ಮಂಜೇಶ್ವರ ತಾಲೂಕು ಪೈವಳಿಕೆ ಕಾಯರ್‌ಕಟ್ಟೆ ಸರ್ಕಾರಿ ಪ್ರೌಢಶಾಲೆ ಆವರಣ ಮೇ 2ರಂದು ಹಳೆ ವಿದ್ಯಾರ್ಥಿಗಳ 30 ವರ್ಷಗಳ ಬಳಿಕದ ಪುನರ್ ಮಿಲನಕ್ಕೆ ಸಾಕ್ಷಿಯಾಯಿತು. ಇದೇ ಸಂದರ್ಭ ಗುರುವಂದನೆ ನೆರವೇರಿತು.
ಮಂಗಳೂರು: ಮಂಜೇಶ್ವರ ತಾಲೂಕು ಪೈವಳಿಕೆ ಕಾಯರ್‌ಕಟ್ಟೆ ಸರ್ಕಾರಿ ಪ್ರೌಢಶಾಲೆ ಆವರಣ ಮೇ 2ರಂದು ಹಳೆ ವಿದ್ಯಾರ್ಥಿಗಳ 30 ವರ್ಷಗಳ ಬಳಿಕದ ಪುನರ್ ಮಿಲನಕ್ಕೆ ಸಾಕ್ಷಿಯಾಯಿತು. ಇದೇ ಸಂದರ್ಭ ಗುರುವಂದನೆ ನೆರವೇರಿತು.
1995-96ನೇ ಬ್ಯಾಚಿನ ಸುಮಾರು 65 ಕ್ಕೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು 30 ವರ್ಷಗಳ ನಂತರ ತಾವು ಕಲಿತ ಶಾಲೆಯ ನೆಲದಲ್ಲಿ ಹಳೆಯ ನೆನಪುಗಳನ್ನು ಮತ್ತೆ ಒಂದುಗೂಡಿಸಲು ದೂರ ದೂರದೂರದಿಂದ ಆಗಮಿಸಿದ್ದರು. ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ಶಾಲಾ ಗೇಟು ತೆರೆದು ಸುಮಾರು 65 ಕ್ಕಿಂತಲೂ ಹೆಚ್ಚ ಮಂದಿ ಒಳ ಬಂದು ಅಸೆಂಬ್ಲಿಯಲ್ಲಿ ಸಾಲಾಗಿ ನಿಂತು ವಂದೇ ಮಾತರಂ ಪ್ರಾರ್ಥನಾ ಗೀತೆ ಹಾಡಿದರು. ನಂತರ ತಮ್ಮ ತಮ್ಮ ತರಗತಿಗಳಿಗೆ ಚದುರುವ ಮೂಲಕ ಹಳೆಯ ತಮ್ಮ ಶಾಲಾ ದಿನದ ಶೈಲಿಯನ್ನು ಪುನರ್ ಸೃಷ್ಟಿಸಿದರು.ತಮಗೆ ಕಲಿಸಿದ 20ಕ್ಕೂ ಅಧಿಕ ಗುರುಗಳನ್ನು ವೇದಿಕೆಗೆ ಹೂ ಹಾಕಿ ಬರಮಾಡಿಕೊಂಡರು. ಗುರುಗಳೆಲ್ಲರೂ ಸೇರಿ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಪ್ರತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗುರುಗಳ ಪಾದ ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ನೆನಪಿನ ಕಾಣಿಕೆಯೊಂದಿಗೆ ಗುರುದಕ್ಷಿಣೆ ಸಮರ್ಪಿಸಲಾಯಿತು.ಗುರುಗಳೆಲ್ಲರೂ ಆಶೀರ್ವಾದದ ನುಡಿಗಳನ್ನಾಡಿ ಹಳೆಯ ಅವರ ನೆನಪುಗಳನ್ನು ಬಿಚ್ಚಿಟ್ರು. ತಮ್ಮ ಅನಿಸಿಕೆಗಳ ಮೂಲಕ ಕೆಲವು ವಿದ್ಯಾರ್ಥಿಗಳು ತಮ್ಮ ಬಾಲ್ಯದ ದಿನಗಳಿಗೆ ಮತ್ತೊಮ್ಮೆ ಎಲ್ಲರನ್ನೂ ಕರೆದೊಯ್ದರು. ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಾಪಿಕೆಯರಿಗೆ ಬಾಗಿನ ಅರಸಿನ ಕುಂಕುಮಗಳನ್ನು ನೀಡುವುದರ ಮೂಲಕ ಗುರುವಂದನೆ ಕಾರ್ಯಕ್ರಮಕ್ಕೆ ಔಪಚಾರಿಕ ತೆರೆ ಎಳೆಯಲಾಯಿತು.ಮಧ್ಯಾಹ್ನದ ಭೋಜನದ ನಂತರ ಆಟ ಹಾಡು ಹರಟೆ ಎಲ್ಲದರ ಜತೆಗೆ ಎಲ್ಲರೂ ನೆನಪುಗಳ ಗುಚ್ಛದೊಂದಿಗೆ ಭಾರವಾದ ಹೃದಯದಿಂದ ತಮ್ಮ ತಮ್ಮ ಮನೆಗಳಿಗೆ ಮರಳಿದರು.