ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೀದರ್‌ನಲ್ಲಿ ಜನಿವಾರ ತೆಗೆಯದ ಬ್ರಾಹ್ಮಣ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡದ, ರಾಜ್ಯದ ಇತರೆಡೆ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಿದ ಸಿಇಟಿ ಪರೀಕ್ಷಾ ಪ್ರಾಧಿಕಾರದ ನಿಲುವು ಖಂಡಿಸಿ ಪಟ್ಟಣದಲ್ಲಿ ತಾಲೂಕು ಬ್ರಾಹ್ಮಣ ಸಮುದಾಯ ಪ್ರತಿಭಟನಾ ಮೆರವಣಿಗೆ ನಡೆಸಿತು.ಪಟ್ಟಣದ ಹೋಟೆಲ್ ರಾಮದಾಸ್ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಪ್ರವಾಸಿ ಮಂದಿರ ವೃತ್ತದ ಮಾರ್ಗವಾಗಿ ಪ್ರಮುಖ ರಸ್ತೆಗಳಲ್ಲಿ ಸಿಇಟಿ ಪರೀಕ್ಷಾ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ನಂತರ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.ತಾಲೂಕು ಬ್ರಾಹ್ಮಣ ಮಹಾಸಭಾ ಘಟಕದ ಅಧ್ಯಕ್ಷ ಅರವಿಂದ್ ಕಾರಂತ ಮಾತನಾಡಿ, ಜನಿವಾರ ತೆಗೆಸಲು ಯತ್ನಿಸಿದ ಮತ್ತು ಜನಿವಾರವನ್ನು ಕತ್ತರಿಸಿದ ಪರೀಕ್ಷಾ ಕೇಂದ್ರದ ಅಧಿಕಾರಿಗಳ ನಿಲುವನ್ನು ಖಂಡಿಸಿದರು. ಇದು ಒಂದು ಪರೀಕ್ಷಾ ಕೇಂದ್ರದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲ. ರಾಜ್ಯದ ಮೂರ್‍ನಾಲ್ಕು ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಿವಾರದ ಹಿಂದೆ ಯಾವುದೋ ಒಂದು ವ್ಯವಸ್ಥಿತವಾದ ಲಾಬಿ ಕೆಲಸ ಮಾಡಿರುವಂತಿದೆ. ರಾಜ್ಯ ಸರ್ಕಾರ ಜನಿವಾರ ತೆಗೆಸಿದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರ ನಡೆಸಿದ ಶಕ್ತಿಗಳನ್ನು ಬಯಲಿಗೆಳೆದು ಕಾನೂನಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.ಜನಿವಾರ ಬ್ರಾಹ್ಮಣ ಸಮುದಾಯಕ್ಕೆ ಅತ್ಯಂತ ಪವಿತ್ರವಾದುದು. ಬ್ರಹ್ಮೋಪದೇಶದ ಸಮಯದಲ್ಲಿ ಜನಿವಾರವನ್ನು ಧರಿಸಿ ಗಾಯಿತ್ರಿ ಮಂತ್ರೋಪದೇಶವನ್ನು ಪಡೆಯುವುದು ಬ್ರಾಹ್ಮಣರ ಹಕ್ಕು. ಸಂವಿಧಾನದತ್ತವಾದ ಧಾರ್ಮಿಕ ಹಕ್ಕಿಗೆ ಚ್ಯುತಿ ತಂದವರ ವಿರುದ್ಧ ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರ ಪ್ರಸ್ತಾಪಿತ ಜಾತಿ ಗಣತಿ ವರದಿಯೂ ಅವೈಜ್ಞಾನಿಕವಾಗಿದೆ. ಕಾತರಾಜು ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಡಾ.ಎಸ್.ಕೃಷ್ಣಮೂರ್ತಿ ಮಾತನಾಡಿ, ಜನಿವಾರದ ಪ್ರಕರಣ ಕೇವಲ ಬ್ರಾಹ್ಮಣ ಸಮುದಾಯದ ನಂಬಿಕೆಗಳ ಮೇಲೆ ನಡೆಸಿರುವ ದಾಳಿಯಲ್ಲ. ಬದಲಾಗಿ ಸಮಸ್ತ ಹಿಂದೂ ಸಮುದಾಯದ ನಂಬಿಕೆಗಳ ಮೇಲೆ ನಡೆಸಿರುವ ವ್ಯವಸ್ಥಿತ ದಾಳಿಯಾಗಿದೆ ಎಂದು ಕಿಡಿಕಾರಿದರು.ಇಂದು ಜನಿವಾರ ತೆಗೆಸಿದವರು ನಾಳೆ ಶೂದ್ರರ ಸೊಂಟದಲ್ಲಿರುವ ಉಡುದಾರವನ್ನೂ ತೆಗೆಸುತ್ತಾರೆ. ಇದರ ವಿರುದ್ಧ ಸಮಸ್ತ ಹಿಂದೂ ಸಮಾಜ ಎದ್ದು ನಿಲ್ಲಬೇಕು. ತಪ್ಪಿರತಸ್ಥರಿಗೆ ಕಠಿಣ ಶಿಕ್ಷೆಯಾಬೇಕೆಂದು ಆಗ್ರಹಿಸಿದರು.
ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ಮಾತನಾಡಿ, ಬ್ರಾಹ್ಮಣ ಸಮುದಾಯದ ಹೋರಾಟಕ್ಕೆ ಒಕ್ಕಲಿಗ ಸಮುದಾಯದ ಬೆಂಬಲವನ್ನು ಪ್ರಕಟಿಸಿದರು. ಹಿಜಾಬ್ ಪರ ಸಂಘಟಿತ ಧ್ವನಿಯೆತ್ತಿದ್ದ ಕಾಂಗ್ರೆಸ್ಸಿಗರು ಜನಿವಾರದ ಬಗ್ಗೆ ಮಾತನಾಡದಿರುವುದನ್ನು ಖಂಡಿಸಿದರು.ಪ್ರತಿಭಟನೆಯಲ್ಲಿ ಮಹಾಸಭಾ ತಾಲೂಕು ಉಪಾಧ್ಯಕ್ಷ ಕೆ.ಎನ್.ರಘುರಾಂ ನಾಡಿಗ್, ಕಾರ್ಯದರ್ಶಿ ಎಸ್.ಆರ್. ಸುಬ್ಬನರಸಿಂಹ, ಸಹ ಕಾರ್ಯದರ್ಶಿ ಎಸ್.ಬಿ.ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆ.ಎಸ್.ಸತೀಶ್, ಕುಪ್ಪಹಳ್ಳಿ ಕೆ.ಎಸ್.ಸುಬ್ರಹ್ಮಣ್ಯ, ಕಾನೂನು ಸಲಹೆಗಾರ ಜಿ.ಆರ್.ಅನಂತರಾಮಯ್ಯ, ಮಹಿಳಾ ಘಟಕದ ಸುಮಾ ಶ್ರೀನಿವಾಸ್, ಚೈತ್ರ, ರೇಖಾ ಸೇರಿದಂತೆ ನೂರಾರು ವಿಪ್ರರು ಭಾಗವಹಿಸಿದ್ದರು.