ಮೂಲಸೌಕರ್ಯ ವ್ಯವಸ್ಥೆಗಾಗಿ ವಿಧ್ಯಾರ್ಥಿಗಳಿಂದ ಧರಣಿ

| Published : May 12 2024, 01:22 AM IST

ಸಾರಾಂಶ

ನಗರದ ಆಕಾಶವಾಣಿ ಹಿಂಭಾಗ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನೀಡುವ ತಿಂಡಿ, ಊಟ, ಶೌಚಾಲಯ, ಕುಡಿಯುವ ನೀರು, ಬೆಡ್ ಸರಿಪಡಿಸುವಂತೆ ಆಗ್ರಹಿಸಿ ಹಾಸ್ಟೇಲ್ ನ ವಿದ್ಯಾರ್ಥಿಗಳು ಶನಿವಾರದಂದು ಬೆಳಿಗ್ಗೆ ಧಿಡೀರ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಆಕಾಶವಾಣಿ ಹಿಂಭಾಗ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನೀಡುವ ತಿಂಡಿ, ಊಟ, ಶೌಚಾಲಯ, ಕುಡಿಯುವ ನೀರು, ಬೆಡ್ ಸರಿಪಡಿಸುವಂತೆ ಆಗ್ರಹಿಸಿ ಹಾಸ್ಟೇಲ್ ನ ವಿದ್ಯಾರ್ಥಿಗಳು ಶನಿವಾರದಂದು ಬೆಳಿಗ್ಗೆ ಧಿಡೀರ್ ಪ್ರತಿಭಟನೆ ನಡೆಸಿದಲ್ಲದೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸರಿಪಡಿಸುವವರೆಗೂ ಇಲ್ಲಿಂದ ಹೋಗುವುದಿಲ್ಲ. ಉಪವಾಸ ಸತ್ಯಗ್ರಹ ಮಾಡುವುದಾಗಿ ಎಚ್ಚರಿಸಿ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.

ಹಾಸ್ಟೇಲ್ ವಿದ್ಯಾರ್ಥಿಗಳು ಮಾಧ್ಯಮದೊಂದಿಗೆ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೇಲ್ ನಲ್ಲಿ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದ್ದು, ಈ ಹಾಸ್ಟೇಲ್ ವಾರ್ಡನ್ ದೇವಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್ ನಮಗೆ ಯಾವ ಸ್ಪಂದನೆ ಮಾಡುತ್ತಿಲ್ಲ. ಹಾಸ್ಟೇಲ್ ನಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆ ಊಟ ಸೇವನೆ ಮಾಡಲು ಹೋದರೆ ಪ್ರತಿಯೊಂದರಲ್ಲೂ ಹುಳ ಸಿಗುತ್ತದೆ. ಈ ಬಗ್ಗೆ ದೂರು ಹೇಳಲು ಹೋದರೇ ಆಧಿಕಾರಿಗಳು ಸರಿ ಮಾಡುವುದಾಗಿ ಹೇಳಿ ಭರವಸೆ ನೀಡುತ್ತಾರೆ. ಆದರೇ ಸರಿಪಡಿಸುವುದಿಲ್ಲ ಎಂದರು.

ತಾಲೂಕು ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿ ಪ್ರಶ್ನೆ ಮಾಡಿದರೇ ಅಂತಹ ಹುಡುಗರನ್ನು ಗುರುತಿಸಿ ಬೇರೆ ಹಾಸ್ಟೇಲ್ ಗೆ ಸಾಗಿಸುತ್ತಾರೆ. ಇನ್ನು ಹಾಸ್ಟೇಲ್ ನಲ್ಲಿ ಇರಲು ಅವಕಾಶ ಕೊಡದೆ ಕಳುಹಿಸುವುದು. ಇನ್ನು ಮಲಗಲು ಬೆಡ್ ಕೇಳಿದರೇ ಸರ್ಕಾರಕ್ಕೆ ಕೇಳಬೇಕು. ಆದರೇ ಸರ್ಕಾರವೇ ಕೇಳುತ್ತಿಲ್ಲ ಎಂದು ಸಚಿವರ ಮೇಲೆ ದೂರುತ್ತಾರೆ. ಈ ಹಿಂದೆ ನೀರಿನ ಸಮಸ್ಯೆ ಬಂದಾಗಲು ಇದೆ ರೀತಿ ಪ್ರತಿಭಟನೆ ಮಾಡಿದಾಗ ಬಗೆಹರಿಸಿಕೊಟ್ಟಿದ್ದರು.

ಆದರೇ ಫಿಲ್ಟರ್ ಕೆಟ್ಟುಹೋಗಿ ಕುಡಿಯುವ ನೀರಿಗೆ ಈಗಲು ಕೂಡ ಸಮಸ್ಯೆ ಹಾಗೆ ಉಳಿದಿದೆ. ಶೌಚಾಲಯ ವಿಚಾರಕ್ಕೆ ಬಂದರೇ ಸ್ವಚ್ಛತೆ ಮಾಡಿಸುವುದಿಲ್ಲ. ಪ್ರಶ್ನೆ ಮಾಡಿದರೇ ನೀವೆ ತೊಳೆದುಕೊಳ್ಳುವಂತೆ ಸೂಚಿಸುತ್ತಾರೆ. ಹೆಚ್ಚು ಒತ್ತಾಯ ಮಾಡಿದರೇ ನಮಗೆ ಬೆದರಿಕೆ ಹಾಕಿ ನಿಮಗೆ ಕೇಳಲು ಅಧಿಕಾರ ಇಲ್ಲ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.

ಪ್ರತಿಭಟನೆ ಮಾಡಲು ಮುಂದಾದವರಿಗೆ ಬೇರೆ ಹಾಸ್ಟೇಲ್ ಗೆ ವರ್ಗಾವಣೆ ಮಾಡುತ್ತಾರೆ ಇಲ್ಲವೇ ಹಾಸ್ಟೇಲ್ ನಿಂದಲೆ ಹೊರಗೆ ಹಾಕುವುದಾಗಿ ತಮ್ಮ ಅಳಲು ತೋಡಿಕೊಂಡರು. ಈ ಹಾಸ್ಟೇಲ್ ನಲ್ಲಿ ಊಟದ ವಿಚಾರ ಬಂದರೆ ಸಾಂಬಾರು ಮಾಡಿದರೇ ಆದರೇ ಅದರಲ್ಲಿ ನೀರು ಹೆಚ್ಚು ಇರುತ್ತದೆ. ವಾರ ಪೂರ್ತಿ ಆಲುಗೆಡ್ಡೆ ಬಿಟ್ಟರೇ ಯಾವ ತರಕಾರಿ ಹಾಕುವುದಿಲ್ಲ. ಇನ್ನು ತಿಂಡಿ ವಾರಪೂರ್ತಿ ಫಲಾವ್ ಬಿಟ್ಟರೇ ಯಾವ ತಿಂಡಿ ಮಾಡುವುದಿಲ್ಲ. ಫಲಾವು ಕೂಡ ಸರಿಯಾಗಿ ಬೆಂದಿರುವುದಿಲ್ಲ. ಈ ಬಗ್ಗೆ ದೂರು ನೀಡಿದರೇ ನಾವು ಮಾಡುವುದು ಹೀಗೆ ತಿನ್ನುವುದಾದರೇ ತಿನ್ನಬಹುದು, ಇಲ್ಲ ಹೋಗಿ ಎಂದು ಉಢಾಪೆ ಉತ್ತರ ಕೊಡುತ್ತಾರೆ ಎಂದು ದೂರಿದರು. ನಾವು ದಲಿತರು ಎನ್ನುವ ಕಾರಣಕ್ಕೆ ಈ ರೀತಿ ಕಾಣುತ್ತಿದ್ದಾರೆ. ಆಗಾದರೇ ದಲಿತರಾಗಿ ಸಿಗಬೇಕಾದ ಸೌಕರ್ಯ ಕೇಳುವುದೇ ಬೇಡವೇ ಎಂದು ಪ್ರಶ್ನೆ ಮಾಡಿದರು.

ನಮ್ಮ ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಇಲ್ಲವಾದರೇ ಅಲ್ಲಿವರೆಗೂ ಉಪವಾಸ ಸತ್ಯಗ್ರಹ ಮಾಡುವುದಾಗಿ ಹೇಳಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಉಪವಾಸ ನಡೆಸಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ವಿದ್ಯಾರ್ಥಿ ಸಂಘಟನೆಗಳಲ್ಲಿ ಬೆಂಬಲ ಕೋರಲಾಗಿದ್ದು, ಈ ಸಮಸ್ಯೆ ಏನಾದರೂ ಬಗೆಹರಿಸದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು. ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ಕೊಡಲಾಗುತ್ತಿದೆ ಎಂದರು. ಇದೆ ವೇಳೆ ಪ್ರತಿಭಟನೆಯಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್, ಪ್ರತಾಪ್, ಸುಮನ್ ಶಿವಕುಮಾರ್, ಶರತ್, ಆಕಾಶ್, ಪ್ರೀತಮ್, ಚಿದಂಬರ ಮತ್ತಿತರಿದ್ದರು.