ಸಾರಾಂಶ
ಕನ್ನಡಪ್ರಭ ವಾರ್ತೆ ಸುಳ್ಯ
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಡನೆ ಭಿನ್ನ ಕೋಮಿನ ಯುವಕ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ಆಕೆಯ ಸಹಪಾಠಿ ವಿದ್ಯಾರ್ಥಿಗಳು ಯುವಕನಿಗೆ ಹಲ್ಲೆ ನಡೆಸಿದೆ ಘಟನೆ ಸೋಮವಾರ ನಡೆದಿದೆ. ನೈತಿಕ ಪೊಲೀಸ್ ಗಿರಿ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸುಳ್ಯಕ್ಕೆ ಭೇಟಿ ನೀಡಿದ್ದಾರೆ.ಸೋಮವಾರ ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜ್ ವಿದ್ಯಾರ್ಥಿನಿ ಹತ್ತಿದ್ದಳು. ಆಕೆ ಕುಳಿತ ಸೀಟಿನಲ್ಲಿದ್ದ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸತೊಡಗಿದನೆನ್ನಲಾಗಿದೆ. ಅದನ್ನು ಆಕೆ ವಿರೋಧಿಸಿ ನಿರ್ವಾಹಕನಿಗೆ ತಿಳಿಸಿದಳು. ನಿರ್ವಾಹಕ ಮತ್ತು ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಯುವಕನನ್ನು ಆಕ್ಷೇಪಿಸಿ ತರಾಟೆಗೆತ್ತಿಕೊಂಡಿದ್ದಾರೆ. ಈ ವಿಷಯವನ್ನು ವಿದ್ಯಾರ್ಥಿನಿ ಸುಳ್ಯದ ತನ್ನ ಸಹಪಾಠಿಗಳಿಗೆ ಫೋನ್ ಮಾಡಿ ತಿಳಿಸಿದಳೆನ್ನಲಾಗಿದೆ.
ಬಸ್ಸು ಸುಬ್ರಹ್ಮಣ್ಯಕ್ಕೆ ಬಂದಾಗ ಅನುಚಿತವಾಗಿ ವರ್ತಿಸಿದ್ದ ಆ ಯುವಕ ಬಸ್‌ನಿಂದ ಇಳಿದಿದ್ದು, ವಿದ್ಯಾರ್ಥಿನಿ ಸುಳ್ಯಕ್ಕೆ ಬಂದಳು.ಆ ಯುವಕ ಕೇರಳದ ಪಲ್ಲಂಗೋಡಿಗೆ ತೆರಳುವವನಾದ ಕಾರಣ ಸುಬ್ರಹ್ಮಣ್ಯದಿಂದ ಬೇರೆ ಬಸ್ಸಲ್ಲಿ ಬಂದು ಪೈಚಾರಿನಲ್ಲಿ ಬಸ್‌ನಿಂದ ಇಳಿದ. ಆತನ ಜಾಡು ಹಿಡಿದ ವಿದ್ಯಾರ್ಥಿಗಳು ಆತ ಪೈಚಾರಿನಲ್ಲಿ ಬಸ್‌ನಿಂದ ಇಳಿದ ಕೂಡಲೇ ಆತನನ್ನು ಹಿಡಿದು ಕಾರಲ್ಲಿ ಕೂರಿಸಿಕೊಂಡು ಸುಳ್ಯ ಬಸ್ ನಿಲ್ದಾಣಕ್ಕೆ ಕರೆದೊಯ್ದರು. ಆ ವೇಳೆಗೆ ಬಸ್ ನಿಲ್ದಾಣದಲ್ಲಿ ತೊಂದರೆಗೊಳಗಾದ ಆ ವಿದ್ಯಾರ್ಥಿನಿ ಮತ್ತು ಇತರ ಸಹಪಾಠಿಗಳು ಕಾದು ನಿಂತಿದ್ದರು. ಬಸ್ ನಿಲ್ದಾಣದಲ್ಲಿ ಎಲ್ಲರೂ ಸೇರಿ ಆತನಿಗೆ ಥಳಿಸಿದರೆನ್ನಲಾಗಿದೆ. ಆ ವೇಳೆಗೆ ಅಲ್ಲಿಗೆ ಬಂದ ಪೊಲೀಸರು ಗುಂಪಿನಿಂದ ಯುವಕನನ್ನು ಬಿಡಿಸಿ ಆಸ್ಪತ್ರೆಗೆ ಕಳುಹಿಸಿದರೆಂದು ತಿಳಿದು ಬಂದಿದೆ. ಆರೋಪಿ ಯುವಕ ಕಾಸರಗೋಡು ಜಿಲ್ಲೆ ಪಳ್ಳಂಗೋಡು ನಿಯಾಝ್ ಎಂಬವನಾಗಿದ್ದು, ಆತನ ಮೇಲೆ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಯಾಝ್ ಬಳಿಕ ತನ್ನ ಬಂಧುಗಳೊಂದಿಗೆ ಹೋಗಿ ಮುಳ್ಳೇರಿಯಾದ ಸರ್ಕಾರಿ ಆಸ್ಪತ್ರೆಗೆ ದಾಖಲಾದನೆಂದು ತಿಳಿದು ಬಂದಿದೆ. ಇದರಿಂದಾಗಿ, ಸ್ವಲ್ಪ ಹೊತ್ತು ಯುವಕ ಕಾಣೆಯಾದ ಎಂಬುದು ಗೊಂದಲಕ್ಕೂ ಕಾರಣವಾಯಿತು.ಹಿರಿಯ ಪೊಲೀಸರ್ ಅಧಿಕಾರಿಗಳು ಸುಳ್ಯಕ್ಕೆ ಭೇಟಿ ನೀಡಿದ್ದು, ಹಿಂದೂ ಸಂಘಟನೆಯ ಕೆಲವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.