ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನಿರಂತರ ಕಲಿಕೆ ಅಗತ್ಯ: ನಿರ್ಭಯಾನಂದ ಶ್ರೀ

| Published : Oct 27 2024, 02:38 AM IST / Updated: Oct 27 2024, 02:39 AM IST

ಸಾರಾಂಶ

ಸ್ಪರ್ಧೆಗಳಲ್ಲಿ ಪೂರ್ವಾಗ್ರಹ ಪೀಡಿತ ಮನಸ್ಥಿತಿಗೆ ಒಳಗಾಗದೇ ನ್ಯಾಯಯುತವಾಗಿ ತೀರ್ಪು ನೀಡಿ ಶಾಲಾ ಮಕ್ಕಳ ಪ್ರತಿಭಾ ವಿಕಾಸಕ್ಕೆ ನಾಲ್ಕು ನಿಟ್ಟಿನಿಂದ ಪ್ರೋತ್ಸಾಹಿಸಬೇಕು ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರು ಹೇಳಿದರು.

ಹುಬ್ಬಳ್ಳಿ: ಜ್ಞಾನಾರ್ಜನೆಗೆ ನಿರಂತರ ಕಲಿಕೆ ಅಗತ್ಯವಾಗಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮರುಳಾಗದೇ ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕು ಎಂದು ಗದಗ ಮತ್ತು ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು.

ಇಲ್ಲಿಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ 73ನೇ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಕಲಿಕೆಯು ನಿಂತ ನೀರಲ್ಲ, ಅದು ಹರಿಯುವ ನೀರಾಗಬೇಕು. ಪಠ್ಯ ಪುಸ್ತಕಗಳ ಜತೆಗೆ ಆದರ್ಶ ವ್ಯಕ್ತಿಗಳಾದ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಮತ್ತಿತರ ಮಹನೀಯರ ಪುಸ್ತಕಗಳನ್ನು ಓದಬೇಕು. ಅವರ ಜೀವನ ಚರಿತ್ರೆ-ಸಾಧನೆಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಏನನ್ನು ಓದಬೇಕು? ಏನನ್ನು ಓದಬಾರದು? ಏನನ್ನು ನೋಡಬೇಕು? ಏನನ್ನು ನೋಡಬಾರದು? ಏನನ್ನು ಕೇಳಬೇಕು? ಏನನ್ನು ಕೇಳಬಾರದು? ಎಂಬ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಒಟ್ಟಾರೆ ಜ್ಞಾನವನ್ನು ಮೇಲ್ಮಟ್ಟಕ್ಕೆ ಏರಿಸಿಕೊಳ್ಳುವುದೇ ನಿಜವಾದ ವಿದ್ಯಾರ್ಥಿ ಸಂಸೃತಿ ಎಂದರು.

ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಮತ್ತು ಜ್ಞಾನದ ದಾಹ ಇರಬೇಕು. ಆಲದ ಮರದ ಬೀಜ ಸಾಸಿವೆಗಿಂತ ಚಿಕ್ಕದು. ಆದರೆ, ಆಲದ ಮರ ಬೆಟ್ಟದಷ್ಟು ಬೆಳೆಯುತ್ತದೆ. ಇಂತಹ ಗುರಿ ಹೊಂದಿದಾಗ ಮಾತ್ರ ಸಾಧನೆಗೆ ದಾರಿಯಾಗುತ್ತದೆ ಎಂದರು.

ಕಾಲೇಜಿನ ಪ್ರಾಚಾರ್ಯೆ ಡಾ. ಉಮಾ ನೇರ್ಲೆ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಅಣ್ಣಿಗೇರಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗೆ ಸನ್ಮಾನ

ಸ್ನಾತಕೋತ್ತರ ಪದವಿ ಮತ್ತು ಸ್ನಾತಕ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಬಂಗಾರದ ಪದಕ ಪಡೆದುಕೊಂಡಿರುವ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ಆಕಾಶ್ ತಿಮ್ಮಣ್ಣ ನಾಯ್ಕ (ಎಂ.ಎಸ್ಸಿ, ಗಣಿತ), ಕವನಾ ಕೊಂಡಗುಳಿ (ಬಿ.ಎ, ರಾಜ್ಯಶಾಸ್ತ್ರ) ಮತ್ತು ಮೆಹ್ತಾಬ್ ಎ. ನವಲೂರ (ಬಿ.ಎ, ಮನೋಶಾಸ್ತ್ರ) ಅವರನ್ನು ಸನ್ಮಾನಿಸಲಾಯಿತು.

ಪ್ರಾಣಿಶಾಸ್ತ್ರ ಉಪನ್ಯಾಸಕಿ ಸೌಮ್ಯಾ ಬಣವಿ, ಕಾಲೇಜು ಒಕ್ಕೂಟದ ಅಧ್ಯಕ್ಷೆ ಮತ್ತು ಮನೋಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ಹಾನಗಲ್, ವಿದ್ಯಾರ್ಥಿನಿ ಸಂಜನಾ ಮೊಕಾಶಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಲೆಫ್ಟಿನಂಟ್ ಸಿ.ಕೆ. ಪಾಟೀಲ, ಕಾಲೇಜು ಒಕ್ಕೂಟದ ಕಾರ್ಯದರ್ಶಿ ಅಜಯ್ ಹರಿಜನ, ಇಂಗ್ಲಿಷ್ ಉಪನ್ಯಾಸಕ ವೈ. ದೇವದತ್ತ, ಜಿಮಖಾನಾ ಕಾರ್ಯದರ್ಶಿ ತೇಜಸ್ವಿನಿ ಬೆಲ್ಲದ ಸೇರಿದಂತೆ ಹಲವರಿದ್ದರು.