು, ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ, ಉತ್ತಮ ನಾಯಕನಿಗೆ ಸತ್ಕಾರ, ಗೌರವಗಳು ಹುಡುಕಿಕೊಂಡು ಬರುತ್ತದೆ. ಎಲ್ಲರೂ ಸಮಾನತೆ ಮತ್ತು ಸಾಮಾಜಿಕ ಸೇವಾ ಮನೋಭಾವ ಹೊಂದಿರಬೇಕು ಎಂದರು.
ವಿದ್ಯಾರ್ಥಿಗಳ ಮತಗಳಿಂದ ಆಯ್ಕೆಗೊಂಡ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಿಗೆ ಶಾಲಾ ಸಂಘಗಳ ಹಾಗೂ ಒಂದರಿಂದ ಹತ್ತನೇ ತರಗತಿಯ ನಾಯಕರಿಗೆ ಬ್ಯಾಡ್ಜನ್ನು ನೀಡಿ ಅವರ ಜವಾಬ್ದಾರಿಗಳನ್ನು ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಜಿ ಎಮ್ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ, ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶ್ರೀಮಾ ಪ್ರಣವ್ ಶೆಟ್ಟಿ, ಪೋಲೀಸ್ ಸಿಬ್ಬಂದಿ ಸೌಮ್ಯ, ಪೋಷಕರು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.