ಸಾರಾಂಶ
ಗೋಕರ್ಣ: ರಾಘವೇಶ್ವರ ಭಾರತೀ ಶ್ರೀ ಅಶೋಕೆಯಲ್ಲಿ ಕೈಗೊಂಡಿರುವ ಸ್ವಭಾಷಾ ಚಾತುರ್ಮಾಸ್ಯದ ವೇಳೆ ಭಂಡಾರಿ ಸಮಾಜದ ವಿದ್ಯಾರ್ಥಿಯೊಬ್ಬರು ಭಾಷಾ ಕಾಣಿಕೆ ಸಮರ್ಪಿಸಿದರು.
ಯಾವುದೇ ಸಮಾಜದವರು ಕನ್ನಡ ಮಾತನಾಡುವ ವೇಳೆ ಬಳಸಿದ ಪ್ರತಿ ಇಂಗ್ಲಿಷ್ ಶಬ್ದಕ್ಕೆ ತಪ್ಪು ಕಾಣಿಕೆ ತೆಗೆದಿಟ್ಟು ಭಾಷಾ ಕಾಣಿಕೆ ರೂಪದಲ್ಲಿ ಸಮರ್ಪಿಸಿರುವುದು ಇದೇ ಮೊದಲು.ಸ್ವಭಾಷೆಯ ಬಗ್ಗೆ ಅರಿವು ಮತ್ತು ಆತ್ಮಾಭಿಮಾನ ಮೂಡಿಸುವ ಉದ್ದೇಶದಿಂದ ಚಾತುರ್ಮಾಸ್ಯ ಕೈಗೊಳ್ಳುವ ಪೂರ್ವಭಾವಿಯಾಗಿ ಶ್ರೀಗಳು, ಕನ್ನಡದಲ್ಲಿ ಇತರ ಭಾಷೆಗಳನ್ನು ಮಿಶ್ರ ಮಾಡದಂತೆ ಕರೆ ನೀಡಿದ್ದರು. ಸ್ವಾತಂತ್ರ‍್ಯ ಪೂರ್ವದಲ್ಲಿ ಬಿಎಂಶ್ರೀ ಕನ್ನಡ ಉಳಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮ ಉಲ್ಲೇಖಿಸಿದ ಶ್ರೀಗಳು, ನಾವು ಕನ್ನಡ ಮಾತನಾಡುವ ವೇಳೆ ಬಳಸುವ ಪ್ರತಿ ಇಂಗ್ಲಿಷ್ ಪದಕ್ಕೆ ಒಂದು ನಿರ್ದಿಷ್ಟ ದಂಡ ಮೊತ್ತ ತೆಗೆದಿಟ್ಟು ಸಮರ್ಪಿಸುವಂತೆ ಸಲಹೆ ನೀಡಿದ್ದರು. ಆ ಮೂಲಕ ಸ್ವಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈಜೋಡಿಸೋಣ ಎಂದು ಕರೆ ನೀಡಿದ್ದರು.
ಶ್ರೀಗಳು ಬೆಂಗಳೂರಿನಲ್ಲಿ ನೀಡಿದ ಆಶೀರ್ವಚನದ ಯೂಟ್ಯೂಬ್ ಅವತರಣಿಕೆ ವೀಕ್ಷಿಸಿದ ಕುಮಟಾ ಎ.ವಿ. ಬಾಳಿಗಾ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ ಶ್ರೀಧರ ಮಂಜುನಾಥ ಭಂಡಾರಿ, ಆ ಬಳಿಕ ಕನ್ನಡದಲ್ಲೇ ಮಾತನಾಡುವ ಪಣತೊಟ್ಟು, ಮಾತನಾಡುವ ವೇಳೆ ಗಮನಕ್ಕೆ ಬಂದ ಇಂಗ್ಲಿಷ್ ಪದಗಳಿಗೆ ನಿರ್ದಿಷ್ಟ ಮೊತ್ತದ ತಪ್ಪುಕಾಣಿಕೆ ತೆಗೆದಿಟ್ಟು, ಮಂಗಳವಾರ ಸಮಾಜದ ಸ್ವರ್ಣ ಪಾದುಕೆ ಪೂಜೆ ಸಂದರ್ಭದಲ್ಲಿ ಭಾಷಾಕಾಣಿಕೆ ಸಮರ್ಪಿಸಿ ಆದರ್ಶ ಮೆರೆದರು.ಸ್ವರ್ಣಪಾದುಕೆ ಪೂಜೆ ನೆರವೇರಿಸಿದ ಭಂಡಾರಿ ಸಮಾಜದ ಎಲ್ಲ ಮನೆಗಳಿಗೆ ವಿತರಿಸಲು ಶ್ರೀಗಳು ಸಮಾಜದ ಮುಖಂಡರಿಗೆ ಸಮಷ್ಟಿ ಮಂತ್ರಾಕ್ಷತೆ ಅನುಗ್ರಹಿಸಿದರು. ಭಂಡಾರಿ ಸಮಾಜದ ಅಧ್ಯಕ್ಷ ಶಿವ ಭಂಡಾರಿ, ಉಪಾಧ್ಯಕ್ಷ ನಾರಾಯಣ ಎಸ್ ಭಂಡಾರಿ, ವಿನಾಯಕ ಎಂ.ಭಂಡಾರಿ, ಹರಿಹರ ಎಸ್. ಭಂಡಾರಿ, ರವಿ ಎಂ.ಭಂಡಾರಿ ಮತ್ತಿತರರು ನೇತೃತ್ವ ವಹಿಸಿದ್ದರು.
ಸರ್ವ ಸಮಾಜಗಳ ಸಂಯೋಜಕ ಕೆ.ಎನ್. ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ವಿವಿವಿ ಆಡಳಿತಾಧಿಕಾರಿ ಡಾ. ಟಿ.ಜಿ. ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ಸಂದರ್ಭದಲ್ಲಿ ಮಂಗಳವಾರ ಶತರುದ್ರ ಮತ್ತು ಸರ್ಪಸೂಕ್ತ ಹವನ ನಡೆಯಿತು.