ವಿದ್ಯಾರ್ಥಿಗಳ ಸಾಧನೆ ಎನ್ನುವುದು ವಿದ್ಯಾಸಂಸ್ಥೆಯ ಘನತೆ, ಶಿಸ್ತು ಮತ್ತು ಮೌಲ್ಯಗಳನ್ನು ಸಮಾಜದ ಮುಂದೆ ಪ್ರತಿಬಿಂಬಿಸುವ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿದ್ಯಾರ್ಥಿಗಳ ಸಾಧನೆ ಎನ್ನುವುದು ವಿದ್ಯಾಸಂಸ್ಥೆಯ ಘನತೆ, ಶಿಸ್ತು ಮತ್ತು ಮೌಲ್ಯಗಳನ್ನು ಸಮಾಜದ ಮುಂದೆ ಪ್ರತಿಬಿಂಬಿಸುವ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಿವಿಧ ಎಂಜಿನಿಯರಿಂಗ್, ಎಂಬಿಎ, ಎಂಸಿಎ ವಿಭಾಗಗಳಲ್ಲಿ, ವಿಟಿಯು ಪರೀಕ್ಷೆ ಹಾಗೂ ಎನ್‌ಪಿಟಿಇಎಲ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪರಿಶ್ರಮ, ಸಾಧನೆ ಮತ್ತು ವ್ಯಕ್ತಿತ್ವದ ಮೂಲಕ ಶಿಕ್ಷಣ ಸಂಸ್ಥೆಯ ಮೌಲ್ಯವನ್ನು ಹಾಗೂ ಸಮಾಜದ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುತ್ತಾರೆ. ಪುರುಷನು ತನ್ನ ಸ್ವಪ್ರಯತ್ನದಿಂದ ದೊಡ್ಡವನಾಗಬಹುದು. ಆದರೆ. ಹೆಣ್ಣು ಹುಟ್ಟಿದ ಕ್ಷಣದಿಂದಲೇ ಮಹಾನ್ ವ್ಯಕ್ತಿತ್ವವಾಗಿರುತ್ತಾಳೆ. ಈ ಮೂಲಕ ಹೆಣ್ಣಿನ ತ್ಯಾಗ, ಮಮತೆ ಮತ್ತು ಜೀವನ ನಿರ್ಮಾಣದ ಪಾತ್ರ ಅತ್ಯಂತ ದೊಡ್ಡದು ಎಂದರು.
ಬುದ್ಧಿಮತ್ತೆ ಮಾತ್ರ ಜೀವನದ ಪೂರ್ಣತೆಯನ್ನು ನೀಡುವುದಿಲ್ಲ. ಅದರೊಂದಿಗೆ ಮೌಲ್ಯಾಧಾರಿತ ಜೀವನ, ಸಂಸ್ಕಾರ ಮತ್ತು ವಿವೇಕ ಬೆಳೆಸಿಕೊಳ್ಳುವುದು ಅಗತ್ಯ. ಹಣ, ಅಧಿಕಾರ ಅಥವಾ ಖ್ಯಾತಿಗಿಂತ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕು.ಮಣ್ಣಿನ ಮಡಿಕೆಯನ್ನು ರೂಪಿಸುವ ಕುಂಬಾರನಿಗೆ ಅದರ ಬೆಲೆ ಗೊತ್ತಿರುವಂತೆ, ಕುಟುಂಬದ ಮೌಲ್ಯವನ್ನು ಸೃಷ್ಟಿಸುವವನಿಗೆ ಅದರ ನಿಜವಾದ ಅರ್ಥ ತಿಳಿಯುತ್ತದೆ ಎಂದು ಹೇಳಿದರು.
ಇಂದಿನ ಯುವ ಸಮೂಹವು ಕೇವಲ ಜನರ ಮೆಚ್ಚುಗೆಗಾಗಿ ಬದುಕುವುದಕ್ಕಿಂತ, ತಮ್ಮ ತನವನ್ನು, ಸಂಸ್ಕಾರವನ್ನು ಮತ್ತು ವ್ಯಕ್ತಿತ್ವವನ್ನು ಉಳಿಸಿಕೊಳ್ಳುವತ್ತ ಕೇಂದ್ರಿಕರಿಸಲಿ.ಬೆಟ್ಟದಷ್ಟು ಬುದ್ಧಿಗಿಂತ, ಮುಷ್ಟಿಯಷ್ಟು ವಿವೇಕವೇ ಶ್ರೇಷ್ಠ ಎಂದು ಸಂದೇಶ ನೀಡಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆದು ಶಿಕ್ಷಣ ಸಂಸ್ಥೆಯಿಂದ ಹೊರಡುವ ಸಂದರ್ಭದಲ್ಲಿ ಕೇವಲ ಅಂಕ ಗಳಿಕೆಯ ಬಗ್ಗೆ ಮಾತ್ರವಲ್ಲದೆ, ತಾವು ಗಳಿಸಿರುವ ನಿಜವಾದ ಜ್ಞಾನ, ಕೌಶಲ್ಯ ಹಾಗೂ ಜೀವನ ಮೌಲ್ಯಗಳ ಬಗ್ಗೆಯೂ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಿದೆ ಎಂದರು.ಈ ನಿಟ್ಟಿನಲ್ಲಿ ಪ್ರಯೋಗಶೀಲ ಕಲಿಕೆ ವಿದ್ಯಾರ್ಥಿಗಳ ಜ್ಞಾನ ವಿಕಸನಕ್ಕೆ ಪೂರಕವಾದ ಪರಿಣಾಮಕಾರಿ ವೇದಿಕೆಯಾಗಿದ್ದು, ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಲು ಹಾಗೂ ಹೊಸ ಆವಿಷ್ಕಾರಗಳತ್ತ ಹೆಜ್ಜೆ ಇಡಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ನಾವೀನ್ಯಪೂರ್ಣ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ತಮ್ಮ ವಿಷಯಾಧಾರಿತ ಜ್ಞಾನವನ್ನು ಪರೀಕ್ಷಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿದರು. ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಕಾರ್ಯಕ್ರಮ ಸಂಯೋಜಕರಾದ ಡಾ.ಎಸ್.ಆರ್.ಅಶ್ವಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಎನ್‌ಪಿಟಿಇಎಲ್ ಸಾಧಕರಿಗೆ ವಿಶೇಷ ಬಹುಮಾನ
ಭಾರತ ಸರ್ಕಾರದ ಅತ್ಯುನ್ನತ ಇ-ಕಲಿಕಾ ವೇದಿಕೆಯಾದ ಎನ್‌ಪಿಟಿಇಎಲ್ (National Programme on Technology Enhanced Learning) 2026 ನೇ ಸಾಲಿನ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದಿದ್ದಾರೆ.ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಅನುರಾಧ.ಕೆ.ಎಂ ಜಾವಾ ಪ್ರೋಗ್ರಾಮ್ಮಿಂಗ್ ವಿಷಯದಲ್ಲಿ (ಶೇ.100 ) ಅಂಕ ಪಡೆದಿದ್ದು, ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಸ್ವಾತಿ.ಜಿ (ಶೇ.99 ), ಇನ್ಫಾರ್ಮೇಶನ್ ಸೈನ್ಸ್ ವಿಭಾಗದ ಶುಭ್ರತಾ ಹೆಗ್ಡೆ (ಶೇ.98 ), ಸಿರಿ.ಎನ್.ಎಸ್ (ಶೇ.98 ) ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಎನ್ಇಎಸ್ ಆಡಳಿತ ಮಂಡಳಿಯಿಂದ ವಿಶೇಷ ನಗದು ಬಹುಮಾನ ಘೋಷಿಸಲಾಯಿತು. ಎನ್‌ಪಿಟಿಇಎಲ್ ಮೂಲಕ ಆನ್‌ಲೈನ್ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮೋಚಿತ ಜ್ಞಾನ, ಪ್ರಮಾಣಪತ್ರದ ಜೊತೆಗೆ, ಉದ್ಯೋಗಾವಕಾಶಗಳ ವೃದ್ಧಿ ಹಾಗೂ ನಿರಂತರ ಕಲಿಕೆಯ ಅವಕಾಶ ದೊರೆಯುವುದು ಗಮನಾರ್ಹ.