ಡ್ರಗ್ಸ್ ಮುಕ್ತ ಕರ್ನಾಟಕ ಅಂಗವಾಗಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ `ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನ' ನಡೆಯಿತು.
ಹಾವೇರಿ: ಭಾರತವನ್ನು ೨೦೪೭ಕ್ಕೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾದರೆ ಡ್ರಗ್ಸ್ ಹಾವಳಿಯಿಂದ ಮುಕ್ತವಾಗಬೇಕಿದೆ. ಸರ್ಕಾರ `ಆಪರೇಷನ್ ರೈಸ್ ಮತ್ತು ಬೇಡ ಬ್ರೋ'' ಎನ್ನುವ ಅಭಿಯಾನದ ಮೂಲಕ ಯುವಕರನ್ನು ಡ್ರಗ್ಸ್‌ನಿಂದ ಮುಕ್ತಗೊಳಿಸಲು ಮುಂದಾಗಿದ್ದು, ವಿದ್ಯಾರ್ಥಿ ಸಮುದಾಯ ಡ್ರಗ್ಸ್ ವ್ಯಸನಕ್ಕೆ ಒಳಗಾಗಿ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಡ್ರಗ್ಸ್ ಮುಕ್ತ ಕರ್ನಾಟಕ ಅಂಗವಾಗಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ `ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನ''ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಳ್ಳೆಯ ಕನಸು ಇಟ್ಟುಕೊಂಡು ಕಾಲೇಜಿಗೆ ಬಂದಿದ್ದೀರಿ. ಚೆನ್ನಾಗಿ ಓದಿ, ತಪ್ಪು ನಿರ್ಧಾರ ಕೈಗೊಂಡರೆ ಜೀವನ ಹಾಳಾಗುತ್ತದೆ. ಡ್ರಗ್ಸ್ ಸೇವನೆ ಮಾಡುವುದಿಲ್ಲ ಎನ್ನುವಂತಹ ಮೌಲ್ಯಗಳು ಮಾತಿಗೆ ಸೀಮಿತ ಆಗಬಾರದು. ಅವುಗಳು ಕಾರ್ಯರೂಪಕ್ಕೆ ಬಂದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರು ಎಷ್ಟೇ ಒತ್ತಡ ಹಾಕಿದರೂ ಡ್ರಗ್ಸ್ ಸಹವಾಸ ಮಾಡಬಾರದು. ಸಮಾಜದಲ್ಲಿ ಒಬ್ಬ ಯುವಕ ಒಮ್ಮೆ ಡ್ರಗ್ಸ್ ತೆಗೆದುಕೊಳ್ಳಲು ಶುರು ಮಾಡಿದರೆ, ಆತನ ವರ್ತನೆಗಳೇ ಬದಲಾಗಿರುತ್ತವೆ. ಆ ವ್ಯಕ್ತಿ ಸಮಾಜಕ್ಕೆ ಮಾರಕವಾಗಿರುತ್ತಾನೆ. ವಿದ್ಯಾರ್ಥಿಗಳು ಇಂತಹ ದುಶ್ಚಟಕ್ಕೆ ಅವಕಾಶ ಕೊಡಬಾರದು, ನಿಮ್ಮ ಸುತ್ತಮುತ್ತ ಅಂತಹ ಘಟನೆಗಳು ನಡೆದರೂ ಸಹಿತ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ರಾಜ್ಯ ಸರ್ಕಾರ ೨೦೨೮ರೊಳಗೆ ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡಲು ಮುಂದಾಗಿದೆ. ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರೈಸ್ ಮತ್ತು ಬೇಡ ಬ್ರೋ ಹೆಸರಿನಲ್ಲಿ ಅಭಿಯಾನ ಪ್ರಾರಂಭಿಸಿದೆ. ಆಪರೇಷನ್ ರೈಸ್ ಎಂಬುದು ತಿರಸ್ಕರಿಸಿ, ತಿಳಿಸಿ, ಬೆಂಬಲಿಸಿ ಹಾಗೂ ಸಬಲೀಕರಿಸಿ ಎನ್ನುವ ಧ್ಯೇಯ ಹೊಂದಿದೆ. ಮುಂದಿನ ೨೦ ದಿನಗಳ ಕಾಲ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಕಾಲೇಜು ಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತದೆ ಎಂದರು.
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಕರ್ನಾಟಕ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಲಾಯಿತು. ಈ ವೇಳೆ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿಗಳಾದ ಗಿರಿಮಲ್ಲ ತಳಕಲ್, ಲೋಕೇಶ, ನಿಸ್ಸೀಮಪ್ಪ ಹನಕನಹಳ್ಳಿ ಹಾಜರಿದ್ದರು.ಮಾದಕ ವಸ್ತು ನಾಶ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಡ್ರಗ್ಸ್ ಸಂಬಂಧಿಸಿದ ೭೯ ಕೇಸ್ ದಾಖಲಿಸಿ, ₹೨೭.೨೬ ಲಕ್ಷ ಮೌಲ್ಯದ ೭೩ ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ನಾಶಪಡಿಸಲಾಗಿದೆ. ಮಾದಕದ್ರವ್ಯ ಸೇವನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಸನ್ಮಿತ್ರ ಉಪಕ್ರಮದ ಅಡಿಯಲ್ಲಿ ಅವರ ಚಟುವಟಿಕೆ ಮೇಲ್ವಿಚಾರಣೆ, ಸಮಾಲೋಚನೆ, ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಗಳನ್ನು ಕಲ್ಪಿಸಿ ಆರೋಗ್ಯಕರ ಸಮಾಜ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.
ಪಿಯುಸಿ, ಡಿಗ್ರಿ ಹಂತದಲ್ಲಿ ಹೊಸದರ ರುಚಿ ನೋಡುವುದು ಸಾಮಾನ್ಯ. ದುಶ್ಚಟಗಳಿಗೆ ದಾಸರಾದರೆ ಶಿಕ್ಷಣ, ಕುಟುಂಬ, ವೈಯಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಆರಂಭದಲ್ಲೇ ಡ್ರಗ್ಸ್ ತಿರಸ್ಕರಿಸಬೇಕು. ಒಂದು ವೇಳೆ ರುಚಿ ನೋಡಿ ಅದಕ್ಕೆ ದಾಸರಾದರೆ ಬಿಡೋದು ಕಷ್ಟ. ಹೀಗಾಗಿ ಯಾರೂ ಕೂಡ ಡ್ರಗ್ಸ್ ಸಹವಾಸ ಮಾಡಬಾರದು ಎಂದು ಜಿಪಂ ಸಿಇಒ ದಲ್ಜೀತ್‌ಕುಮಾರ ಹೇಳಿದರು.